ADVERTISEMENT

ಗಂಗಾ ಕಲ್ಯಾಣ ಯೋಜನೆಯ ಸ್ವರೂಪ ಬದಲು: ಕಾರಜೋಳ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2020, 19:30 IST
Last Updated 23 ಮಾರ್ಚ್ 2020, 19:30 IST
   

ಬೆಂಗಳೂರು: ಗಂಗಾ ಕಲ್ಯಾಣ ಯೋಜನೆಯ ಸ್ವರೂಪ ಬದಲಿಸಲಾಗುವುದು. ಕೊಳವೆಬಾವಿ ತೋಡಿದ ತಿಂಗಳಲ್ಲಿ ವಿದ್ಯುತ್‌ ಸಂಪರ್ಕ ನೀಡಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ವಿಧಾನಸಭೆಯಲ್ಲಿ ಸೋಮವಾರ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಆರಗ ಜ್ಞಾನೇಂದ್ರ ಪ್ರಶ್ನೆಗೆ ಅವರು ಉತ್ತರಿಸಿದರು.

‘ಗಂಗಾಕಲ್ಯಾಣ ಯೋಜನೆಯಿಂದ ಫಲಾನುಭವಿಗಳ ಜೀವನ ಮಟ್ಟ ಸುಧಾರಣೆಯಾಗಿದೆ. ಕೃಷಿ ಚಟುವಟಿಕೆಗಳು ಹೆಚ್ಚಾಗಿ ಕೃಷಿಕರು ಆರ್ಥಿಕವಾಗಿ ಸಬಲೀಕರಣಗೊಂಡಿದ್ದಾರೆ. ಆದರೆ, ಯೋಜನೆ ಅನುಷ್ಠಾನದಲ್ಲಿ ವಿಳಂಬವಾಗುತ್ತಿರುವುದು ನಿಜ. ಕೆಲವಡೆ ಕೊಳವೆಬಾವಿ ಕೊರೆದರೆ ಮೋಟರ್ ಪಂಪ್ ಅಳವಡಿಸಲು ಸಾಕಷ್ಟು ಸಮಯ ಹಿಡಿಯುತ್ತಿದೆ. ಅಲ್ಲಿಂದ ವಿದ್ಯುತ್ ಸಂಪರ್ಕಕ್ಕೂ ವಿಳಂಬವಾಗುತ್ತಿರುವುದು ನಿಜ’ ಎಂದರು.

ADVERTISEMENT

‘ಈ ವಿಳಂಬ ತಪ್ಪಿಸಲು ಕೊಳವೆಬಾವಿ ಕೊರೆಯುವುದರಿಂದ ಆರಂಭಿಸಿ, ವಿದ್ಯುತ್ ಸಂಪರ್ಕ ಕಲ್ಪಿಸಿ ನೀರು ಹೊರ ಬರುವವರೆಗೂ ಸಂಪೂರ್ಣವಾದ ಪ್ಯಾಕೇಜ್ ಟೆಂಡರ್ ನೀಡಲು ಚಿಂತನೆ ನಡೆಸಲಾಗಿದೆ. ನಾನು ಈ ಹಿಂದೆ ಸಣ್ಣ ನೀರಾವರಿ ಸಚಿವನಾಗಿದ್ದಾಗ ಈ ನಿರ್ಧಾರ ತೆಗೆದುಕೊಂಡಿದ್ದೆ. ಸಮಾಜ ಕಲ್ಯಾಣ ಇಲಾಖೆಯ ಗಂಗಾ ಕಲ್ಯಾಣ ಯೋಜನೆಗೂ ಅದೇ ಮಾದರಿಯ ಗುತ್ತಿಗೆ ಪದ್ಧತಿಯನ್ನು ಜಾರಿಗೆ ತರಲಾಗುವುದು’ ಎಂದರು.

ಆರಗ ಜ್ಞಾನೇಂದ್ರ, ‘ನಿಗದಿತ ಅವಧಿಯಲ್ಲಿ ಯೋಜನೆಯನ್ನು ಅನುಷ್ಠಾನಕ್ಕೆ ತನ್ನಿ. ಇಲ್ಲವಾದರೆ ನಿಲ್ಲಿಸಿ ಬಿಡಿ’ ಎಂದು ಸಲಹೆ ನೀಡಿದರು.

ಕೆ.ಜಿ.ಬೋಪಯ್ಯ ಮಾತನಾಡಿ, ‘ಗಂಗಾ ಕಲ್ಯಾಣ ಯೋಜನೆಯ ವಿದ್ಯುತ್ ಸಂಪರ್ಕಕ್ಕೆ ಇಲಾಖೆಯಿಂದ ₹50 ಸಾವಿರ ಮಾತ್ರ ನೀಡಲಾಗುತ್ತಿದೆ. ಇದು ಸಾಲುವುದಿಲ್ಲ. ಮಲೆನಾಡು ಭಾಗದಲ್ಲಿ ವಿದ್ಯುತ್ ಸಂಪರ್ಕದ ವೆಚ್ಚ ದುಬಾರಿಯಾಗಿದೆ’ ಎಂದರು.ಕಾರಜೋಳ, ‘ಇಲಾಖೆ ₹50 ಸಾವಿರವನ್ನು ಮಾತ್ರ ಕೊಡಲಿದೆ. ಇನ್ನೂ ಹೆಚ್ಚಾದರೆ ಇಂಧನ ಇಲಾಖೆಯಲ್ಲೇ ಇರುವ ಪರಿಶಿಷ್ಟ ಜಾತಿಯ ಉಪಯೋಜನೆ ಹಾಗೂ ಪರಿಶಿಷ್ಟ ಪಂಗಡದ ಉಪಯೋಜನೆಯ ಅನುದಾನವನ್ನು ಖರ್ಚು ಮಾಡಿ ಸಂಪರ್ಕ ನೀಡಲು ಅವಕಾಶ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.