ADVERTISEMENT

ಮೇಲ್ವರ್ಗದ ಮೀಸಲಾತಿ ಪಟ್ಟಿಗೆ ಜಿಎಸ್‌ಬಿ: ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2021, 20:29 IST
Last Updated 15 ಮಾರ್ಚ್ 2021, 20:29 IST
ಸಂವಿಧಾನ ಮತ್ತು ಮೀಸಲಾತಿ–ಪ್ರಾತಿನಿಧಿಕ ಚಿತ್ರ
ಸಂವಿಧಾನ ಮತ್ತು ಮೀಸಲಾತಿ–ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಆರ್ಥಿಕವಾಗಿ ಹಿಂದುಳಿದಿರುವ ಮೇಲ್ವರ್ಗದ ಕುಟುಂಬಗಳಿಗೆ ಶೈಕ್ಷಣಿಕ ಮತ್ತು ಸರ್ಕಾರಿ ನೌಕರಿಯಲ್ಲಿ ಶೇ 10 ಮೀಸಲಾತಿ ಪಡೆಯಲು ರಾಜ್ಯ ಸರ್ಕಾರ ರೂಪಿಸಿರುವ ಜಾತಿ ಪಟ್ಟಿಯಲ್ಲಿ ಗೌಡ ಸಾರಸ್ವತ ಸಮುದಾಯ(ಜಿಎಸ್‌ಬಿ) ಮತ್ತು ಬಿಟ್ಟು ಹೋಗಿರುವ ಸಣ್ಣ ಪುಟ್ಟ ಜಾತಿಗಳನ್ನು ಸೇರಿಸಲು ಕ್ರಮ ತೆಗೆದುಕೊಳ್ಳುವುದಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ಭರವಸೆ ನೀಡಿದರು.

ಬಿಜೆಪಿಯ ಡಿ.ವೇದವ್ಯಾಸ ಕಾಮತ್ ಮತ್ತು ಸುನಿಲ್‌ ಕುಮಾರ್‌ ಅವರ ಗಮನ ಸೆಳೆಯುವ ಸೂಚನೆಯಡಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಸಂಬಂಧ ಕಂದಾಯ ಇಲಾಖೆ ಕಾರ್ಯದರ್ಶಿಯವರಿಗೆ ಆದೇಶ ನೀಡಿದ್ದಾರೆ ಎಂದು ಹೇಳಿದರು.

ಈ ವಿಷಯವಾಗಿ ಹಿರಿಯ ಸಚಿವರು ಮತ್ತು ಮುಖ್ಯಮಂತ್ರಿಯವರೂ ಗಮನಹರಿಸಬೇಕು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ADVERTISEMENT

ವಿಷಯ ಪ್ರಸ್ತಾಪಿಸಿದ ವೇದವ್ಯಾಸ ಕಾಮತ್‌, ಗೌಡ ಸಾರಸ್ವತ ಬ್ರಾಹ್ಮಣರಲ್ಲಿ ಅತಿ ಕಡುಬಡವರಿದ್ದಾರೆ. ಕೇಂದ್ರ ಸರ್ಕಾರ ಜಾರಿ ಮಾಡಿರುವ ಶೇ 10 ರಷ್ಟು ಮೀಸಲಾತಿ ಪಡೆಯುವ ಉದ್ದೇಶದಿಂದ ಜಾತಿ–ಆದಾಯ ಪ್ರಮಾಣ ಪತ್ರ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದರು.

ಅಲ್ಲದೆ, ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡುವ ಕುರಿತ ಸರ್ಕಾರದ ಸುತ್ತೋಲೆಯಲ್ಲಿ ಗೌಡ ಸಾರಸ್ವತ ಸಮುದಾಯದ ಹೆಸರನ್ನು ಸೇರ್ಪಡೆಗೊಳಿಸಿಲ್ಲ ಎಂದರು.

ವಾಣಿ/ವೈಶ್ಯವಾಣಿ ಸೇರ್ಪಡೆಗೆ ಸಚಿವ ಆಗ್ರಹ: ಮಂಗಳೂರು, ಉಡುಪಿ, ಉತ್ತರಕನ್ನಡ, ಬೆಳಗಾವಿ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ವಾಣಿ/ವೈಶ್ಯವಾಣಿ ಸಮುದಾಯವನ್ನೂ ಮೇಲ್ವರ್ಗದ ಹಿಂದುಳಿದ ಜಾತಿ ಪಟ್ಟಿಗೆ ಸೇರಿಸಬೇಕು ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.