ಬೆಂಗಳೂರು: ಬೆಂಗಳೂರು ನಗರ ಜಿಲ್ಲೆ ಬಿದರಹಳ್ಳಿ ಹೋಬಳಿಯ ದಿನ್ನೂರು ಗ್ರಾಮದಲ್ಲಿ ದಲಿತರು ವ್ಯವಸಾಯ ಮಾಡುತ್ತಿರುವ ಜಮೀನನ್ನು ಅರಣ್ಯ ಇಲಾಖೆ ವಶಕ್ಕೆ ಪಡೆಯಲು ಮುಂದಾಗಿದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ದೂರಿದ್ದಾರೆ.
ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಚಿವ ಈಶ್ವರಖಂಡ್ರೆ ನೇತೃತ್ವದಲ್ಲಿ ದಲಿತರ ಕತ್ತು ಹಿಸುಕುವ ಕೆಲಸ ನಡೆದಿದೆ ಎಂದು ಆರೋಪಿಸಿದರು.
‘ದಲಿತರ ವ್ಯವಸಾಯ ಭೂಮಿಯನ್ನು ಕಿತ್ತುಕೊಳ್ಳುವ ಕಾರ್ಯಾಚರಣೆಯನ್ನು ತಕ್ಷಣವೇ ನಿಲ್ಲಿಸಬೇಕು. ಅರಣ್ಯ ಇಲಾಖೆ ತಾನು ಮಾಡಬೇಕಾದ ಕೆಲಸವನ್ನು ಬಿಟ್ಟು ಬೆಲೆಬಾಳುವ ಜಮೀನು ಕಬಳಿಸಲು ಮುಂದಾಗಿದೆ. ಈ ವಿಚಾರವಾಗಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಹಲವು ಬಾರಿ ಪ್ರಯತ್ನಿಸಿದರೂ ಭೇಟಿಗೆ ಅವಕಾಶ ಸಿಕ್ಕಿಲ್ಲ. ಆದ್ದರಿಂದ ಮುಖ್ಯಮಂತ್ರಿಯವರ ಕಾರ್ಯದರ್ಶಿಯವರಿಗೆ ಮನವಿ ಸಲ್ಲಿಸಿದ್ದೇವೆ’ ಎಂದು ತಿಳಿಸಿದರು.
‘ದಿನ್ನೂರಿನಲ್ಲಿ 711 ಎಕರೆ ಜಾಗ ಇತ್ತು. ಇದರಲ್ಲಿ ರೈಲ್ವೆ ಇಲಾಖೆಗೆ 278 ಎಕರೆ, ದೇವಸ್ಥಾನಕ್ಕೆ ಸುಮಾರು 3 ಎಕರೆ, ರಸ್ತೆಗೆ 13 ಎಕರೆ, ಇಂದಿರಾ ಕ್ಯಾಂಟೀನ್‌ಗೆ 13 ಗುಂಟೆ, ದಿನ್ನೂರು ಕಾಲೋನಿಯಲ್ಲಿ ಮನೆ ಕಟ್ಟಲು 20 ಎಕರೆ ಜಮೀನು ನೀಡಲಾಗಿದೆ. ಸ್ಮಶಾನಕ್ಕೆ ಎರಡೂವರೆ ಎಕರೆ, ಬಡಾವಣೆ ನಿರ್ಮಾಣಕ್ಕೆ 32 ಎಕರೆ, ಪೊಲೀಸ್ ಠಾಣೆಗೆ 4.5 ಎಕರೆ ನೀಡಲಾಗಿದೆ. ಸುಮಾರು 125 ಎಕರೆಯಲ್ಲಿ ಕೃಷಿ ಕಾರ್ಯ ನಡೆದಿದೆ’ ಎಂದು ಅವರು ತಿಳಿಸಿದರು.
