ADVERTISEMENT

ರೋಗಿಗಳಿಗೆ ಉಚಿತ ಆಟೊ ಸೇವೆ

ಸುಂಟಿಕೊಪ್ಪ: ದಿನದ 24 ಗಂಟೆ ನೆರವು ನೀಡುತ್ತಿರುವ ಪ್ರಶಾಂತ್‌

ಸುನಿಲ್ ಎಂ.ಎಸ್.
Published 5 ಮೇ 2021, 14:36 IST
Last Updated 5 ಮೇ 2021, 14:36 IST
ಆಟೋದೊಂದಿಗೆ ಬಿ.ಕೆ.ಪ್ರಶಾಂತ್
ಆಟೋದೊಂದಿಗೆ ಬಿ.ಕೆ.ಪ್ರಶಾಂತ್   

ಸುಂಟಿಕೊಪ್ಪ: ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿತರು ಮತ್ತು ಸಾಮಾನ್ಯ ರೋಗಿಗಳನ್ನು ಆಸ್ಪತ್ರೆಗೆ ತುರ್ತಾಗಿ ಸಾಗಿಸಲು ಅಪ್ಪಾರಂಡ ಬಡಾವಣೆಯ ನಿವಾಸಿ, ಆಟೊ ಚಾಲಕ ಬಿ.ಕೆ.ಪ್ರಶಾಂತ್‌ ಅವರು ದಿನದ 24 ಗಂಟೆಯೂ ತುರ್ತು ಸೇವೆಗೆ ಉಚಿತವಾಗಿ ಆಟೊ ಓಡಿಸಲು ಸಿದ್ಧರಾಗಿದ್ದಾರೆ.

ಈ ಭಾಗದಲ್ಲಿ ‘ಕೋಕ’ ಎಂದೇ ಪ್ರಸಿದ್ಧರಾಗಿರುವ ಬಿ.ಕೆ.ಪ್ರಶಾಂತ್ ಅವರ ತಾಯಿಗೆ ಒಂದು ತಿಂಗಳ ಹಿಂದೆ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು. ತಾಯಿಯ ಸಂಕಷ್ಟವನ್ನು ನೇರವಾಗಿ ಕಂಡಿದ್ದ ಅವರು, ಜನಸಾಮಾನ್ಯರ ಸೇವೆಗೆ ತೊಡಗಿಸಿಕೊಳ್ಳಲು ನಿರ್ಧರಿಸಿದರು.

ಕಳೆದ 10 ದಿನಗಳಿಂದ ಕೊರೊನಾ ಪೀಡಿತರು ಸೇರಿದಂತೆ ಸುಮಾರು 25ಕ್ಕೂ ಹೆಚ್ಚು ರೋಗಿಗಳನ್ನು ಸುಂಟಿಕೊಪ್ಪ ಮತ್ತು ಮಡಿಕೇರಿ ಜಿಲ್ಲಾಸ್ಪತ್ರೆಗೆ ಉಚಿತವಾಗಿ ಕರೆದುಕೊಂಡು ಹೋಗಿದ್ದಾರೆ.

ADVERTISEMENT

ಮಾರುಕಟ್ಟೆಯಲ್ಲಿ ಮಲಗಿರುವ ನಿರಾಶ್ರಿತರು, ವೃದ್ಧರು ಸೇರಿದಂತೆ ವಾಹನಗಳು ಸಿಗದೇ ಪರದಾಡುತ್ತಿರುವ ಜನರ ಬಗ್ಗೆ ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಆ ಸ್ಥಳಕ್ಕೆ ಹಾಜರಾಗಿ ನೆರವಾಗುತ್ತಾರೆ ಪ್ರಶಾಂತ್. ಆಂಬುಲೆನ್ಸ್‌ ಬಾರದೆ ತಡವಾದರೂ ಇವರು ಆಟೊದಲ್ಲಿ ಕರೆದುಕೊಂಡು ಹೋಗಿದ್ದಾರೆ.

‘ಇದು ನನ್ನ ಸಣ್ಣ ಸೇವೆ ಅಷ್ಟೇ, ಜಾತಿ, ಧರ್ಮ ಬಿಟ್ಟು ಮಾನವೀಯತೆ ದೃಷ್ಟಿಯಿಂದ ಈ ಕೆಲಸವನ್ನು ಮಾಡುತ್ತಿದ್ದೇನೆ. ಅನಾವಶ್ಯಕವಾಗಿ ಕರೆ ಮಾಡಿ ಕರೆಯಬೇಡಿ. 24 ಗಂಟೆ ಕೂಡ ರೋಗಿಗಳ ಸೇವೆಗೆ ಸಿದ್ಧವಿರುತ್ತದೆ ನನ್ನ ಆಟೊ’ ಎಂದು ಪ್ರಶಾಂತ್‌ ಸಂತೋಷ ಹೇಳುತ್ತಾರೆ.

‘ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿ ಪ್ರಶಾಂತ್ ಅವರ ಸೇವೆ ಅತ್ಯಮೂಲ್ಯವಾದದ್ದು. ಈಗಾಗಲೇ ಆಂಬುಲೆನ್ಸ್‌ಗಳು ಕೋವಿಡ್ ರೋಗಿಗಳನ್ನು ಸಾಗಿಸುವಲ್ಲಿ ನಿರತವಾಗಿವೆ. ಸಾಮಾನ್ಯ ರೋಗಿಗಳಿಗೆ ಕಷ್ಟಕರವಾದ ಸಂದರ್ಭದಲ್ಲಿ ಇವರ ಉಚಿತ ಸೇವೆ ಎಲ್ಲರಿಗೂ ಸಿಗುವಂತಾಗುತ್ತಿದೆ’ ಎಂದು ಡಾ.ಜೀವನ್ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.