ADVERTISEMENT

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸುವ ‘ಶಕ್ತಿ’ ಯೋಜನೆಗೆ ಇಂದು ಚಾಲನೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2023, 1:35 IST
Last Updated 11 ಜೂನ್ 2023, 1:35 IST
   

ಬೆಂಗಳೂರು: ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಐದು ‘ಗ್ಯಾರಂಟಿ’ಗಳ ಪೈಕಿ, ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಬಸ್‌ ಪ್ರಯಾಣ ಉಚಿತ ಯೋಜನೆ ‘ಶಕ್ತಿ’ಗೆ ರಾಜ್ಯದಾದ್ಯಂತ ಸರ್ಕಾರ ಭಾನುವಾರ (ಜೂನ್‌ 11) ಚಾಲನೆ ನೀಡಲಿದೆ.

ವಿಧಾನಸೌಧದ ಮುಂಭಾಗದಲ್ಲಿ ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯೋಜನೆಯನ್ನು ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 1.00 ಗಂಟೆಯ ನಂತರ ಎಲ್ಲ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೆ ಈ ಸೌಲಭ್ಯ ಸಿಗಲಿದೆ.

ಇದೇ ಸಂದರ್ಭದಲ್ಲಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸ್ಥಳೀಯ ಶಾಸಕರು ಈ ಯೋಜನೆಗೆ ಚಾಲನೆ ನೀಡಲಿದ್ದಾರೆ.

ADVERTISEMENT

‘ಬಡ ಮತ್ತು ಕೆಳ ಮಧ್ಯಮವರ್ಗದ ದುಡಿಯುವ ಮಹಿಳೆಯರ ದಿನದ ಖರ್ಚಿನ ಹೊರೆಯನ್ನು ಇಳಿಸಿ, ಮಹಿಳಾ ಸಬಲೀಕರಣಕ್ಕೆ ಈ ಯೋಜನೆ ಹೊಸ ಭಾಷ್ಯ ಬರೆಯಲಿದೆ’ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಭಾನುವಾರ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದ ಸಿದ್ಧತೆ ಪರಿಶೀಲಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ‘ಮುಖ್ಯಮಂತ್ರಿಯವರು ಯೋಜನೆಗೆ ಚಾಲನೆ ನೀಡಿದ ಬಳಿಕ ಬಸ್‌ನಲ್ಲಿ ನಾವೂ ಒಂದು ಸುತ್ತು ಹೋಗುತ್ತೇವೆ. ಕೆಲವರಿಗೆ ಸಾಂಕೇತಿಕವಾಗಿ ಸ್ಮಾರ್ಟ್ ಕಾರ್ಡ್ ಕೊಡುತ್ತೇವೆ. ಮೂರು ತಿಂಗಳ ಒಳಗೆ ಎಲ್ಲರೂ ಸ್ಮಾರ್ಟ್‌ ಮಾಡಿಸಿಕೊಳ್ಳಬೇಕು’ ಎಂದರು.

‘ಯಾವ ಬಸ್‌ಗಳಲ್ಲಿ ಉಚಿತ ಪ್ರಯಾಣ ಅವಕಾಶ ಸಿಗಲಿದೆ ಎಂದು ಈಗಾಗಲೇ ಜಾಹೀರಾತುಗಳ ಮೂಲಕ ಮಾಹಿತಿ ನೀಡಿದ್ದೇವೆ. ಈ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.