ADVERTISEMENT

ಪ್ಯಾಕೇಜ್ ಘೋಷಿಸಿ: ಆಹಾರ ತಲುಪಿಸುವ ಸಿಬ್ಬಂದಿ ಒತ್ತಾಯ

ಆನ್‌ಲೈನ್‌ನಲ್ಲಿ ಪ್ರತಿಭಟನೆ: ಬೇಡಿಕೆಗಳ ಫಲಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 29 ಮೇ 2021, 21:55 IST
Last Updated 29 ಮೇ 2021, 21:55 IST
ಆಹಾರ ವಿತರಣೆ ಸಂಸ್ಥೆಗಳ ಸಿಬ್ಬಂದಿ ಬೇಡಿಕೆಯ ಫಲಕಗಳನ್ನು ಪ್ರದರ್ಶಿಸಿ ಆನ್‌ಲೈನ್‌ನಲ್ಲಿ ಹಂಚಿಕೊಳ್ಳುವ ಮೂಲಕ ಶನಿವಾರ ಪ್ರತಿಭಟನೆ ನಡೆಸಿದರು.
ಆಹಾರ ವಿತರಣೆ ಸಂಸ್ಥೆಗಳ ಸಿಬ್ಬಂದಿ ಬೇಡಿಕೆಯ ಫಲಕಗಳನ್ನು ಪ್ರದರ್ಶಿಸಿ ಆನ್‌ಲೈನ್‌ನಲ್ಲಿ ಹಂಚಿಕೊಳ್ಳುವ ಮೂಲಕ ಶನಿವಾರ ಪ್ರತಿಭಟನೆ ನಡೆಸಿದರು.   

ಬೆಂಗಳೂರು: ಕೊರೊನಾ ವ್ಯಾಪಕವಾಗಿರುವ ಪರಿಸ್ಥಿತಿಯಲ್ಲೂ ಜನರಿಗೆ ಆಹಾರ ತಲು‍ಪಿಸುತ್ತಿರುವ ಸಿಬ್ಬಂದಿಗೆ ಸರ್ಕಾರ ವಿಶೇಷ ಪ್ಯಾಕೇಜ್‌ ಘೋಷಿಸಬೇಕು ಎಂದು ಒತ್ತಾಯಿಸಿ ಯುನೈಟೆಡ್ ಫುಡ್ ಡೆಲಿವರಿ ಪಾರ್ಟ್‌ನರ್ಸ್‌ ಯೂನಿಯನ್ ವತಿಯಿಂದ ಶನಿವಾರ ಆನ್‌ಲೈನ್ ಪ‍್ರತಿಭಟನೆ ನಡೆಯಿತು.

ಆಹಾರ ತಲು‍ಪಿಸುವ ಸಿಬ್ಬಂದಿ ಬೇಡಿಕೆಗಳ ಫಲಕ ಹಿಡಿದುಆನ್‌ಲೈನ್‌ನಲ್ಲಿ ಹಂಚಿಕೊಂಡರು. ಮುಖ್ಯಮಂತ್ರಿ ಹಾಗೂ ಕಾರ್ಮಿಕ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.

‘ಆಹಾರ ಸರಬರಾಜಿನ ಪ್ರಾಮುಖ್ಯ ಅರಿತ ಸರ್ಕಾರ ಲಾಕ್‌ಡೌನ್ ಸಮಯದಲ್ಲಿ ಅಗತ್ಯ ಸೇವೆಯಡಿ ಆಹಾರ ತಲುಪಿಸುವುದಕ್ಕೆ ವಿಶೇಷ ಅವಕಾಶ ಕಲ್ಪಿಸಿದೆ. ಸ್ವಿಗ್ಗಿ, ಜೊಮ್ಯಾಟೊ ಸೇರಿದಂತೆ ಹಲವು ಸಂಸ್ಥೆಗಳ ಮೂಲಕ ಲಕ್ಷಾಂತರ ಜನ ಆಹಾರ ತಲುಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಆರ್ಥಿಕ ಸಮಸ್ಯೆ ಇರುವುದರಿಂದ ಈ ದುರಿತ ಕಾಲಘಟ್ಟದಲ್ಲೂ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಒಕ್ಕೂಟದ ಅಧ್ಯಕ್ಷ ವಿನಯ್ ಸಾರಥಿ ತಿಳಿಸಿದರು.

ADVERTISEMENT

‘ಎರಡನೇ ಅಲೆಯಿಂದ ಆಹಾರ ಖರೀದಿದಾರರ ಸಂಖ್ಯೆ ಕಡಿಮೆಯಾಗಿದೆ. ಮತ್ತೊಂದೆಡೆ ಪೆಟ್ರೋಲ್ ದರ ದುಬಾರಿಯಾಗಿದೆ. ಆಹಾರ ವಿತರಣೆಗಾಗಿ ಹೊರಗಡೆ ಸಂಚರಿಸುವ ಇವರಿಗೆ ಸೋಂಕು ತಗಲುವ ಸಾಧ್ಯತೆ ಹೆಚ್ಚು. ಕಳೆದ ಬಾರಿಯ ಲಾಕ್‌ಡೌನ್ ಅವಧಿಯಲ್ಲೂ ಕಾರ್ಯನಿರ್ವಹಿಸಿದ್ದ ಕಾರ್ಮಿಕರಿಗೆ ಪ್ಯಾಕೇಜ್‌ ಘೋಷಿಸುವಂತೆ ಒತ್ತಾಯಿಸಿದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ, ಈವರೆಗೂ ಯಾವುದೇ ಬೇಡಿಕೆ ಈಡೇರಿಲ್ಲ’ ಎಂದರು.

‘ಸರ್ಕಾರ ಈ ಕೂಡಲೇ ಆಹಾರ ತಲುಪಿಸುವ ಸಿಬ್ಬಂದಿಗಾಗಿ ಪರಿಹಾರ ಪ್ಯಾಕೇಜ್ ಘೋಷಿಸಬೇಕು. ಅವರ ಕುಟುಂಬದವರಿಗೆ ಆದ್ಯತೆ ಮೇರೆಗೆ ಕೋವಿಡ್ ಲಸಿಕೆಯನ್ನು ಉಚಿತವಾಗಿ ಒದಗಿಸಬೇಕು. ಇವರ ರಕ್ಷಣೆಗಾಗಿ ಮಾಸ್ಕ್‌, ಸ್ಯಾನಿಟೈಸರ್ ಹಾಗೂ ಇನ್ನಿತರ ಸುರಕ್ಷತಾ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.