ADVERTISEMENT

ಹುತಾತ್ಮ ಯೋಧನ ಪತ್ನಿಗೆ ಉಚಿತ ಶಿಕ್ಷಣ

5ರಂದು ಕೆಎಸ್‌ಒಯು ಘಟಿಕೋತ್ಸವ– 17,512 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2019, 18:24 IST
Last Updated 2 ಮಾರ್ಚ್ 2019, 18:24 IST
ಎಸ್‌.ಕಲಾವತಿ
ಎಸ್‌.ಕಲಾವತಿ    

ಮೈಸೂರು: ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಮಂಡ್ಯ ಜಿಲ್ಲೆಯ ಯೋಧ ಎಚ್‌.ಗುರು ಪತ್ನಿ ಎಸ್‌.ಕಲಾವತಿ ಅವರಿಗೆ ಉಚಿತ ಶಿಕ್ಷಣ ನೀಡಲು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು) ಮುಂದಾಗಿದೆ.

ಕಲಾವತಿ ಅವರು ಮುಕ್ತ ವಿ.ವಿ ರಾಮನಗರ ಪ್ರಾದೇಶಿಕ ಕೇಂದ್ರದಲ್ಲಿ ಪ್ರಥಮ ವರ್ಷದ ಎಂ.ಎ ರಾಜ್ಯಶಾಸ್ತ್ರ ವಿಭಾಗದಲ್ಲಿ ಪ್ರವೇಶ ಪಡೆದಿದ್ದಾರೆ.

‘ಯೋಧನ ಪತ್ನಿ ಈಗಾಗಲೇ ಶುಲ್ಕ ಪಾವತಿಸಿದ್ದಾರೆ. ಅವರಿಗೆ ಆ ಹಣ ವಾಪಸ್‌ ನೀಡಲಾಗುವುದು. ಅಲ್ಲದೇ, ವಿದ್ಯಾಭ್ಯಾಸ ಮುಗಿಯುವವರೆಗೆ ಯಾವುದೇ ಶುಲ್ಕ ಪಡೆಯದೆ ಉಚಿತವಾಗಿ ಶಿಕ್ಷಣ ನೀಡಲಾಗುವುದು. ಪಿಎಚ್‌.ಡಿ ಮಾಡಲು ಮುಂದಾದರೆ ಅದಕ್ಕೂ ಉಚಿತವಾಗಿ ಅವಕಾಶ ಕಲ್ಪಿಸಲಾಗುವುದು. ಇದಕ್ಕೆ ವ್ಯವಸ್ಥಾಪನಾ ಮಂಡಳಿ ಸಭೆಯಲ್ಲಿ ಅನುಮೋದನೆ ಪಡೆಯಲಾಗುವುದು’ ಎಂದು ವಿ.ವಿ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ತಿಳಿಸಿದರು.

ADVERTISEMENT

ಘಟಿಕೋತ್ಸವ: ನಾಲ್ಕು ವರ್ಷಗಳ ಬಳಿಕ ಕೆಎಸ್‌ಒಯು ಘಟಿಕೋತ್ಸವಕ್ಕೆ ಕಾಲ ಕೂಡಿ ಬಂದಿದ್ದು, ಮಾರ್ಚ್‌ 5ರಂದು ಪದವಿ ಪ್ರದಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.2018–19ನೇ ಸಾಲಿನಿಂದ ಐದು ವರ್ಷಗಳ ಅವಧಿಗೆ ಮಾನ್ಯತೆ ಲಭಿಸಿರುವುದರಿಂದ ಈ ನಿರ್ಧಾರ ಕೈಗೊಂಡಿದೆ. 2013–14ನೇ ಸಾಲಿನಲ್ಲಿ ಮುಕ್ತ ವಿ.ವಿ ಮಾನ್ಯತೆಯನ್ನು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಹಿಂಪಡೆದ ಕಾರಣ ಘಟಿಕೋತ್ಸವ ಆಯೋಜಿಸಲು ಸಾಧ್ಯವಾಗಿರಲಿಲ್ಲ ಎಂದು ಹೇಳಿದರು.

‘2012–13ನೇ ಸಾಲು ಹಾಗೂ ಅದಕ್ಕಿಂತ ಹಿಂದಿನ ವರ್ಷಗಳಲ್ಲಿ ವ್ಯಾಸಂಗ ಮಾಡಿದ 17,512 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. ಈ ಪ್ರಕ್ರಿಯೆಗೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ. ಆದರೆ, ರಾಜ್ಯಪಾಲರು ಪಾಲ್ಗೊಳ್ಳುತ್ತಿಲ್ಲ. ಈ ಬಾರಿ ಯಾರಿಗೂ ಗೌರವ ಡಾಕ್ಟರೇಟ್‌ ನೀಡುತ್ತಿಲ್ಲ’ ಎಂದು ಅವರು ಮಾಹಿತಿ ನೀಡಿದರು.

