ADVERTISEMENT

ಗೆಫೆಕ್ಸ್‌ ಮೇಳ: ದೇಸಿ ಕತೆ–ಕಾವ್ಯಗಳೂ ಆ್ಯನಿಮೇಷನ್‌ಗೆ ಬರಲಿ

ಹೊಸ ಹಾದಿ–ಸಾಧ್ಯತೆಗಳ ಚರ್ಚೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2025, 23:44 IST
Last Updated 27 ಫೆಬ್ರುವರಿ 2025, 23:44 IST
‘ಗೆಫೆಕ್ಸ್‌– 2025’ ಸಮ್ಮೇಳನದ ಮಾಹಿತಿ ಪತ್ರವನ್ನು ಪ್ರಿಯಾಂಕ್‌ ಖರ್ಗೆ ಬಿಡುಗಡೆ ಮಾಡಿದರು. ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಏಕರೂಪ್ ಕೌರ್, ಬೆಂಗಳೂರು ಗೆಫೆಕ್ಸ್ ಅಧ್ಯಕ್ಷ ಬಿರೇನ್ ಘೋಷ್ ಇದ್ದರು
‘ಗೆಫೆಕ್ಸ್‌– 2025’ ಸಮ್ಮೇಳನದ ಮಾಹಿತಿ ಪತ್ರವನ್ನು ಪ್ರಿಯಾಂಕ್‌ ಖರ್ಗೆ ಬಿಡುಗಡೆ ಮಾಡಿದರು. ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಏಕರೂಪ್ ಕೌರ್, ಬೆಂಗಳೂರು ಗೆಫೆಕ್ಸ್ ಅಧ್ಯಕ್ಷ ಬಿರೇನ್ ಘೋಷ್ ಇದ್ದರು   

ಬೆಂಗಳೂರು: ‘ಅವತಾರ್‌, ಇಂಡಿಯಾನಾ ಜೋನ್ಸ್‌, ಟ್ರಾನ್ಸ್‌ಫಾರ್ಮರ್ಸ್‌ನಂತಹ ಅತಿಮಾನುಷ ಶಕ್ತಿಗಳ ಸಿನಿಮಾಗಳಿಗೆ ಭಾರತೀಯರು ಈವರೆಗೆ ಆ್ಯನಿಮೇಷನ್‌, ವಿಎಫ್‌ಎಕ್ಸ್‌ ಸೇವೆ ಒದಗಿಸಿದ್ದು ಸಾಕು. ನಮ್ಮಲ್ಲಿಯೇ ಹೇರಳವಾಗಿರುವ ಅತಿಮಾನುಷ ಕತೆಗಳು, ಪುರಾಣಗಳು, ಜನಪದ ಕತೆ–ಕಾವ್ಯಗಳನ್ನು ಆ್ಯನಿಮೇಷನ್‌ ಮೂಲಕ ಪರದೆ ಮೇಲೆ ತರುವ ಪ್ರಯತ್ನವಾಗಬೇಕು...’

‘ಕತೆಗಳನ್ನು ಆ್ಯನಿಮೇಷನ್‌, ವಿಎಫ್‌ಎಕ್ಸ್‌, 3ಡಿ ಆಯಾಮಗಳಲ್ಲಿ ಕಣ್ಣಿಗೆ ಕಟ್ಟಿಕೊಡುವಂತಹ ಸೃಜನಶೀಲ ತಂತ್ರಜ್ಞರು ಇದ್ದರು. ಆದರೆ, ಆಗ ಭಾರತದಲ್ಲಿ ಅಂತಹ ತಂತ್ರಜ್ಞಾನವಿರಲಿಲ್ಲ, ನಮ್ಮ ತಂತ್ರಜ್ಞರ ಕೈಗೆ ಅವು ಎಟುಕುತ್ತಲೂ ಇರಲಿಲ್ಲ. ಆದರೀಗ ಸ್ಥಿತಿ ಬದಲಾಗಿದೆ. ತಂತ್ರಜ್ಞಾನ ಮನೆ ಬಾಗಿಲಿನವರೆಗೆ ಬಂದಿದೆ, ಅದನ್ನು ಬಳಸಿಕೊಳ್ಳುವಂತಹ ಸೃಜನಶೀಲ ತಂತ್ರಜ್ಞರಿಲ್ಲ...’

‘ನಿಜದ ರೇಸಿಂಗ್‌ನ ಅನುಭವ ನೀಡುವ ನೀಡ್‌ ಫಾರ್‌ ಸ್ಫೀಡ್‌, ಫೋರ್ಜಾ, ಜಿಟಿಎ ಮೊದಲಾದ ಡಿಜಿಟಲ್ ಗೇಮ್‌ಗಳು ವಿಶ್ವದಾದ್ಯಂತ ಹೆಸರಾಗಿವೆ. ನಮ್ಮ ಕರಾವಳಿಯ ಕಂಬಳ, ತಮಿಳಿನ ಜಲ್ಲಿಕಟ್ಟು, ಕುಸ್ತಿಗಳನ್ನೂ ಅಷ್ಟೇ ಕರಾರುವಾಕ್ಕಾಗಿ ಡಿಜಿಟಲ್‌ ಗೇಮಿಂಗ್‌ಗೆ ಇಳಿಸುವ ಕೆಲಸ ಏಕಾಗಬಾರದು...’

