ADVERTISEMENT

ಕೃಷಿ ಹೊಂಡದಲ್ಲಿ ಮುಳುಗಿ ನಾಲ್ವರು ಮಕ್ಕಳ ಸಾವು

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2020, 15:48 IST
Last Updated 4 ಏಪ್ರಿಲ್ 2020, 15:48 IST

ಗೋಕಾಕ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಅಜ್ಜನಕಟ್ಟಿ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಒಂದೇ ಕುಟುಂಬದ ನಾಲ್ಕು ಮಕ್ಕಳು ಕೃಷಿ ಹೊಂಡದಲ್ಲಿ ಬಿದ್ದು ಸಾವಿಗೀಡಾದರು.

ಬಾಗವ್ವ (6), ಸುಪ್ರೀತಾ (5), ಮಾಳಪ್ಪ (4), ರಾಜಶ್ರೀ (2.5) ಮೃತರು. ಇವರೆಲ್ಲರೂ ಕರೆಪ್ಪ ಜಕ್ಕನ್ನವರ–ಮಹಾದೇವಿ ದಂಪತಿಯ ಮಕ್ಕಳು.

‘ಮಕ್ಕಳು ಗ್ರಾಮದ ಮನೆಯಿಂದ ಅಜ್ಜ-ಅಜ್ಜಿ ಇದ್ದ ತೋಟದ ಮನೆ ಕಡೆಗೆ ಹೋಗುವಾಗ ಘಟನೆ ನಡೆದಿದೆ. ಮಾಳ‍ಪ್ಪ ಕೈಲಿದ್ದ ಮೊಬೈಲ್ ಫೋನ್‌ ಕೈ ಜಾರಿ ಹೊಂಡಕ್ಕೆ ಬಿದ್ದಿದೆ. ಅದನ್ನು ತೆಗೆದುಕೊಳ್ಳಲು ಒಬ್ಬರ ನಂತರ ಒಬ್ಬರು ‍ಪ್ರಯತ್ನಿಸಿದ್ದಾರೆ. ಈ ವೇಳೆ ಮುಳುಗಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ’ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ADVERTISEMENT

‘ಅಜ್ಜಿ ಲಕ್ಕವ್ವ ನೀರು ತರಲೆಂದು ಕೃಷಿ ಹೊಂಡಕ್ಕೆ ಬಂದಾಗ, ಮಕ್ಕಳು ನೀರಿನಲ್ಲಿ ಮುಳುಗಿರುವುದು ಗೊತ್ತಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ಗೋಕಾಕ ಡಿವೈಎಸ್ಪಿ ಪ್ರಭು ಡಿ.ಟಿ. ಹಾಗೂ ಸಿಪಿಐ ಗೋಪಾಲ ರಾಠೋಡ ಸ್ಥಳ ಪರಿಶೀಲನೆ ನಡೆಸಿದರು.

ಗೋಕಾಕ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.