ADVERTISEMENT

ಗೋ ರಕ್ಷಣೆಗೆ ಸೂಕ್ತ ಕಾನೂನು ಅಗತ್ಯ: ಪೇಜಾವರ ಶ್ರೀ

ಉಡುಪಿಯಲ್ಲಿ ಪೇಜಾವರ ಶ್ರೀ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2019, 19:15 IST
Last Updated 2 ಜೂನ್ 2019, 19:15 IST
ವಿಶ್ವೇಶತೀರ್ಥ ಸ್ವಾಮೀಜಿ
ವಿಶ್ವೇಶತೀರ್ಥ ಸ್ವಾಮೀಜಿ   

ಉಡುಪಿ: ‘ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಮತ್ತೊಮ್ಮೆ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಅವರು ದೃಢಸಂಕಲ್ಪ ಮಾಡಿ ಶೀಘ್ರವೇ ಗೋ ರಕ್ಷಣೆ ಕುರಿತಂತೆ ಇಡೀ ದೇಶಕ್ಕೆ ಅನ್ವಯವಾಗುವ ಕಾನೂನು ಜಾರಿಗೆ ತರಬೇಕು’ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಒತ್ತಾಯಿಸಿದರು.

ಉಡುಪಿ ರಥಬೀದಿಯಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಕಾನೂನು ಜಾರಿಗೆ ಅವರಿಗೆ ಯಾವುದೇ ಪಕ್ಷದ ಬೆಂಬಲವೂ ಬೇಕಾಗಿಲ್ಲ. ಗೋವುಗಳ ರಕ್ಷಣೆ ಕೇವಲ ಧಾರ್ಮಿಕ ದೃಷ್ಟಿಯಿಂದ ಮಾತ್ರವಲ್ಲ, ಆರ್ಥಿಕ ದೃಷ್ಟಿಯಿಂದಲೂ ಮುಖ್ಯವಾಗಿದೆ. ಪಶು ಸಂತತಿ ಉಳಿದರೆ ಮಾತ್ರ ನಾವು ಸಂತೋಷದಿಂದ ಬದುಕಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

‘ಹುಲಿ, ಸಿಂಹ ಸೇರಿದಂತೆ ಅಳಿವಿನಂಚಿನಲ್ಲಿರುವ ವನ್ಯಜೀವಿಗಳ ರಕ್ಷಣೆಗೆ ಸರ್ಕಾರ ಗಮನ ಕೊಡುತ್ತದೆ. ಸಿಂಹ, ಹುಲಿಗಳಿಗಿಂತಲೂ ಗೋವಿನ ಸಂತತಿ ಕಡಿಮೆಯಾಗಿದೆ. ಆದರೆ, ಈ ಸಂತತಿ ಉಳಿಯಬೇಕೆಂಬ ಕಾಳಜಿ ಯಾವ ಸರ್ಕಾರಕ್ಕೂ ಇಲ್ಲ’ ಎಂದು ದೂರಿದರು.

ADVERTISEMENT

‘ಗೋ ಹತ್ಯೆ ಹೇಯ ಕೃತ್ಯ’

‘ಗೋವುಗಳನ್ನು ಕೊಲ್ಲುವ ಮನಃಸ್ಥಿತಿ ಹೊಂದಿರುವವರು ಮನುಷ್ಯರೇ ಅಲ್ಲ, ಅವರು ರಾಕ್ಷಸ ವರ್ಗಕ್ಕೆ ಸೇರುತ್ತಾರೆ. ಗೋ ಹತ್ಯೆ ಮಾಡಿ ಗೋ ಮಾಂಸ ಸೇವಿಸುವುದು ಅತ್ಯಂತ ಹೇಯವಾದ ಕಾರ್ಯ’ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.