ADVERTISEMENT

ಕಾರ್ಮಿಕರಿಗೆ 45 ಕಿ.ಮೀ.ವರೆಗೆ ಪ್ರಯಾಣ ಉಚಿತ: ಎಂ.ಚಂದ್ರಪ್ಪ

ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದಲ್ಲಿ 672, ಪುತ್ತೂರು ವಿಭಾಗದಲ್ಲಿ 1268 ಅರ್ಜಿ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2022, 12:04 IST
Last Updated 11 ಅಕ್ಟೋಬರ್ 2022, 12:04 IST
ಎಂ.ಚಂದ್ರಪ್ಪ
ಎಂ.ಚಂದ್ರಪ್ಪ   

ಮಂಗಳೂರು: ‘ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರಿಗೆ 45 ಕಿ.ಮೀ ದೂರದವರೆಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಈ ಸಲುವಾಗಿ ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್‌ ಮಾದರಿಯ ಪಾಸ್‌ ವಿತರಣೆ ಕಾರ್ಯ ‍ಪ್ರಗತಿಯಲ್ಲಿದೆ’ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಅಧ್ಯಕ್ಷ ಎಂ.ಚಂದ್ರಪ್ಪ ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ರಾಜ್ಯದಲ್ಲಿ 37 ಲಕ್ಷ ನಿರ್ಮಾಣ ಕಾರ್ಮಿಕರಿದ್ದು, 1 ಲಕ್ಷ ಕಾರ್ಮಿಕರಿಗೆ ಪಾಸ್‌ ವಿತರಿಸಲಾಗಿದೆ. ಮಂಗಳೂರು ವಿಭಾಗದಲ್ಲಿ 672 ಹಾಗೂ ಪುತ್ತೂರು ವಿಭಾಗದಲ್ಲಿ 1,268 ಅರ್ಜಿಗಳು ಬಂದಿದ್ದು, ಪಾಸ್‌ ವಿತರಣೆ ಪ್ರಗತಿಯಲ್ಲಿದೆ. ಕಾರ್ಮಿಕರು ಸಮೀಪದ ಗ್ರಾಮ 1 ಅಥವಾ ಕರ್ನಾಟಕ 1 ಕೇಂದ್ರಗಳಲ್ಲಿ ಈ ಸವಲತ್ತಿಗಾಗಿ ಅರ್ಜಿ ಸಲ್ಲಿಸಬಹುದು. ಕಾರ್ಮಿಕ ಇಲಾಖೆಯು ಪ್ರತಿ ಕಾರ್ಡ್‌ಗೆ ತಿಂಗಳಿಗೆ ₹ 1400 ಮೊತ್ತವನ್ನು ಕೆಎಸ್‌ಆರ್‌ಟಿಸಿಗೆ ಪಾವತಿಸುತ್ತದೆ’ ಎಂದು ಅವರು ತಿಳಿಸಿದರು.

‘ಬಸ್‌ ಹತ್ತಿದ ಸ್ಥಳದಿಂದ 45 ಕಿ.ಮೀ.ಗಿಂತ ಹೆಚ್ಚು ದೂರಕ್ಕೆ ಪ್ರಯಾಣಿಸುವುದಾದರೆ ಅದಕ್ಕೆ ಟಿಕೆಟ್‌ ಖರೀದಿಸಬೇಕು. ರಾಜ್ಯ ರಸ್ತೆ ಸಾರಿಗೆ ನಿಗಮಗಳ ನಗರ/ ಸಾಮಾನ್ಯ/ ಹೊರವಲಯ ಹಾಗೂ ವೇಗದೂತ ಬಸ್‌ಗಳ ಪ್ರಯಾಣಕ್ಕೆ ಸೀಮಿತ. ಪ್ರತಿ ಮೂರು ತಿಂಗಳಿಗೊಮ್ಮೆ ಪಾಸ್‌ ಅನ್ನು ನವೀಕರಿಸಬೇಕು. ಕಾರ್ಮಿಕ ಕಲ್ಯಾಣ ಮಂಡಳಿಯವರು ನೀಡಿರುವ ಗುರುತಿನ ಚೀಟಿ ನವೀಕರಣವಾಗಿರುವುದನ್ನೂ ಈ ವೇಳೆ ಪರಿಶೀಲಿಸಲಾಗುತ್ತದೆ’ ಎಂದರು.

