ADVERTISEMENT

ತಹಶೀಲ್ದಾರ್ ಕುರ್ಚಿಗೆ ಕಾದಾಟ

ಕಂದಾಯ ಸಚಿವರ ಜಿಲ್ಲೆಯಲ್ಲಿ ನಡೆದ ಪ್ರಹಸನ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2019, 12:52 IST
Last Updated 22 ಫೆಬ್ರುವರಿ 2019, 12:52 IST
ಶಿರಸಿ ತಹಶೀಲ್ದಾರ್ ಎಂ.ಆರ್.ಕುಲಕರ್ಣಿ ಅವರು ಚೇಂಬರ್‌ಗೆ ಬಂದಿದ್ದ ಗೀತಾ ಸಿ.ಜಿ ಅವರಿಗೆ ವರ್ಗಾವಣೆ ಮರುಆದೇಶದ ಪ್ರತಿ ತೋರಿಸಿದರು
ಶಿರಸಿ ತಹಶೀಲ್ದಾರ್ ಎಂ.ಆರ್.ಕುಲಕರ್ಣಿ ಅವರು ಚೇಂಬರ್‌ಗೆ ಬಂದಿದ್ದ ಗೀತಾ ಸಿ.ಜಿ ಅವರಿಗೆ ವರ್ಗಾವಣೆ ಮರುಆದೇಶದ ಪ್ರತಿ ತೋರಿಸಿದರು   

ಶಿರಸಿ: ತಹಶೀಲ್ದಾರರೊಬ್ಬರು ಕುರ್ಚಿಯಲ್ಲಿ ಕುಳಿತು ಕಾರ್ಯನಿರ್ವಹಿಸುತ್ತಿರುವಾಗಲೇ, ಇನ್ನೊಬ್ಬರು ಬಂದು ಆ ಕುರ್ಚಿಯನ್ನು ಬಿಟ್ಟುಕೊಡುವಂತೆ ಒತ್ತಾಯಿಸಿದ ಪ್ರಹಸನ ಶುಕ್ರವಾರ ಇಲ್ಲಿನ ತಹಶೀಲ್ದಾರ್‌ ಕಚೇರಿಯಲ್ಲಿನಡೆಯಿತು.

ತಹಶೀಲ್ದಾರ್ ಎಂ.ಆರ್.ಕುಲಕರ್ಣಿ ಎಂದಿನಂತೆ ಬಂದು ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಬೆಳಿಗ್ಗೆ 10.30ರ ಸುಮಾರಿಗೆ ನೇರವಾಗಿ ಮಿನಿವಿಧಾನ ಸೌಧದಲ್ಲಿರುವ ತಹಶೀಲ್ದಾರ್ ಕೊಠಡಿಗೆ ಬಂದ ಚಿಕ್ಕಮಗಳೂರಿನ ಗೀತಾ ಸಿ.ಜಿ ಅವರು, ಅಧಿಕಾರವನ್ನು ಹಸ್ತಾಂತರಿಸುವಂತೆ ಪಟ್ಟುಹಿಡಿದರು. ಇದನ್ನು ಕಂಡು ಕಚೇರಿ ಸಿಬ್ಬಂದಿ ಸಹ ಕೆಲಕಾಲ ವಿಚಲಿತರಾದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಗೀತಾ ಅವರು, ‘ನನಗೆ ಜನವರಿ 4ರಂದು ಶಿರಸಿಗೆ ವರ್ಗಾವಣೆಯಾಗಿತ್ತು. ಹಾಲಿ ಕಾರ್ಯನಿರ್ವಹಿಸುತ್ತಿರುವ ತಹಶೀಲ್ದಾರರು ಕೆ.ಎ.ಟಿ.ಯಿಂದ ತಡೆಯಾಜ್ಞೆ ತಂದಿದ್ದರು. ಅಲ್ಲಿ ವಿಚಾರಣೆ ನಡೆದು, ನನ್ನ ಪರವಾಗಿ ಆದೇಶವಾಗಿದೆ. ಸಿದ್ದಾಪುರಕ್ಕೆ ಮರುಆದೇಶವಾದರೂ, ಮೊದಲಿನ ಆದೇಶವೇ ಪುರಸ್ಕೃತವಾಗುತ್ತದೆ’ ಎಂದರು.

ADVERTISEMENT

ಅಧಿಕೃತ ಆದೇಶದ ಪ್ರತಿಯಿಲ್ಲದೇ ಹೇಗೆ ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವೆಂದು ಅವರನ್ನು ಪ್ರಶ್ನಿಸಿದರೆ, ‘ಇನ್ನೆರಡು ದಿನಗಳಲ್ಲಿ ಆದೇಶ ಬರಲಿದೆ. ತಹಶೀಲ್ದಾರರು ಅಧಿಕಾರ ಹಸ್ತಾಂತರಿಸುತ್ತಿಲ್ಲ. ಅದಕ್ಕಾಗಿ ನಾನು ಸಿಟಿಸಿಗೆ ಸಹಿ ಮಾಡಿ ಅಧಿಕಾರವಹಿಸಿಕೊಳ್ಳುತ್ತಿದ್ದೇನೆ’ ಎಂದರು. ಕಚೇರಿಯ ಸಿಬ್ಬಂದಿ ಕೊಠಡಿಯಲ್ಲಿ ಕೆಲಕಾಲ ಕುಳಿತುಕೊಂಡರು. ನಂತರ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಅಲ್ಲಿ ಕೆಲ ಹೊತ್ತು ಕಳೆದರು.

ಎಂ.ಆರ್.ಕುಲಕರ್ಣಿ ಅವರನ್ನು ಈ ಕುರಿತು ಪ್ರಶ್ನಿಸಿದಾಗ, ‘ಗೀತಾ ಅವರಿಗೆ ಈ ಮೊದಲು ಶಿರಸಿಗೆ ವರ್ಗಾವಣೆಯಾಗಿದ್ದು ನಿಜ. ಆದರೆ, ವಾರದ ಹಿಂದೆ ಸರ್ಕಾರ ಮಾಡಿರುವ ವರ್ಗಾವಣೆ ಪಟ್ಟಿಯಲ್ಲಿ ಅವರಿಗೆ ಸಿದ್ದಾಪುರಕ್ಕೆ ವರ್ಗಾಯಿಸಲಾಗಿದೆ. ಸಿದ್ದಾಪುರ ತಹಶೀಲ್ದಾರ್ ಹುದ್ದೆ ತೋರಿಸಿರುವಾಗ ಅವರು ಮತ್ತೆ ಶಿರಸಿಗೆ ಬಂದು ಹಾಜರಾಗುವುದು ಹೇಗೆ ಸಾಧ್ಯ ? ಈ ಕುರಿತು ಜಿಲ್ಲಾಧಿಕಾರಿ ಬಳಿ ಸಹ ಮಾತನಾಡಿದ್ದೇನೆ’ ಎಂದರು.

ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಜಿಲ್ಲೆಯಲ್ಲಿ ಇಂತಹುದೊಂದು ಘಟನೆ ನಡೆದಿರುವುದು ಚರ್ಚೆಗೆ ಗ್ರಾಸವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.