ADVERTISEMENT

ಸಂತ್ರಸ್ತರಿಗೆ ಉಚಿತ ನಕ್ಷೆ, ಅಂದಾಜು ವೆಚ್ಚ ಪ್ರತಿ

ಗೋಕಾಕದ ಸಿವಿಲ್‌ ಎಂಜಿನಿಯರ್‌ ನೆರವು

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2019, 12:26 IST
Last Updated 5 ಸೆಪ್ಟೆಂಬರ್ 2019, 12:26 IST

ಬೆಳಗಾವಿ/ ಗೋಕಾಕ: ಜಿಲ್ಲೆಯ ಗೋಕಾಕ ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆರೆ ಹಾವಳಿಯಿಂದ ಮನೆ ಕಳೆದುಕೊಂಡವರಿಗೆ ಮನೆಯ ಮರು ನಿರ್ಮಾಣಕ್ಕೆ ಅಗತ್ಯವಿರುವ ನಕ್ಷೆ ಮತ್ತು ಅಂದಾಜು ವೆಚ್ಚ ಪ್ರತಿಯನ್ನು ಉಚಿತವಾಗಿ ಮಾಡಿಕೊಟ್ಟು ನೆರವಾಗುವುದಾಗಿ ಸಿವಿಲ್‌ ಎಂಜಿನಿಯರ್‌ ಸುಶೀಲ್‌ಕುಮಾರ್‌ ಬೊಂಗಾಳೆ ತಿಳಿಸಿದರು.

‘ಸ್ಥಳಕ್ಕೆ ಭೇಟಿ ನೀಡಿದ ನಂತರವಷ್ಟೇ ನಕ್ಷೆ ಮತ್ತು ಅಂದಾಜು ವೆಚ್ಚ ಪ್ರತಿಯನ್ನು ಸಿದ್ಧಪಡಿಸಬಹುದಾಗಿದೆ. ಹೀಗಾಗಿ, ಗೋಕಾಕ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಷ್ಟೇ ಸೇವೆ ನೀಡಲು ನಿರ್ಧರಿಸಿದ್ದೇನೆ. ₹ 4ಸಾವಿರ ವೆಚ್ಚದ ಕೆಲಸವನ್ನು ಸಂತ್ರಸ್ತರಿಗೆ ಉಚಿತವಾಗಿ ಮಾಡಿಕೊಡುತ್ತೇನೆ. ಸಂಕಷ್ಟದಲ್ಲಿರುವವರಿಗೆ ನೆರವಾಗುವ ಸಣ್ಣ ಪ್ರಯತ್ನ ಮಾಡುತ್ತಿದ್ದೇನೆ’ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಕೆಲವು ಸ್ನೇಹಿತರು ಸೇರಿ ‘ಗೋಕಾಕ ನೆರೆ ಪರಿಹಾರ ತಂಡ’ದಲ್ಲಿ ಮಾಡಿಕೊಂಡಿದ್ದೇವೆ. ವಿವಿಧ ವೃತ್ತಿ ಮಾಡುತ್ತಿರುವವರು ಇದರಲ್ಲಿದ್ದೇವೆ. ₹ 1 ಲಕ್ಷಕ್ಕೂ ಹೆಚ್ಚಿನ ಹಣ ಸಂಗ್ರಹಿಸಿ ಕೆಲವರಿಗೆ ಅಗತ್ಯ ವಸ್ತುಗಳನ್ನು ಕೊಡಿಸಿದ್ದೇವೆ. 6 ಶಾಲೆಗಳ ಮಕ್ಕಳಿಗೆ ಲೇಖನ ಸಾಮಗ್ರಿಗಳನ್ನು ನೀಡಿದ್ದೇವೆ. ಖರ್ಚು ವೆಚ್ಚದ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಂಡಿದ್ದೇವೆ. ಇದರಿಂದ, ದೇಣಿಗೆ ನೀಡಿದವರಿಗೂ ವಿಷಯ ತಿಳಿಯುತ್ತದೆ. ವೈಯಕ್ತಿಕವಾಗಿ ಏನಾದರೂ ಮಾಡಬೇಕು ಎಂದು ಮನಸ್ಸಾಯಿತು. ಹೀಗಾಗಿ, ನನ್ನ ವಿದ್ಯೆ ಆಧರಿಸಿದ ಕೆಲಸವನ್ನು ಉಚಿತವಾಗಿ ಮಾಡಿಕೊಡುತ್ತಿದ್ದೇನೆ. ನಿಜವಾಗಿಯೂ ಸಂತ್ರಸ್ತರಾದವರಿಗೆ ಸಹಾಯ ಮಾಡಬೇಕು ಎನ್ನುವುದು ನನ್ನ ಉದ್ದೇಶವಾಗಿದೆ’ ಎನ್ನುತ್ತಾರೆ ಅವರು.

ADVERTISEMENT

ಆಸಕ್ತರು ಅವರನ್ನು ಗೋಕಾಕದ ಆದಿತ್ಯ ನಗರದಲ್ಲಿರುವ ಮನೆ ಅಥವಾ ರವಿವಾರ ಪೇಟೆಯಲ್ಲಿರುವ ಲಕ್ಷ್ಮಿ ಎಲೆಕ್ಟ್ರಾನಿಕ್ಸ್‌ ಅಂಗಡಿಯಲ್ಲಿ ಭೇಟಿಯಾಗಬಹುದು. ಮೊ: 8050401747 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.