ADVERTISEMENT

ಪೂರ್ಣಾವಧಿ ಸಿ.ಎಂ: ಮತ್ತೆ ಮುನ್ನೆಲೆಗೆ

ಐದು ವರ್ಷ ಸಿದ್ದರಾಮಯ್ಯ ಮುಂದುವರಿಯುತ್ತಾರೆ ಎಂದೇ ಭಾವಿಸಿದ್ದೇವೆ: ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2025, 15:57 IST
Last Updated 13 ಫೆಬ್ರುವರಿ 2025, 15:57 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ಮುಖ್ಯಮಂತ್ರಿ ಪಟ್ಟದಲ್ಲಿ ಸಿದ್ದರಾಮಯ್ಯ ಪೂರ್ಣಾವಧಿ ಮುಗಿಸಲಿದ್ದಾರೆ’ ಎಂಬ ಕೆಲವು ಸಚಿವರ ಹೇಳಿಕೆಯು ಆಡಳಿತಾರೂಢ ಕಾಂಗ್ರೆಸ್​ನಲ್ಲಿ ‘ಅಧಿಕಾರ ಹಂಚಿಕೆ’ ಕುರಿತ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.

ಚುನಾವಣಾ ರಾಜಕೀಯದಲ್ಲಿ ಮುಂದುವರಿಯುವ ಸಿದ್ದರಾಮಯ್ಯ ಅವರ ಇಂಗಿತ ಕಾಂಗ್ರೆಸ್‌ನ ಆಂತರಿಕ ರಾಜಕಾರಣದಲ್ಲಿ ಹೊಸ ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿದೆ. ದೇವರಾಜ ಅರಸು ಅವರ ‘ಸುದೀರ್ಘ ಅವಧಿಯ ಮುಖ್ಯಮಂತ್ರಿ’ ದಾಖಲೆಯನ್ನು ಅಳಿಸಿ ಹಾಕುವ ನಂಬಿಕೆಯ ಅವರ ಮಾತು ಹೊಸ ಕಿಚ್ಚು ಹಚ್ಚಿದೆ. ಜೊತೆಗೆ, ಅಧಿಕಾರ ಹಂಚಿಕೆ ಅಷ್ಟು ಸುಲಭದ ವಿಷಯವಲ್ಲ ಎಂಬ ಪರೋಕ್ಷ ಸಂದೇಶವನ್ನೂ ರವಾನಿಸಿದೆ.

ಐದು ವರ್ಷ ಮುಖ್ಯಮಂತ್ರಿ: ‘ಸಿದ್ದರಾಮಯ್ಯ ಅವರು ದೀರ್ಘಾವಧಿ ಮುಖ್ಯಮಂತ್ರಿಯಾಗಿ ದಾಖಲೆ ಮಾಡಲಿ ಎಂದು ನಾನೂ ಹಾರೈಸುತ್ತೇನೆ. ಅವರು ಈ ಐದು ವರ್ಷ ಆಡಳಿತ ಪೂರ್ಣಗೊಳಿಸಿದರೆ ಸಹಜವಾಗಿ ದಾಖಲೆ ಆಗಲಿದೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

ADVERTISEMENT

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಸಿದ್ದರಾಮಯ್ಯ ಅವರನ್ನು ಶಾಸಕರು ಆಯ್ಕೆ ಮಾಡಿದ್ದರು. ಆ ಸಂದರ್ಭದಲ್ಲಿ ಹೈಕಮಾಂಡ್‌ನವರು ಎರಡೂವರೆ ವರ್ಷ ಅಧಿಕಾರ ಎಂದೇನೂ ನಮಗೆ ಹೇಳಿರಲಿಲ್ಲ. ಹೀಗಾಗಿ ನಾವೆಲ್ಲ ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ ಎಂದೇ ಭಾವಿಸಿದ್ದೇವೆ' ಎಂದರು.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಮಲ್ಲಿಕಾರ್ಜುನ ಖರ್ಗೆ ಸುಳಿವು ಕೊಟ್ಟಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಅದರ ಬಗ್ಗೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ. ಹೈಕಮಾಂಡ್ ತೀರ್ಮಾನ ಏನೇ ಇದ್ದರೂ ನಾವು ಒಪ್ಪಿಕೊಳ್ಳುತ್ತೇವೆ’ ಎಂದರು.

‌ಪೂರ್ಣಾವಧಿ ಇರುತ್ತಾರೆ: ‘ದೇವರಾಜ ಅರಸು ಅವರು ಏಳು ವರ್ಷ ಮುಖ್ಯಮಂತ್ರಿ ಆಗಿದ್ದರು. ಸಿದ್ದರಾಮಯ್ಯನವರು ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಇರುತ್ತಾರೆ’ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.

‘ಏಳು ವರ್ಷಗಳಲ್ಲ, ಸಿದ್ದರಾಮಯ್ಯ ಹತ್ತು ವರ್ಷ ಇರುತ್ತಾರೆ. ಅವರನ್ನು ಹೈಕಮಾಂಡ್ ಮುಖ್ಯಮಂತ್ರಿ ಮಾಡಿದೆ. ಸದ್ಯ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ’ ಎಂದರು.

ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ‘ಈ ಅವಧಿ ಪೂರೈಸಿ ಮತ್ತೆ ಸಿದ್ದರಾಮಯ್ಯ ನೇತೃತ್ವದಲ್ಲಿಯೇ ಚುನಾವಣೆ ಎದುರಿಸುತ್ತೇವೆ. ಮುಂದಿನ ಬಾರಿಯೂ ನಾವು ಅಧಿಕಾರಕ್ಕೆ‌ ಬರುತ್ತೇವೆ’ ಎಂದೂ ಹೇಳಿದರು.

ಮುಖ್ಯಮಂತ್ರಿ ಕೆಲಸ ಸರ್ಕಾರಿ ಕೆಲಸವೇ? ಅದು ಸಾರ್ವಜನಿಕ ಕೆಲಸ. ಜನರಿಗಾಗಿ ಕೆಲಸ ಮಾಡುವಾಗ ನಿವೃತ್ತಿ ಇರುತ್ತದೆಯೇ? ಸಾರ್ವಜನಿಕ ಜೀವನದಲ್ಲಿ ನಿವೃತ್ತಿ ಇರುವುದಿಲ್ಲ
ಎಚ್‌.ಸಿ. ಮಹದೇವಪ್ಪ ಸಮಾಜ ಕಲ್ಯಾಣ ಸಚಿವ 
ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿ ಆಗಬೇಕೆಂದು ಎಲ್ಲರೂ ಹೇಳಿದ್ದಾರೆ. ತಕ್ಷಣ ಹೇಳಿದರೆ ಏನೂ ಆಗುವುದಿಲ್ಲ. ಅದನ್ನೂ ಕಾದು ನೋಡಬೇಕು
ಸತೀಶ ಜಾರಕಿಹೊಳಿ ಲೋಕೋಪಯೋಗಿ ಸಚಿವ

ರಾಜಕೀಯದಲ್ಲಿ ಮುಂದುವರಿಯಲು ಒತ್ತಡ: ಸಿದ್ದರಾಮಯ್ಯ

‘ನನಗೆ ಚುನಾವಣಾ ರಾಜಕೀಯ ಸ್ವಲ್ಪ ಮಟ್ಟಿಗೆ ಸಾಕು ಅನಿಸಿದೆ. ಆದರೆ ಜನರ ಪ್ರೀತಿ ವಿಶ್ವಾಸ ಜಾಸ್ತಿ ಇರುವುದರಿಂದ ಮುಂದುವರಿಯಬೇಕೇ ಬೇಡವೇ ಎಂದು ಅವರ ಅಭಿಪ್ರಾಯ ಪಡೆದು ತೀರ್ಮಾನ ಮಾಡುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಆ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಸಕ್ರಿಯ ರಾಜಕೀಯದಲ್ಲಿ ಮುಂದುವರಿಯುವ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ. ಸುದ್ದಿವಾಹಿನಿ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿರುವ ಮುಖ್ಯಮಂತ್ರಿ ‘ಮುಂದೆ ಚುನಾವಣೆಯಲ್ಲಿ ನಿಲ್ಲಬಾರದು ಎಂದು ಮಾನಸಿಕವಾಗಿ ನಾನು ತಯಾರಾಗಿದ್ದೇನೆ. ಆದರೆ ಜನ ಹಿತೈಷಿಗಳು ಸ್ನೇಹಿತರು ಎಲ್ಲರೂ ರಾಜಕೀಯದಲ್ಲಿ ಮುಂದುವರಿಯಬೇಕೆಂದು ಒತ್ತಡ ಹಾಕುತ್ತಿದ್ದಾರೆ’ ಎಂದಿದ್ದಾರೆ. ‘ಅಧಿಕಾರ ಜನ ಕೊಡುವುದಲ್ಲವೇ? ಮುಂದಿನ ಚುನಾವಣೆಯಲ್ಲೂ ಜನ ಅಧಿಕಾರ ಕೊಟ್ಟರೆ ನಾವು ಮುಂದುವರಿಯುತ್ತೇವೆ. ಮುಂದಿನ ಚುನಾವಣೆಯಲ್ಲೂ ಜನ ನಮಗೆ ಅಭಿಮಾನದಿಂದ ಅಧಿಕಾರ ಕೊಡುತ್ತಾರೆಂಬ ವಿಶ್ವಾಸ ನನಗೇನೊ ಇದೆ’ ಎಂದು ಹೇಳಿದ್ದಾರೆ. ‘ಒಂದು ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಜನರ ಆಶೀರ್ವಾದ ಬೇಕಾಗುತ್ತದೆ. ಆ ಮೇಲೆ ಮುಖ್ಯಮಂತ್ರಿ ಸಚಿವರು ಆಗಲು ಹೈಕಮಾಂಡ್‌ ಶಾಸಕರ ಆರ್ಶೀವಾದ ಬೇಕು’ ಎಂದೂ ಹೇಳಿದ್ದಾರೆ. ಪ್ರತಿಕ್ರಿಯಿಸದ ಡಿಕೆಶಿ: ‘ಸಿದ್ದರಾಮಯ್ಯ ಪೂರ್ಣ ಅವಧಿ ಮುಖ್ಯಮಂತ್ರಿ ಆಗಿ ಇರುತ್ತಾರೆ’ ಎಂಬ ಕೆಲವು ಸಚಿವರ ಹೇಳಿಕೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನಿರಾಕರಿಸಿದರು. ಈ ಬಗ್ಗೆ ಸುದ್ದಿಗಾರರು ಪ್ರಸ್ತಾಪಿಸಿದಾಗ ತಲೆಯಾಡಿಸುತ್ತಾ ಅವರು ಹೆಜ್ಜೆ ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.