ADVERTISEMENT

ಫಾಕ್ಸ್ ಕಾನ್ ಜೊತೆ ‘ಲೆಟರ್‌ ಆಫ್‌ ಇಂಟೆಂಟ್‌’: ಸಿಎಂ ಕಚೇರಿಯಿಂದ ದಾಖಲೆ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2023, 19:45 IST
Last Updated 5 ಮಾರ್ಚ್ 2023, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಭಾರತದಲ್ಲಿ ಹೊಸ ಹೂಡಿಕೆ ಒಪ್ಪಂದ ಆಗಿಲ್ಲ’ ಎಂದು ಫಾಕ್ಸ್ ಕಾನ್ ಕಂಪನಿ ಹೇಳಿಕೆ ನೀಡಿರುವ ಬೆನ್ನಲ್ಲೆ, ಸಂಸ್ಥೆಯ ಪ್ರತಿನಿಧಿ, ಸಹಾಯಕ ಉಪಾಧ್ಯಕ್ಷರು ಸಹಿ ಹಾಕಿದ್ದ ಪತ್ರವನ್ನು ಮುಖ್ಯಮಂತ್ರಿಗಳ ಕಚೇರಿ ಬಿಡುಗಡೆ ಮಾಡಿದೆ.

2023–27ರ ಅವಧಿಯಲ್ಲಿ ದೊಡ್ಡಬಳ್ಳಾಪುರ, ದೇವನಹಳ್ಳಿ ತಾಲ್ಲೂಕುಗಳಲ್ಲಿ 300 ಎಕರೆಯಲ್ಲಿ ಉದ್ಯಮ ಸ್ಥಾಪಿಸಲು ಕರ್ನಾಟಕದ ಜೊತೆ ‘ಲೆಟರ್‌ ಆಫ್‌ ಇಂಟೆಂಟ್‌’ಗೆ ದೇಶದಲ್ಲಿನ ಫಾಕ್ಸ್‌ಕಾನ್ ಪ್ರತಿನಿಧಿ, ಸಹಾಯಕ ಉಪಾಧ್ಯಕ್ಷ ವಿನ್ಸೆಂಟ್‌ ಲೀ ಸಹಿ ಹಾಕಿದ್ದರು ಎಂದು ತಿಳಿಸಿದೆ.

ರಾಜ್ಯದ ಪರವಾಗಿ ಈ ‘ಲೆಟರ್‌ ಆಫ್‌ ಇಂಟೆಂಟ್‌’ಗೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಸೆಲ್ವಕುಮಾರ್‌ ಸಹಿ ಹಾಕಿದ್ದಾರೆ. ಅಂದರೆ, ಹೂಡಿಕೆಗೆ ಆಸಕ್ತಿ ವಹಿಸಿದ ‘ಉದ್ದೇಶಿತ ಪತ್ರ’ವಿದು. ಹೂಡಿಕೆಗೆ ಹಾನ್ ಹಾಯ್ ಟೆಕ್ನಾಲಜಿ ಗ್ರೂಪ್ (ಫಾಕ್ಸ್ ಕಾನ್) ಮುಂದಾದರೆ, ಅನುಮತಿ, ನೋಂದಣಿ, ಮಂಜೂರಾತಿಯ್ನು ಸಂಬಂಧಿತ ಇಲಾಖೆಗಳಿಂದ ಸರ್ಕಾರದ ಒದಗಿಸಲಿದೆ ಎಂದೂ ಪತ್ರದಲ್ಲಿದೆ.

ADVERTISEMENT

ಹೂಡಿಕೆಗೆ ಸಂಬಂಧಿಸಿದಂತೆ ಫಾಕ್ಸ್ ಕಾನ್ ಕಂಪನಿಯ ಜೊತೆ ‘ಒಪ್ಪಂದ’ಕ್ಕೆ ಸಹಿ ಹಾಕಲಾಯಿತು ಎಂದು ಮಾಧ್ಯಮಗಳಲ್ಲಿ ಶುಕ್ರವಾರ ಸುದ್ದಿಯಾಗಿತ್ತು. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಾ ಹೇಳಿಕೆ ನೀಡಿದ್ದರು. ಹೀಗಾಗಿ, ಶನಿವಾರ ಸ್ಪಷ್ಟನೆ ನೀಡಿದ್ದ ಫಾಕ್ಸ್ ಕಾನ್ ಕಂಪನಿ, ‘ಭಾರತದಲ್ಲಿ ಹೊಸತಾಗಿ ಹೂಡಿಕೆ ಸಂಬಂಧ ಯಾವುದೇ ಒಪ್ಪಂದ ಮಾಡಿಕೊಳ್ಳಲಾಗಿಲ್ಲ’ ಎಂದು ಸ್ಪಷ್ಟನೆ ನೀಡಿತ್ತು.

ಜೆಡಿಎಸ್‌, ಕಾಂಗ್ರೆಸ್‌ ಟೀಕೆ
ಫಾಕ್ಸ್ ಕಾನ್ ಕಂಪನಿ ಸ್ಪಷ್ಟನೆ ನೀಡುತ್ತಿದ್ದಂತೆ ಪ್ರತಿಕ್ರಿಯಿಸಿರುವ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ, ‘ಹಾಗಾದರೆ, ಶುಕ್ರವಾರ ಮುಖ್ಯಮಂತ್ರಿ ಬೊಮ್ಮಾಯಿ ಸಮಕ್ಷಮದಲ್ಲಿ ಆಗಿದ್ದೇನು? ಅದೇನು ಒಪ್ಪಂದವೋ ಅಥವಾ ಪ್ರಚಾರದ ಗಿಮಿಕ್ಕೋ? ಜನರಿಗೆ ತಿಳಿಸಬೇಕು’ ಎಂದು ಟ್ವೀಟ್‌ ಮಾಡಿದ್ದಾರೆ.

ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ, ‘ಬೊಮ್ಮಾಯಿ ಹೆಸರೇ ಸುಳ್ಳುಗಾರ. ಸರ್ಕಾರದೊಂದಿಗೆ ಫಾಕ್ಸ್ ಕಾನ್ ಒಪ್ಪಂದಕ್ಕೆ ಸಹಿ ಹಾಕುವುದು, ಆ್ಯಪಲ್ ಐಫೋನ್‌ಗಳನ್ನು ತಯಾರಿಸುವುದು ಮತ್ತು 1 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವುದು ಎಂಬ ಬೊಮ್ಮಾಯಿ ಹೇಳಿಕೆಯೇ ‘ನಕಲಿ’. ಅವರು ಶೇ 40 ಕಮಿಷನ್ ನೀಡದ ಕಾರಣ ಬಹುಶಃ ರದ್ದುಗೊಳಿಸಲಾಗಿದೆ. ಬೊಮ್ಮಾಯಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು’ ಎಂದು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.