ADVERTISEMENT

ಅರಣ್ಯದೊಳಗಿನ ವಿಶ್ರಾಂತಿಧಾಮಗಳ ಪ್ರವೇಶ ನಿಷೇಧ

ಸುಪ್ರೀಂ ಕೋರ್ಟ್‌ ಆದೇಶ ಪಾಲನೆಗೆ ಮುಂದಾದ ಇಲಾಖೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2018, 14:42 IST
Last Updated 6 ಜುಲೈ 2018, 14:42 IST

ಬೆಂಗಳೂರು: ಅರಣ್ಯದೊಳಗಿನ ವಿಶ್ರಾಂತಿ ಧಾಮಗಳು ಮತ್ತು ಪ್ರವಾಸಿ ಬಂಗಲೆಗಳಿಗೆಪ್ರವಾಸಿಗರ ಪ್ರವೇಶವನ್ನು ಅರಣ್ಯ ಇಲಾಖೆ ನಿಷೇಧಿಸಿದೆ.

ಶುಕ್ರವಾರದಿಂದ ವಿವಿಧ ಅರಣ್ಯ ವಲಯ ಪ್ರದೇಶಗಳ ಅಧಿಕಾರಿಗಳು ಪ್ರವಾಸಿಗರು ಕಾಡಿನೊಳಗೆ ಉಳಿಯುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

‘ಸಂರಕ್ಷಿತ ಅರಣ್ಯದೊಳಗಿನ ವಿಶ್ರಾಂತಿ ಧಾಮಗಳು, ಪ್ರವಾಸಿ ಬಂಗಲೆಗಳನ್ನು ಖಾಸಗಿ ಸಹಭಾಗಿತ್ವದ ಹೆಸರಿನಲ್ಲಿ ಖಾಸಗಿ/ ವಾಣಿಜ್ಯ ಚಟುವಟಿಕೆಗಳಿಗೆ ಅಥವಾ ಘಟಕಗಳಿಗೆ ವರ್ಗಾಯಿಸುವಂತಿಲ್ಲ. ಪ್ರವಾಸೋದ್ಯಮ, ಪರಿಸರ ಪ್ರವಾಸ ಇತ್ಯಾದಿ ಹೆಸರಿನಲ್ಲಿ ಇಲಾಖೆಯ ಆಸ್ತಿಗಳನ್ನು ಬಳಸುವಂತಿಲ್ಲ’ ಎಂದು ಸುಪ್ರೀಂ ಕೋರ್ಟ್‌ ಜುಲೈ 5ರಂದು ನೀಡಿರುವ ಆದೇಶ ಈ ಕ್ರಮಕ್ಕೆ ಕಾರಣ. ಇಂಥ ಧಾಮಗಳನ್ನು ದುರುಪಯೋಗಪಡಿಸುವುದನ್ನು ತಡೆಯುವ ನಿಟ್ಟಿನಲ್ಲಿ ಕೋರ್ಟ್‌ ಈ ಆದೇಶ ನೀಡಿದೆ. ಹಾಗೆಂದು ಇದುವರೆಗೆ ಅರಣ್ಯ ಇಲಾಖೆಯಿಂದ ಯಾವುದೇ ಅಧಿಕೃತ ಆದೇಶ ಹೊರಬಿದ್ದಿಲ್ಲ.

ADVERTISEMENT

ಕೋರ್ಟ್‌ ಅಭಿಮತ ಹೀಗಿದೆ

ವಿಶ್ರಾಂತಿ ದಾಮಗಳು ಅಥವಾ ಪ್ರವಾಸಿ ಬಂಗಲೆಗಳನ್ನು ಅರಣ್ಯ ಸಂರಕ್ಷಣೆ ಸಂಬಂಧಿಸಿದ ಕರ್ತವ್ಯ ನಿರ್ವಹಿಸಲು ಅಧಿಕಾರಿಗಳಿಗೆ ನೀಡಲಾಗುತ್ತಿದೆ. ಈ ಆದೇಶ ನೀಡುವ ಮುನ್ನ ಕೇಂದ್ರ ಉನ್ನತಮಟ್ಟದ ಸಮಿತಿಯ ಸಲಹೆಯನ್ನೂ ಪಡೆಯಲಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.

ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳುವ ಪ್ರಕಾರ, ‘ಬಹುತೇಕ ಪ್ರವಾಸಿಗರನ್ನು ಇಂಥ ಧಾಮದೊಳಗೆ ಬಿಡುವುದಿಲ್ಲ. ಆದರೆ, ಪ್ರಭಾವಿಗಳು, ರಾಜಕಾರಣಿಗಳು ಇಂಥ ಧಾಮಗಳನ್ನು ವ್ಯಾಪಕವಾಗಿ ಬಳಸಿಕೊಳ್ಳುತ್ತಿದ್ದಾರೆ. ನಾವೀಗ ವಿಶ್ರಾಂತಿ ಧಾಮಗಳು, ಪ್ರವಾಸಿ ಬಂಗಲೆಗಳು ಮತ್ತು ಪ್ರವಾಸೋದ್ಯಮದ ಆಸ್ತಿಗಳು ಯಾವುವು ಎಂಬುದನ್ನು ಗುರುತಿಸಬೇಕಿದೆ. ಕೋರ್ಟ್‌ ಆದೇಶವನ್ನು ವಿವರವಾಗಿ ಪರಿಶೀಲಿಸಿ ಈ ಆಸ್ತಿಗಳು, ಧಾಮಗಳನ್ನು ಮರು ವ್ಯಾಖ್ಯಾನಿಸಬೇಕಿದೆ. ಹಲವು ಅರಣ್ಯ ಇಲಾಖೆ ಆಸ್ತಿಗಳು ಪ್ರವಾಸೋದ್ಯಮ ವಲಯದಲ್ಲಿ ಬರುತ್ತವೆ. ಇವುಗಳನ್ನೂ ಪರಿಶೀಲಿಸಬೇಕಿದೆ’ ಎಂದರು.

ಇಲಾಖೆಯ ದಾಖಲೆಗಳ ಪ್ರಕಾರ 163 ವಿಶ್ರಾಂತಿ ಧಾಮಗಳಿವೆ. ಇವುಗಳಲ್ಲಿ ಕೆಲವು ನಗರ ಪ್ರದೇಶ ಇನ್ನೂ ಕೆಲವು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿವೆ. ನಾಗರಹೊಳೆ, ಬಂಡಿಪುರ ಹುಲಿ ಅಭಯಾರಣ್ಯ, ಚಿಕ್ಕಮಗಳೂರು, ಮಡಿಕೇರಿ ಅರಣ್ಯ ಪ್ರದೇಶ, ಹಳಿಯಾಳ, ಕಾರವಾರ ಮತ್ತು ಹೊನ್ನಾವರದಲ್ಲಿ ಇವು ಇವೆ.

ವೈಲ್ಡ್‌ಲೈಫ್‌ ಫಸ್ಟ್‌ ಸಂಸ್ಥೆಯ ಟ್ರಸ್ಟಿ ಪ್ರವೀಣ್‌ ಭಾರ್ಗವ್‌ ಹೇಳುವ ಪ್ರಕಾರ, ‘ಅರಣ್ಯ ಪ್ರದೇಶದ ವಿಶ್ರಾಂತಿ ಧಾಮಗಳನ್ನು ಯಾವುದೇ ಹೆಸರಿನಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಬಳಸಬಾರದು ಎಂಬ ಆದೇಶ ಸ್ವಾಗತಾರ್ಹ. ಆದರೆ, ಕೆ.ಗುಡಿ, ಬಿಆರ್‌ಟಿ ಅಭಯಾರಣ್ಯ, ಭಗವತಿ, ಕುದುರೆಮುಖ ಅರಣ್ಯ ಪ್ರದೇಶಗಳ ವಿಶ್ರಾಂತಿ ಧಾಮಗಳನ್ನು ಈಗಾಗಲೇ ಖಾಸಗಿಯವರಿಗೆ ನೀಡಲಾಗಿದೆ. ಅವುಗಳನ್ನು ವಾಪಸ್‌ ಪಡೆಯಬೇಕು. 2012ರ ಅ. 16ರಂದು ಹೊರಡಿಸಲಾದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಪ್ರವಾಸೋದ್ಯಮ ಸಂಬಂಧಿಸಿ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಿದೆ. ಅದರ ಪ್ರಕಾರ ಪ್ರವಾಸೋದ್ಯಮ ಮೂಲಸೌಲಭ್ಯಗಳನ್ನು ಹುಲಿ ಆವಾಸ ಸ್ಥಾನದ ಸೂಕ್ಷ್ಮ ಪ್ರದೇಶಗಳಿಂದ ಸ್ಥಳಾಂತರಿಸಬೇಕು ಎಂದು ಇದೆ. ಅದನ್ನೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಆದರೆ, ಅದ್ಯಾವುದೂ ಇದುವರೆಗೆ ಪಾಲನೆಯಾಗಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.