ADVERTISEMENT

ಆ್ಯನಿಮೇಷನ್‌, ಡಿಜಿಟಲ್‌ ಪ್ರದರ್ಶನ ಕಲೆ, ಗೇಮಿಂಗ್‌ ಕ್ಷೇತ್ರದಲ್ಲಿನ ಆಗುಹೋಗುಗಳು ಮತ್ತು ಮುಂದೆ ಸಾಗಬೇಕಾಗಿರುವ ಹಾದಿಯ ಬಗ್ಗೆ ಚರ್ಚಿಸಲು ರಾಜ್ಯ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆ, ಕಿಯೋನಿಸ್ಕ್‌ ಸಹಯೋಗದಲ್ಲಿ ಆಯೋಜಿಸಲಾಗಿರುವ ‘ಬೆಂಗಳೂರು ಗೆಫೆಕ್ಸ್‌–2025’ ಮೂರು ದಿನಗಳ ಮೇಳದ ಉದ್ಘಾಟನಾ ವೇದಿಕೆಯಲ್ಲಿ ಗುರುವಾರ ಕೇಳಿಬಂದ ಮಾತುಗಳಿವು.

ಮೇಲೆ ಚರ್ಚಿಸಲಾದ ಎಲ್ಲ ವಿಷಯಗಳಲ್ಲೂ ಹೊಸ ಹಾದಿ ತುಳಿಯಲು ಸರ್ಕಾರ ಮತ್ತು ಉದ್ಯಮ ಕ್ಷೇತ್ರ ಪರಸ್ಪರ ಸಹಕಾರದಲ್ಲಿ ಕೆಲಸ ಮಾಡಬೇಕು ಎಂಬ ಅಭಿಮತದೊಂದಿಗೆ ಉದ್ಘಾಟನಾ ಕಾರ್ಯಕ್ರಮಕ್ಕೆ ತೆರೆಬಿತ್ತು. 

ನಗರದ ಲಲಿತ್ ಅಶೋಕ್‌ ಹೋಟೆಲ್‌ನಲ್ಲಿ ಇದೇ ಮಾರ್ಚ್‌ 1ರವರೆಗೆ ಮೇಳ ನಡೆಯಲಿದೆ. ವಿವಿಧ ವಿಭಾಗಗಳಲ್ಲಿ ಆಯೋಜಿಸಲಾಗಿರುವ ಸ್ಪರ್ಧೆಗಳಲ್ಲಿ ಭಾಗವಹಿಸಲು ದೇಶದ ವಿವಿಧೆಡೆಯಿಂದ ಬಂದಿರುವ ತಂತ್ರಜ್ಞರು ಮತ್ತು ಕಲಾವಿದರು ಮೇಳದಲ್ಲಿ ಕಿಕ್ಕಿರಿದು ತುಂಬಿದ್ದರು. ಸ್ಪರ್ಧೆಯ ಭಾಗವಾಗಿ ಗುರುವಾರ ಪ್ರದರ್ಶಿಸಿದ ಹಲವು ಆ್ಯನಿಮೇಟೆಡ್‌ ದೃಶ್ಯಾವಳಿಗಳು, ವಿಎಫ್‌ಎಕ್ಸ್‌ ಕಲಾಕೃತಿಗಳು ನೋಡುಗರ ಕಣ್ಸೆಳೆದವು. 3ಡಿ ಮತ್ತು 4ಡಿ ಆಯಾಮದ ಅನುಭವ ನೀಡುವ ಕಿರುಚಿತ್ರಗಳು, ದೃಶ್ಯಾವಳಿಗಳಿಗೆ ಅಪಾರ ಮೆಚ್ಚುಗೆ ವ್ಯಕ್ತವಾಯಿತು.

