ADVERTISEMENT

ಈ ತಬ್ಬಲಿಗಳಿಗೆ ಯಾರು ದಿಕ್ಕು? ತುತ್ತು ಅನ್ನಕ್ಕೆ ನಾಲ್ವರು ಹೆಣ್ಣುಮಕ್ಕಳ ಪರದಾಟ

ತುತ್ತು ಅನ್ನಕ್ಕೂ ಪರದಾಡುತ್ತಿರುವ ನಾಲ್ವರು ಯುವತಿಯರು, ಕರುಣಾಜನಕ ಕತೆ

ಗಣಂಗೂರು ನಂಜೇಗೌಡ
Published 19 ಜನವರಿ 2023, 19:30 IST
Last Updated 19 ಜನವರಿ 2023, 19:30 IST
ಶ್ರೀರಂಗಪಟ್ಟಣ ತಾಲ್ಲೂಕಿನ ಮಹದೇವಪುರ ಗ್ರಾಮದಲ್ಲಿ, ಶಿಥಿಲಗೊಂಡಿರುವ ಸರ್ಕಾರಿ ಕಟ್ಟಡದಲ್ಲಿ ಬೀಡು ಬಿಟ್ಟಿರುವ ಸಹೋದರಿಯರು
ಶ್ರೀರಂಗಪಟ್ಟಣ ತಾಲ್ಲೂಕಿನ ಮಹದೇವಪುರ ಗ್ರಾಮದಲ್ಲಿ, ಶಿಥಿಲಗೊಂಡಿರುವ ಸರ್ಕಾರಿ ಕಟ್ಟಡದಲ್ಲಿ ಬೀಡು ಬಿಟ್ಟಿರುವ ಸಹೋದರಿಯರು   

ಶ್ರೀರಂಗಪಟ್ಟಣ: ಪಾಳು ಬಿದ್ದಿರುವ ಮನೆ, ಕುಸಿಯುವ ಸ್ಥಿತಿಯಲ್ಲಿರುವ ಗೂಡೊಳಗೆ ಬೀಡು ಬಿಟ್ಟಿರುವ ನಾಲ್ಕು ಹೆಣ್ಣು ಜೀವಗಳು. ತುತ್ತು ಅನ್ನಕ್ಕೂ ಪರದಾಡುತ್ತಿರುವ ತಬ್ಬಲಿಗಳು– ಇದು ತಾಲ್ಲೂಕಿನ ಮಹದೇವಪುರ ಗ್ರಾಮದಲ್ಲಿ ಕಂಡುಬಂದ ಕರುಳು ಹಿಂಡುವ ಕರುಣಾಜನಕ ದೃಶ್ಯ.

ಹಾವು, ಹಲ್ಲಿ ಹರಿದಾಡುವ ಶಿಥಿಲ ಕಟ್ಟಡದಲ್ಲಿ ದಿನ ದೂಡುತ್ತಿರುವ ನತದೃಷ್ಟ ಹೆಣ್ಣು ಮಕ್ಕಳು ದಿನವೂ ಹಸಿವಿನಿಂದ ಬಳಲುತ್ತಿವೆ. ತಾಯಿಯನ್ನು ಕಳೆದುಕೊಂಡು ಮದ್ಯ ವ್ಯಸನಿ ತಂದೆಯ ಚಿತ್ರಹಿಂಸೆ ಸಹಿಸುತ್ತಾ ಉಸಿರಾಡುತ್ತಿವೆ. ಭೂಮಿಕಾ (16), ಪಾಯಲ್‌ (15), ತನಿಷಾ (12) ಮತ್ತು ಕಾವೇರಿ (10) ಎಂಬ ಹೆಣ್ಣು ಜೀವಗಳಿಗೆ ದಿಕ್ಕು ದೆಸೆ ಇಲ್ಲದಂತಾಗಿದೆ. ನೆರೆ ಹೊರೆಯವರು ಕೊಡುವ ತಂಗಳು, ಶಾಲೆಯ ಬಿಸಿಯೂಟವೇ ಸದ್ಯಕ್ಕೆ ಈ ಮಕ್ಕಳಿಗೆ ಗತಿಯಾಗಿದೆ.

ಮಹಾರಾಷ್ಟ್ರದಿಂದ ಎಂಟು ವರ್ಷಗಳ ಹಿಂದೆ ಕೂಲಿ ಅರಸಿ ಮಹದೇವಪುರಕ್ಕೆ ಬಂದ ಸಂದೀಪ್‌ ಮತ್ತು ಸಬಾನ ದಂಪತಿ ಮಹದೇವಪುರದ ಜೋಪಡಿಯೊಂದರಲ್ಲಿ ಬೀಡು ಬಿಟ್ಟಿತ್ತು. ಸಂದೀಪ್‌ ಗಾರೆ ಕೆಲಸಗಾರ. ಸಬಾನ ಮೈಸೂರಿನ ನಾಲ್ಕಾರು ಮನೆಗಳಲ್ಲಿ ಮುಸುರೆ ತಿಕ್ಕಿ ಮಕ್ಕಳನ್ನು ಸಾಕುತ್ತಿದ್ದರ, ಶಾಲೆಗೂ ಸೇರಿಸಿದ್ದರು.