ADVERTISEMENT

ಮಂಗಳೂರಿಗೂ ಹೊಸ ಎಲೆಕ್ಟ್ರಿಕ್‌ ಬಸ್‌

‘ಕೆಎಸ್‌ಆರ್‌ಟಿಸಿಯು 650 ಹೊಸ ಬಸ್‌ ಖರೀದಿಸುವ ಪ್ರಸ್ತಾವವನ್ನು ಹೊಂದಿದೆ. 50 ವೋಲ್ವೊ ಎಲೆಕ್ಟ್ರಿಕಲ್‌ ಬಸ್‌ ಖರೀದಿ ಪ್ರಕ್ರಿಯೆ ನಡೆಯುತ್ತಿದ್ದು, ಇವು 15 ದಿನಗಳಲ್ಲಿ ತಲುಪಲಿವೆ. ಮತ್ತೆ 300 ಎಲೆಕ್ಟ್ರಿಕಲ್‌ ಬಸ್‌ ಖರೀದಿಗೂ ಚಿಂತನೆ ನಡೆದಿದೆ. ಈ ಬಸ್‌ಗಳಲ್ಲಿ ಕೆಲವನ್ನು ಮಂಗಳೂರು ಹಾಗೂ ಪುತ್ತೂರು ವಿಭಾಗಗಳಿಗೂ ಒದಗಿಸಲಿದ್ದೇವೆ’ ಎಂದು ಎಂ.ಚಂದ್ರಪ್ಪ ತಿಳಿಸಿದರು.

ವಾರಾಂತ್ಯ– ಪ್ರವಾಸ ಪ್ಯಾಕೇಜ್‌

‘ನವರಾತ್ರಿ ಸಂದರ್ಭದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಧಾರ್ಮಿಕ ಕೇಂದ್ರಗಳ ಪ್ರವಾಸಕ್ಕಾಗಿ ರೂಪಿಸಲಾಗಿದ್ದ ವಿಶೇಷ ಪ್ಯಾಕೇಜ್‌ಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅದೇ ಮಾದರಿಯಲ್ಲಿ ಪ್ರತಿ ವಾರಂತ್ಯದಲ್ಲೂ ವಿಶೇಷ ಪ್ಯಾಕೇಜ್‌ ರೂಪಿಸಲಿದ್ದೇವೆ’ ಎಂದು ಎಂ. ಚಂದ್ರಪ್ಪ ತಿಳಿಸಿದರು.

‘ದೀಪಾವಳಿ ಸಂದರ್ಭದಲ್ಲಿ ಇದೇ 21ರಿಂದ 27ರವರೆಗೂ ಕರಾವಳಿಯ ಧಾರ್ಮಿಕ ಕೇಂದ್ರಗಳ ಪ್ರವಾಸಕ್ಕೆ ವಿಶೇಷ ಪ್ಯಾಕೇಜ್‌ ರೂಪಿಸಲಾಗುತ್ತದೆ’ ಎಂದರು.

‘ಒಂದೇ ದಿನ ₹22.54 ಕೋಟಿ ವರಮಾನ‘

‘ದಿನದಲ್ಲಿ ಸರಾಸರಿ ₹ 6 ಕೋಟಿಯಿಂದ ₹ 7 ಕೋಟಿಗಳಷ್ಟು ವರಮಾನ ಗಳಿಸುತ್ತಿದ್ದ ಕೆಎಸ್‌ಆರ್‌ಟಿಸಿಯು ಈಗ ಸರಾಸರಿ ₹ 12 ಕೋಟಿಗಳಷ್ಟು ವರಮಾನ ಗಳಿಸುತ್ತಿದೆ. ಇದೇ 10ರಂದು ಒಂದೇ ದಿನ ₹ 22.54 ಕೋಟಿ ವರಮಾನ ಗಳಿಸಿದೆ. ಇದು ಸಾರ್ವಕಾಲಿಕ ದಾಖಲೆ’ ಎಂದು ಎಂ.ಚಂದ್ರಪ್ಪ ಮಾಹಿತಿ ನೀಡಿದರು.

ಸ್ಮಾರ್ಟ್‌ಸಿಟಿ ಯೋಜನೆ– ಕೆಎಸ್‌ಆರ್‌ಟಿಸಿ ಕಡೆಗಣನೆ

‘ದಾವಣಗೆರೆ ಮತ್ತಿತರ ಕಡೆ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ನಿರ್ಮಾಣಕ್ಕೆ ಸ್ಮಾರ್ಟ್‌ ಸಿಟಿ ಯೋಜನೆಯಡಿ ಅನುದಾನ ನೀಡಲಾಗಿದೆ. ಕೆಎಸ್‌ಆರ್‌ಟಿಸಿಯು ಮಂಗಳೂರಿನ ಹೃದಯಭಾಗದಲ್ಲಿ 8 ಎಕರೆ ಜಾಗ ಹೊಂದಿದ್ದರೂ, ಇಲ್ಲಿ ನಿಗಮದ ಬಸ್‌ನಿಲ್ದಾಣ ಅಭಿವೃದ್ಧಿಗೆ ಹಣವನ್ನೇ ಕಾಯ್ದಿರಿಸಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ’ ಎಂದು ಎಂ.ಚಂದ್ರಪ್ಪ ತಿಳಿಸಿದರು.

ನಿಗಮದ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಹಗೂ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ಇದ್ದರು.

ಸಾರಿಗೆ ಸಿಬ್ಬಂದಿಗೆ 6ನೇ ವೇತನ ಆಯೋಗದ ಶಿಫಾರಸಿನಂತೆ ವೇತನ ನೀಡುವ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು

- ಎಂ.ಚಂದ್ರಪ್ಪ, ಕೆಎಸ್‌ಆರ್‌ಟಿಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.