‘ವಿ.ವಿ.ಗೆ ಮಾನ್ಯತೆ ತಂದುಕೊಡುವುದರಲ್ಲೇ ಹೆಚ್ಚು ಸಮಯ ವ್ಯರ್ಥವಾಯಿತು. ಹಲವು ಯೋಜನೆಗಳನ್ನು ಪೂರ್ಣಗೊಳಿಸುವ ಉದ್ದೇಶದಿಂದ ಕುಲಪತಿ ಹುದ್ದೆಯ ಅವಧಿ ವಿಸ್ತರಿಸುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದೇನೆ’ ಎಂದರು. ಮೂರು ವರ್ಷಗಳ ಅವರ ಅಧಿಕಾರಾವಧಿ ಮಾರ್ಚ್‌ 10ರಂದು ಅಂತ್ಯಗೊಳ್ಳಲಿದ್ದು, ರಾಜ್ಯಪಾಲರ ಕಚೇರಿಯು ಈಗಾಗಲೇ ಕುಲಪತಿ ಹುದ್ದೆಗೆ ಅರ್ಜಿ ಆಹ್ವಾನಿಸಿದೆ.

ಹಣಕ್ಕಾಗಿ ಕುಟುಂಬದಲ್ಲಿ ಕಲಹವಿಲ್ಲ: ಕಲಾವತಿ ಸ್ಪಷ್ಟನೆ

ಹುತಾತ್ಮ ಯೋಧ ಗುಡಿಗೆರೆ ಎಚ್.ಗುರು ಕುಟುಂಬದಲ್ಲಿ ಹಣಕ್ಕಾಗಿ ಯಾವುದೇ ಒಡಕು ಉಂಟಾಗಿಲ್ಲ ಎಂದು ಯೋಧನ ಪತ್ನಿ ಕಲಾವತಿ ಸ್ಪಷ್ಟಪಡಿಸಿದರು.

ಪತಿ ನಿಧನದಿಂದ ಕುಟುಂಬದ ಊರುಗೋಲು ದೂರವಾದ ಕಾರಣ ಆರ್ಥಿಕ ಸಂಕಷ್ಟ ಎದುರಾಗಿತ್ತು. ಇಂತಹ ಸಂದರ್ಭದಲ್ಲಿ ದೇಶದಾದ್ಯಂತ ಜನರು ಕೋಟಿಗಟ್ಟಲೆ ಹಣದ ನೆರವು ನೀಡಿದ್ದಾರೆ. ಆದರೆ, ಹಣಕ್ಕಾಗಿ ಕುಟುಂಬದಲ್ಲಿ ಕಿತ್ತಾಟ ನಡೆದಿಲ್ಲ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಪತಿ ಹುತಾತ್ಮರಾಗಿ 15 ದಿನಗಳು ಕಳೆದರೂ ಕುಟುಂಬದಲ್ಲಿ ಇನ್ನೂ ಶೋಕ ಮಡುಗಟ್ಟಿದೆ. ದುಃಖದಿಂದ ಹೊರಬರಲು ನಮಗೆ ಸಾಧ್ಯವಾಗುತ್ತಿಲ್ಲ. ಕುಟುಂಬಕ್ಕೆ ಜನರು ಮಾನಸಿಕ, ನೈತಿಕ ಸ್ಥೈರ್ಯ ತುಂಬುವ ಜೊತೆಗೆ ಆರ್ಥಿಕ ನೆರವು ನೀಡಿದ್ದಾರೆ’ ಎಂದರು.

‘ಮತ್ತೊಂದು ಮದುವೆ ಮಾಡಿಕೊಳ್ಳುವ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ.ಯೋಧನ ಪತ್ನಿಯಾಗಿಯೇ ಉಳಿಯಬೇಕು ಎಂದು ನಿರ್ಧರಿಸಿದ್ದೇನೆ. ಕುಟುಂಬದಲ್ಲಿ ಪತಿಯ ಜವಾಬ್ದಾರಿ ನಿರ್ವಹಿಸುತ್ತೇನೆ. ಮನೆಯಲ್ಲಿ ಕಲಹ ಇದೆ ಎಂದಾಗಲಿ, ನನ್ನ ಮದುವೆ ವಿಚಾರವಾಗಿ ಸುಳ್ಳು ಸುದ್ದಿಯನ್ನು ಬಿತ್ತರಿಸದೆ ನೆಮ್ಮದಿ ಜೀವನಕ್ಕೆ ಅನುವು ಮಾಡಿಕೊಡಬೇಕು’ ಎಂದು ಮನವಿ ಮಾಡಿದರು.

ಗುರು ತಾಯಿ ಚಿಕ್ಕತಾಯಮ್ಮ, ಮುಖಂಡರಾದ ಪದ್ಮಾವತಿ, ಪಿ.ಶ್ವೇತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.