ADVERTISEMENT

ದಿನಪೂರ್ತಿ ಮದ್ಯದ ಅಮಲಿನಲ್ಲೇ ಇರುತ್ತಿದ್ದ ಪತಿಯ ಕಿರುಕುಳ, ಕೆಲಸದ ಒತ್ತಡದಿಂದ ಅನಾರೋಗ್ಯಕ್ಕೆ ತುತ್ತಾದ ಸಬಾನ ಎರಡು ತಿಂಗಳ ಹಿಂದೆ ತೀರಿಕೊಂಡಿದ್ದಾರೆ. ಸಂದೀಪ್‌ ತಾನು ದುಡಿದ ಹಣವನ್ನು ಕುಡಿತಕ್ಕೆ ಖರ್ಚು ಮಾಡುತ್ತಿದ್ದು, ತನ್ನ ಮಕ್ಕಳ ಪಾಲಿಗೆ ಇದ್ದೂ ಇಲ್ಲದಂತಿದ್ದಾರೆ. ಹಾಗಾಗಿ ಈ ನತದೃಷ್ಟ ಮಕ್ಕಳು ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ.

ಈ ಕುಟುಂಬಕ್ಕೆ ಪಡಿತರ, ಆಧಾರ್ ಚೀಟಿ ಯಾವುದೂ ಇಲ್ಲ. ಮಕ್ಕಳ ದೈನೇಸಿ ಸ್ಥಿತಿಯನ್ನು ಗಮನಿಸಿದ ಸ್ಥಳೀಯರು ಮುರುಕು ಜೋಪಡಿಯಿಂದ ಲೋಕೋಪಯೋಗಿ ಇಲಾಖೆಯ ಪಾಳು ಕಟ್ಟಡಕ್ಕೆ ತಂದು ಇರಿಸಿದ್ದಾರೆ. ಸಂಕಷ್ಟದ ನಡುವೆಯೂ ಪ್ರಥಮ ಪಿಯುಸಿ ಓದುತ್ತಿರುವ ಭೂಮಿಕಾ ಅವರಿವರನ್ನು ಬೇಡಿ ತನ್ನ ಮೂವರು ಸಹೋದರಿಯರಿಗೆ ಊಟ ನೀಡಿ ಸಲಹುತ್ತಿದ್ದಾಳೆ.

‘ಅಪ್ಪ ಸಂದೀಪ್‌ ಮರಾಠಿ, ಅಮ್ಮ ಸಬಾನ ಮುಸ್ಲಿಂ. ಈ ಕಾರಣಕ್ಕೆ ಅಮ್ಮ ತೀರಿಕೊಂಡಾಗ ಮಣ್ಣು ಮಾಡಲು ಒಬ್ಬ ಮುಸ್ಲಿಮರೂ ಬರಲಿಲ್ಲ. ಈ ಊರಿನವರೇ ದಫನು ಮಾಡಿದರು. ಅಕ್ಕ ಸೋನಾಲಿ ಯುವಕನ ಜತೆ ಹೋದವಳು ಮತ್ತೆ ಬರಲೇ ಇಲ್ಲ. ಅಪ್ಪ ಸುರಕ್ಷಿತವಾಗಿ ಮನೆಗೆ ಬಂದರೆ ಸಾಕು ಎಂದು ತಡರಾತ್ರಿ ವರೆಗೆ ಕಾಯುತ್ತೇವೆ. ಅಪ್ಪ ಏನಾದ್ರೂ ತಂದರೆ ತಿನ್ನುತ್ತೇವೆ; ಇಲ್ಲದಿದ್ದರೆ ಹಾಗೇ ಮಲಗುತ್ತೇವೆ. ನಮಗೆ ಯಾರಾದರೂ ಊಟ, ಬಟ್ಟೆ ಕೊಡಿಸಿದರೆ ಸಾಕು‘ ಎಂದು ಭೂಮಿಕಾ ಹೇಳುವಾಗ ಕಣ್ಣಾಲಿಗಳು ತುಂಬಿ ಬರುತ್ತವೆ.

‘ತಂದೆಯ ಹೆಸರಿಗೆ ವಾಸ ಸ್ಥಳ ಪತ್ರ, ಜಾತಿ ದೃಢೀಕರಣ, ಮತದಾರರ ಗುರುತಿನ ಚೀಟಿ ಮತ್ತು ಆಧಾರ್‌ ಚೀಟಿ ಮಾಡಿಸಬೇಕು. ಅಗತ್ಯ ದಾಖಲೆಗಳ ಸಹಿತ ಅರ್ಜಿ ಸಲ್ಲಿಸಿದರೆ ಪಡಿತರ ಚೀಟಿ ಕೊಡಿಸುತ್ತೇನೆ. ನಾಲ್ವರೂ ಹೆಣ್ಣು ಮಕ್ಕಳನ್ನು ಹಾಸ್ಟೆಲ್‌ಗೆ ಸೇರಿಸಲು ಕ್ರಮ ವಹಿಸುತ್ತೇನೆ‘ ಎಂದು ತಹಶೀಲ್ದಾರ್‌ ಶ್ವೇತಾ ಎನ್‌.ರವೀಂದ್ರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.