ADVERTISEMENT

₹85 ಕೋಟಿ ಖರ್ಚು: ಹಸಿರೀಕರಣ ನಾಸ್ತಿ

ರಾಜ್ಯದಲ್ಲಿ ಶೇ 19ರಷ್ಟು ಮಾತ್ರ ಇರುವ ಅರಣ್ಯ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2018, 19:15 IST
Last Updated 17 ಅಕ್ಟೋಬರ್ 2018, 19:15 IST
ಐನಳ್ಳಿಯ ಸಸ್ಯಕ್ಷೇತ್ರದಲ್ಲಿ ನಾಶವಾದ ಸಸಿಗಳು
ಐನಳ್ಳಿಯ ಸಸ್ಯಕ್ಷೇತ್ರದಲ್ಲಿ ನಾಶವಾದ ಸಸಿಗಳು   

ಬೆಂಗಳೂರು: ರಾಜ್ಯದಲ್ಲಿ ಅರಣ್ಯ ಇಲಾಖೆ ಸಾಮಾಜಿಕ ಅರಣ್ಯ ಯೋಜನೆಯಡಿ ಎರಡು ವರ್ಷಗಳಲ್ಲಿ ₹85 ಕೋಟಿ ಖರ್ಚು ಮಾಡಿದೆ. ಆದರೆ, ಹಸಿರೀಕರಣ ನಾಸ್ತಿ ಎಂಬಂತೆ ಆಗಿದೆ.

ರಾಜ್ಯದಲ್ಲಿ ಶೇ 19ರಷ್ಟು ಮಾತ್ರ ಅರಣ್ಯ ಇದೆ. ಹಸಿರಿನ ಪ್ರಮಾಣ ಹೆಚ್ಚಿಸಲು ಪ್ರತಿವರ್ಷ ಕೋಟಿ ಗಿಡ ನೆಟ್ಟರೂ ಉಳಿಯುವುದು ಲಕ್ಷ ಗಿಡಗಳಷ್ಟೇ.

‘3 ಕೋಟಿ ಗಿಡಗಳನ್ನು ನೆಟ್ಟಿದ್ದೇವೆ ಎಂದು ಅಧಿಕಾರಿಗಳು ಪ್ರತಿವರ್ಷ ಬೆನ್ನು ತಟ್ಟಿಕೊಳ್ಳುತ್ತಾರೆ. ಆದರೆ, ನೆಟ್ಟ ಗಿಡಗಳ ಪೈಕಿ ಶೇ 10ರಷ್ಟೂ ಉಳಿಯುವುದಿಲ್ಲ’ ಎನ್ನುತ್ತಾರೆ ಪರಿಸರ ಹೋರಾಟಗಾರರು.

ADVERTISEMENT

‘ರಾಜ್ಯದಲ್ಲಿ 5.5 ಕೋಟಿ ಗಿಡಗಳನ್ನು ನೆಡಲಾಗಿದೆ. ಅದನ್ನು 10 ಕೋಟಿಗೆ ಏರಿಸುವ ಗುರಿ ಇದೆ. ನೆಟ್ಟ ಗಿಡಗಳ ಪೈಕಿ ಶೇ 30ರಷ್ಟು ಉಳಿಯುತ್ತಿವೆ’ ಎನ್ನುತ್ತಾರೆ ಅರಣ್ಯ ಸಚಿವ ಆರ್‌. ಶಂಕರ್.