‘ಸ್ಥಳೀಯ ರೈತರಿಗೆ 1950 ರಲ್ಲೇ ಸರ್ಕಾರ ಭೂಮಿ ಮಂಜೂರು ಮಾಡಿತ್ತು. ಆಗಿನಿಂದಲೂ ರೈತರು ಅಲ್ಲಿ ವ್ಯವಸಾಯ ಮಾಡುತ್ತಾ ಬಂದಿದ್ದರು. ಈಗ ಪೊಲೀಸರ ಮೂಲಕ ದಲಿತರ ಜಮೀನು ವಶಕ್ಕೆ ತೆಗೆದುಕೊಳ್ಳುವ ಕೆಲಸ ನಡೆದಿದೆ. ಜಾಗ ತೆರವು ಮಾಡುವುದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ತಡೆಯಾಜ್ಞೆ ಇದೆ. ಈ ವಿಷಯವನ್ನು ಪೊಲೀಸರಿಗೆ ತಿಳಿಸಿದರೂ, ತೆರವು ಕೆಲಸ ಮಾಡಬೇಕು ಎಂದು ಸರ್ಕಾರ ನಮಗೆ ಸೂಚನೆ ನೀಡಿದೆ. ನಾವು ನಮ್ಮ ಕೆಲಸ ಮಾಡಿಯೇ ತೀರುತ್ತೇವೆ ಎಂದಿದ್ದಾರೆ. ಇದು ಹಾಸ್ಯಾಸ್ಪದ’ ಎಂದು ಛಲವಾದಿ ಹೇಳಿದರು.
‘ಅರಣ್ಯ ಭೂಮಿಯನ್ನು ಹಂಚಿಕೆ ಅಥವಾ ಮಂಜೂರು ಮಾಡಲು ಸಾಧ್ಯವಿಲ್ಲ. ಅರಣ್ಯೇತರ ಉದ್ದೇಶಕ್ಕೆ ಅರಣ್ಯ ಭೂಮಿ ಬಳಸಲು ಕೇಂದ್ರ ಸರ್ಕಾರ ಮತ್ತು ಸುಪ್ರೀಂಕೋರ್ಟ್ ಅನುಮತಿ ಕಡ್ಡಾಯ’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. ಬೆಂಗಳೂರು ಪೂರ್ವ ತಾಲ್ಲೂಕು ಬಿದರಹಳ್ಳಿ ಹೋಬಳಿಯ ಕಾಡುಗೋಡಿ ಪ್ಲಾಂಟೇಷನ್ ಸರ್ವೆ ನಂ 1 ರಲ್ಲಿ 711 ಎಕರೆಯನ್ನು ನೆಡುತೋಪಿಗಾಗಿ 1896 ರಲ್ಲಿ ನೀಡಲಾಗಿದೆ. 1901 ರಲ್ಲಿ ಅರಣ್ಯ ನಿಯಮಗಳ ಅನ್ವಯ ರಾಜ್ಯ ಅರಣ್ಯ ಎಂದು ಅಧಿಸೂಚನೆ ಹೊರಡಿಸಲಾಗಿತ್ತು. ಹೀಗಾಗಿ ಇದು ಅಧಿಸೂಚಿತ ಮೀಸಲು ಅರಣ್ಯವಾಗಿದೆ ಎಂದು ಅವರು ಹೇಳಿದರು. ಯಾವುದೇ ಅರಣ್ಯ ಭೂಮಿಯನ್ನು ಅನ್ಯ ಉದ್ದೇಶಕ್ಕೆ ಪೂರ್ವಾನುಮತಿ ಇಲ್ಲದೆ ಮಂಜೂರು ಮಾಡಬಾರದು ಎಂದು ಕೇಂದ್ರ ಸರ್ಕಾರವೇ ಜಾರಿ ಮಾಡಿರುವ ಕಾಯ್ದೆ ಹೇಳುತ್ತದೆ. ಸುಪ್ರೀಂಕೋರ್ಟ್ ಕೂಡ ಕಾಲಕಾಲಕ್ಕೆ ಈ ಸಂಬಂಧ ಸ್ಪಷ್ಟ ತೀರ್ಪು ಮತ್ತು ಆದೇಶಗಳನ್ನು ನೀಡಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.