ADVERTISEMENT

ಕೋವಿಡ್: ರೋಗಿಗಳಿಗೆ ಆಹಾರ ಪಟ್ಟಿ ಸಿದ್ಧ

​ಪ್ರಜಾವಾಣಿ ವಾರ್ತೆ
Published 1 ಜುಲೈ 2020, 21:18 IST
Last Updated 1 ಜುಲೈ 2020, 21:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಆಹಾರ ತಜ್ಞರ ಸಲಹೆಯ ಅನುಸಾರ ಕೊರೊನಾ ಸೋಂಕಿತರಿಗೆ ಹಣ್ಣು, ಹಾಲು ಸಹಿತ ಪೌಷ್ಠಿಕ ಆಹಾರವನ್ನು ಇನ್ನು ಮುಂದೆ ಒದಗಿಸಲಾಗುತ್ತದೆ.

ಈ ಸಂಬಂಧ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರು ಸುತ್ತೋಲೆ ಹೊರಡಿಸಿದ್ದಾರೆ. ಕೋವಿಡ್‌ ರೋಗಿಗಳಿಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಅತ್ಯವಶ್ಯಕವಾಗಿದೆ. ಹಾಗಾಗಿ ಉತ್ತಮ ದರ್ಜೆಯ ಪೌಷ್ಠಿಕ ಆಹಾರವನ್ನು ಕಾಲಕಾಲಕ್ಕೆ ಒದಗಿಸಬೇಕು. ಬೆಳಗ್ಗಿನ ಉಪಾಹಾರವನ್ನು 7 ಗಂಟೆಗೆ, ಮಧ್ಯಾಹ್ನದ ಊಟವನ್ನು 1 ಗಂಟೆಗೆ, ರಾತ್ರಿ ಊಟವನ್ನು 7 ಗಂಟೆಗೆ ಕ್ರಮವಾಗಿ ಒದಗಿಸಬೇಕು ಎಂದು ಸೂಚಿಸಿದ್ದಾರೆ. ‌

ಪ್ರತಿವ್ಯಕ್ತಿಗೆ ಆಹಾರದ ವೆಚ್ಚ ₹ 250 ಮೀರದಂತೆ ಕ್ರಮ ವಹಿಸಬೇಕು. ಈ ಮೊತ್ತವನ್ನು ಆಸ್ಪತ್ರೆಯ ಎಆರ್‌ಎಸ್ ನಿಧಿ ಅಥವಾ ಜಿಲ್ಲಾಧಿಕಾರಿಗಳ ಅಧೀನದಲ್ಲಿನ ವಿಪತ್ತು ಪರಿಹಾರ ನಿಧಿಯಿಂದ ಪಡೆದುಕೊಳ್ಳಲು ಆಸ್ಪತ್ರೆಗಳಿಗೆ ತಿಳಿಸಿದ್ದಾರೆ.

ADVERTISEMENT

ರೋಗಿಗಳಿಗೆಬೆಳಗ್ಗಿನ ಉಪಾಹಾರಕ್ಕೆ ಸೋಮವಾರ ರವೆ ಇಡ್ಲಿ, ಮಂಗಳವಾರ ಪೊಂಗಲ್, ಬುಧವಾರ ಸೆಟ್‌ ದೋಸೆ, ಗುರುವಾರ ಅಕ್ಕಿ ಇಡ್ಲಿ, ಶುಕ್ರವಾರ ಬಿಸಿ ಬೇಳೆ ಬಾತ್, ಶನಿವಾರ ಚೌಚೌ ಬಾತ್ ಹಾಗೂ ಭಾನುವಾರ ಸೆಟ್‌ ದೋಸೆ ನೀಡಲಾಗುತ್ತದೆ. ಬೆಳಿಗ್ಗೆ 10 ಗಂಟೆಗೆ ಹಣ್ಣಿನ ಜತೆಗೆ ಗಂಜಿ ಅಥವಾ ಸೂಪ್ ನೀಡಲಾಗುತ್ತದೆ. ಮಧ್ಯಾಹ್ನ ಎರಡು ರೊಟ್ಟಿ ಅಥವಾ ಚಪಾತಿ ಜತೆಗೆ ಅನ್ನ, ಬೇಳೆಸಾರು, ಮೊಸರು ಅಥವಾ ಮೊಟ್ಟೆ ನೀಡಲಾಗುತ್ತದೆ.

ಸಾಯಂಕಾಲ ಬಾಳೆಹಣ್ಣು, ಬಿಸ್ಕತ್ತು ಹಾಗೂ ಮ್ಯಾಂಗೊ ಬಾರ್ ಕೊಡಲಾಗುತ್ತದೆ. ರಾತ್ರಿ ಚಪಾತಿ ಅಥವಾ ರೊಟ್ಟಿಯ ಜತೆಗೆ ಪಲ್ಯ, ಅನ್ನ, ಬೇಳೆ ಸಾರು ಹಾಗೂ ಮೊಸರನ್ನು ಕೊಡಲಾಗುತ್ತದೆ. ರಾತ್ರಿ ಸುವಾಸನೆ ಭರಿತ ಹಾಲನ್ನು ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.