ಐದು ಸಾವಿರ ಸಸಿ ನಾಶ

ಚಿತ್ರದುರ್ಗ: ತಾಲ್ಲೂಕಿನ ಐನಳ್ಳಿಯ ಅರಣ್ಯ ಇಲಾಖೆಯ ಸಸ್ಯಕ್ಷೇತ್ರದಲ್ಲಿ ಐದು ಸಾವಿರ ಸಸಿಗಳನ್ನು ನಾಶಪಡಿಸಲಾಗಿದೆ. ವನಮಹೋತ್ಸವಕ್ಕೆ ಸಿದ್ಧಪಡಿಸಿದ್ದ ಸಸಿಗಳನ್ನು ಹಾಳು ಮಾಡಿದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ನಾಶವಾದ ಸಸಿಗಳ ಮೌಲ್ಯ ₹ 2.5 ಲಕ್ಷ ಎಂದು ಅಂದಾಜಿಸಲಾಗಿದೆ. ಅರಣ್ಯ ಬೆಳೆಸುವ ಉದ್ದೇಶದಿಂದ ಜಿಲ್ಲಾ ಪಂಚಾಯಿತಿ ಅನುದಾನ ನೀಡಿತ್ತು.ಈ ಘಟನೆ ಬುಧವಾರ ಬೆಳಕಿಗೆ ಬಂದಿದೆ. ಅರಣ್ಯ ಇಲಾಖೆ ಈ ಆರೋಪವನ್ನು ನಿರಾಕರಿಸಿದೆ.

ಸಾಮಾಜಿಕ ಅರಣ್ಯ ವಿಭಾಗವು ಐನಳ್ಳಿಯ ಸಸ್ಯಕ್ಷೇತ್ರದಲ್ಲಿ ಹೆಬ್ಬೇವು, ಆಲ, ಹಲಸು ಸೇರಿ ಹಲವು ಜಾತಿಯ ಸಸಿಗಳನ್ನು ಬೆಳೆಸಿದೆ. ಮುಂಗಾರು ಆರಂಭದಲ್ಲಿ ಸಸಿ ವಿತರಣೆ ಅಭಿಯಾನ ನಡೆಸಿ ಸಾರ್ವಜನಿಕರಿಗೆ ನೀಡುತ್ತದೆ. ಗಿಡಗಳನ್ನು ನೆಟ್ಟು ವನಮಹೋತ್ಸವ ನಡೆಸುತ್ತದೆ. ಸಮಯಕ್ಕೆ ಸರಿಯಾಗಿ ವನಮಹೋತ್ಸವ ನಡೆಸದ ಕಾರಣ ಸಸ್ಯಕ್ಷೇತ್ರದಲ್ಲಿಯೇ ಉಳಿದ ಸಸಿಗಳನ್ನು ನಾಶಪಡಿಸಲಾಗಿದೆ.

ಸಸಿಗಳನ್ನು ಟ್ರ್ಯಾಕ್ಟರಿಗೆ ತುಂಬಿ ಸಸ್ಯಕ್ಷೇತ್ರದ ಆವರಣದ ಮತ್ತೊಂದು ಪ್ರದೇಶದಲ್ಲಿ ಬಿಸಾಡಲಾಗಿದೆ. ಸಸಿಗಳ ಮೇಲೆ ಟ್ರ್ಯಾಕ್ಟರಿ ಹರಿಸಿ ನಾಶಪಡಿಸಲಾಗಿದೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘ಸಸಿಗಳು ನಾಶವಾಗಿರುವುದು ಗಮನಕ್ಕೆ ಬಂದಿದೆ. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಂದ ವರದಿ ಪಡೆದು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎನ್‌. ರವೀಂದ್ರ ತಿಳಿಸಿದ್ದಾರೆ.

ರಾಜ್ಯದಲ್ಲಿ 5.5 ಕೋಟಿ ಗಿಡಗಳನ್ನು ನೆಡಲಾಗಿದೆ. ಅದನ್ನು 10 ಕೋಟಿಗೆ ಏರಿಸುವ ಗುರಿ ಇಟ್ಟುಕೊಂಡಿದ್ದೇವೆ. ನೆಟ್ಟ ಗಿಡಗಳ ಪೈಕಿ ಶೇ 30ರಿಂದ 35ರಷ್ಟು ಉಳಿಯುತ್ತಿವೆ

-ಆರ್‌.ಶಂಕರ್‌, ಅರಣ್ಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.