ಆರ್. ಅಶೋಕ
ಬೆಂಗಳೂರು: ‘ಪ್ರತಿ ಶುಕ್ರವಾರ ಚಾಮರಾಜಪೇಟೆ ರಸ್ತೆಯಲ್ಲಿ ನಮಾಜ್ ಮಾಡುತ್ತಾರೆ. ಇದರಿಂದ ಟ್ರಾಫಿಕ್ ಸಮಸ್ಯೆ ಆಗುವುದಿಲ್ಲವೇ? ರಂಜಾನ್, ಈದ್ ಮಿಲಾದ್ ವೇಳೆ ರಸ್ತೆ ಬಂದ್ ಮಾಡುತ್ತಾರೆ. ಆಗ ಸರ್ಕಾರದಿಂದ ಅನುಮತಿ ಪಡೆದಿರುತ್ತಾರೆಯೇ’ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಪ್ರಶ್ನಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕೆಲವು ಕಡೆ ಮೆರವಣಿಗೆಯಲ್ಲಿ ಕತ್ತಿ ಹಿಡಿದು ಆಚರಣೆ ಮಾಡುತ್ತಾರೆ. ಅದನ್ನು ಶಸ್ತ್ರಾಸ್ತ್ರಗಳು ಎಂದು ಪರಿಗಣಿಸುವುದಿಲ್ಲ. ಆರ್‌ಎಸ್‌ಎಸ್ ಪಥ ಸಂಚಲನದಿಂದ ಎಂದೂ ಯಾರಿಗೂ ಹಾನಿಯಾಗಿಲ್ಲ. ಸರ್ಕಾರಕ್ಕೆ ಆಗಿರುವ ಸಮಸ್ಯೆ ಏನು’ ಎಂದು ಅವರು ಪ್ರಶ್ನಿಸಿದರು.
‘ಆರ್‌ಎಸ್‌ಎಸ್ ಆರಂಭವಾಗಿ 100 ವರ್ಷಗಳ ಬಳಿಕ ಪಥಸಂಚಲನದ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿದೆ. ಇಷ್ಟು ವರ್ಷ ಇಲ್ಲದ ಸಮಸ್ಯೆ ಈಗ ಏಕೆ ಉದ್ಭವಿಸಿದೆ’ ಎಂದು ಅಶೋಕ ಪ್ರಶ್ನಿಸಿದರು.
‘ಶಾಲಾ ಆವರಣದಲ್ಲಿ ಹೊರಗಿನ ಸಂಘಟನೆಗಳಿಂದ ಕಾರ್ಯಕ್ರಮ ಮಾಡುವುದನ್ನು ನಿಷೇಧಿಸುವ ಬಗ್ಗೆ ಆಗಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಆದೇಶ ಮಾಡಿರುವುದಕ್ಕೆ ಸಾಕ್ಷಿ ಇಲ್ಲ. ಈ ವಿಚಾರ ಅಂದಿನ ಬಿಜೆಪಿ ಸರ್ಕಾರದ ಸಚಿವ ಸಂಪುಟ ಸಭೆಯಲ್ಲೂ ಚರ್ಚೆ ಆಗಿರಲಿಲ್ಲ’ ಎಂದರು.
‘ಚಾಮರಾಜಪೇಟೆಯ ಒಂದೇ ಒಂದು ಶಾಲೆಗೆ ಸಂಬಂಧಿಸಿದಂತೆ ಒಂದು ಆದೇಶ ಮಾಡಲಾಗಿತ್ತು. ಇದನ್ನು ಎಲ್ಲದ್ದಕ್ಕೂ ಅನ್ವಯಿಸಿ ಈಗ ಸರ್ಕಾರ ಆದೇಶ ಮಾಡಿದೆ. ಜಗದೀಶ ಶೆಟ್ಟರ್ ಅಥವಾ ಅಂದಿನ ಸಚಿವರ ಸಹಿ ಇರುವ ಆದೇಶದ ಪ್ರತಿ ಇದ್ದರೆ ಬಹಿರಂಗ ಮಾಡಲಿ’ ಎಂದು ಅಶೋಕ ಸವಾಲೆಸೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.