ಉತ್ಕೃಷ್ಟ ಮಟ್ಟದ ಆ್ಯನಿಮೇಟೆಡ್‌ ಮತ್ತು ವಿಎಫ್‌ಎಫ್‌ ಕಲಾಕೃತಿಗಳನ್ನು ಭಾರತದಲ್ಲೇ ಸೃಷ್ಟಿಸುವ ಕೆಲಸ ನಿಧಾನವಾಗಿಯಾದರೂ ಆರಂಭವಾಗಿದೆ.
–ಬೀರೇನ್‌ ಘೋಷ್‌, ಅದ್ಯಕ್ಷ, ಬೆಂಗಳೂರು ಗೇಫೆಕ್ಸ್‌
ಈ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರವು ಹಿಂದಿನ ಬಜೆಟ್‌ನಲ್ಲಿ ₹300 ಕೋಟಿ ಇರಿಸಿತ್ತು. ಮುಂದೆಯೂ ಅಂತಹ ಸಹಕಾರ ಸರ್ಕಾರದಿಂದ ಸಿಗಲಿದೆ.
–ಶರತ್‌ ಬಚ್ಚೇಗೌಡ, ಅಧ್ಯಕ್ಷ, ಕಿಯೊನಿಸ್ಕ್‌
ಕೇಂದ್ರ ಸರ್ಕಾರವೂ ಈ ಕ್ಷೇತ್ರಕ್ಕೆ ಪೂರಕವಾಗಿ ಮುಂಬೈನಲ್ಲಿ ಏಪ್ರಿಲ್‌ 1ರಿಂದ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಪ್‌ ಕ್ರಿಯೇಟೀವ್‌ ಟೆಕ್ನಾಲಜಿ (ಐಐಸಿಟಿ) ಆರಂಭಿಸುತ್ತಿದೆ.
–ಸಂಜಯ್ ಜಾಜು, ಕಾರ್ಯದರ್ಶಿ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ
ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಆ್ಯನಿಮೇಷನ್‌ ಅವಶ್ಯಕತೆ ಇದ್ದು, ಅದಕ್ಕಾಗಿ ವಿದೇಶಗಳನ್ನು ಅವಲಂಬಿಸಿದ್ದೆವು. ಈಗ ಬೆಂಗಳೂರಿನಲ್ಲೇ ಅದು ಸಾಧ್ಯವಾಗುತ್ತಿದೆ.
–ಕಿರಣ್‌ ಮಜುಂದಾರ್ ಷಾ, ಬಯೊಕಾನ್‌ ಅಧ್ಯಕ್ಷೆ
‘ಕರ್ನಾಟಕದಿಂದಲೇ ಆರಂಭ’
‘ಕೇಂದ್ರ ಸರ್ಕಾರದ ಕೌಶಲ ಭಾರತ, ಡಿಜಿಟಲ್‌ ಭಾರತ, ವಿಕಸಿತ ಭಾರತ ಮೊದಲಾದ ಮಹತ್ವಾಕಾಂಕ್ಷಿ ಯೋಜನೆಗಳೆಲ್ಲಾ ಕರ್ನಾಟಕದಲ್ಲೇ ಆರಂಭವಾಗುತ್ತದೆ. ವಿಜ್ಞಾನ, ತಂತ್ರಜ್ಞಾನ ಮತ್ತು ಆಧುನಿಕತೆಯನ್ನು ಅಳವಡಿಸಿ ಕೊಳ್ಳುವಲ್ಲಿ ರಾಜ್ಯವು ಸದಾ ಮುಂದಿನ ಸಾಲಿನಲ್ಲಿ ಇರುತ್ತದೆ’ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು. ‘ದೇಶದಲ್ಲಿ ಡಿಜಿಟಲ್‌ ಗೇಮಿಂಗ್‌ ಕ್ಷೇತ್ರ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. 2024ರೊಂದರಲ್ಲೇ ಸುಮಾರು 2.30 ಕೋಟಿ ಹೊಸ ಗೇಮರ್‌ಗಳು ಸೇರ್ಪಡೆಯಾಗಿದ್ದಾರೆ. ಒಟ್ಟು ಗೇಮರ್‌ಗಳ ಸಂಖ್ಯೆ 59 ಕೋಟಿಯ ಗಡಿ ದಾಟಿದೆ. ಇದರಲ್ಲಿ ನಮ್ಮದೇ ಆಟಗಳನ್ನು, ಕತೆಗಳನ್ನು ಸೇರಿಸಲು ಇರುವ ಅವಕಾಶ ಎಷ್ಟಿದೆ ಎಂಬುದನ್ನು ಈ ಸಂಖ್ಯೆಗಳೇ ಹೇಳುತ್ತವೆ’ ಎಂದರು. ‘ಕೇಂದ್ರ ಸರ್ಕಾರವು ಶೇ 28ರಷ್ಟು ಜಿಎಸ್‌ಟಿ ಹೇರಿದ್ದರೂ ಈ ಕ್ಷೇತ್ರ ಗಣನೀಯ ಪ್ರಗತಿ ಸಾಧಿಸಿದೆ. ರಾಜ್ಯದಲ್ಲೇ ಈ ಕ್ಷೇತ್ರದ 300ಕ್ಕೂ ಹೆಚ್ಚು ಕಂಪನಿಗಳಿವೆ. ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿರುವ ಎಲ್ಲ ಸಹಕಾರವನ್ನು ರಾಜ್ಯ ಸರ್ಕಾರ ನೀಡಲಿದೆ. ಕೇಂದ್ರವೂ ನೀಡಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.