ADVERTISEMENT

ಗೌರಿ ಲಂಕೇಶ್ ಹತ್ಯೆ: ಸಾಕ್ಷಿಗೆ ಬೆದರಿಕೆ ಆರೋಪ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2022, 20:51 IST
Last Updated 15 ನವೆಂಬರ್ 2022, 20:51 IST

ಬೆಂಗಳೂರು: ‘ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಆರೋಪಿ ಪರಶುರಾಮ್ ವಾಗ್ಮೋರೆಯನ್ನು ಗುರುತಿಸಿದ ಸಾಕ್ಷಿಯೊಬ್ಬರಿಗೆ ಫೋನ್ ಮೂಲಕ ಜೀವ ಬೆದರಿಕೆ ಹಾಕಲಾಗಿದೆ’ ಎಂದು ಪ್ರಕರಣದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಎಸ್. ಬಾಲನ್‌ ವಿಚಾರಣಾ ನ್ಯಾಯಾಲಯದಲ್ಲಿ ಆಪಾದಿಸಿದ್ದಾರೆ.

ನಗರ ಸಿವಿಲ್‌ ಕೋರ್ಟ್‌ ಪ್ರಧಾನ ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ ಅವರು ಮಂಗಳವಾರಗೌರಿ ಹತ್ಯೆ ಪ್ರಕರಣದ ವಿಚಾರಣೆ ನಡೆಸಿದ ವೇಳೆ ಬಾಲನ್‌ ಈ ಕುರಿತಂತೆ ಆರೋಪಿಸಿದರು.

‘ಪರಶುರಾಮ್ ವಾಗ್ಮೋರೆಯ ಸ್ನೇಹಿತನೊಬ್ಬ ಆರೋಪಿಯನ್ನು ಗುರುತಿಸುವ ಮತ್ತು ಆರೋಪಿಯ ಮೇಲಿರುವ ಇತರ ಪ್ರಕರಣಗಳ ಬಗ್ಗೆ ಸಾಕ್ಷಿ ನುಡಿಯಬೇಕಾಗಿತ್ತು. ಆದರೆ, ಸೋಮವಾರವಷ್ಟೇ (ನ.14) ನಾಲ್ಕು ಜನರು ಈತನ ಮನೆಗೆ ನುಗ್ಗಿ ಸಾಕ್ಷಿ ನುಡಿಯದಂತೆ ಬೆದರಿಕೆ ಒಡ್ಡಿದ್ದಾರೆ. ಮಂಗಳವಾರ (ನ.15) ಬೆಳಿಗ್ಗೆ ಬೆಂಗಳೂರಿನಲ್ಲಿದ್ದಾಗ ಎರಡು ಮೂರು ಬಾರಿ ಫೋನ್ ಮೂಲಕ ಧಮಕಿ ಹಾಕಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು ವಿಡಿಯೊ ಕಾನ್ಫರೆನ್ಸ್ ಮೂಲಕ ಆರೋಪಿಗಳಿಗೆ ಮೌಖಿಕ ಎಚ್ಚರಿಕೆ ನೀಡಿ, ‘ಈ ರೀತಿಯ ಘಟನೆ ಮರುಕಳಿಸಬಾರದು. ಸಾಕ್ಷಿಯನ್ನು ಪೊಲೀಸ್ ಬೆಂಗಾವಲಿನಲ್ಲಿ ಸಿಂಧಗಿಗೆ ತಲುಪಿಸಬೇಕು. ಸ್ಥಳೀಯ ಪೊಲೀಸರು ಸಾಕ್ಷಿಗೆ ಸೂಕ್ತ ಭದ್ರತೆ ಒದಗಿಸಬೇಕು’ ಎಂದು ನಿರ್ದೇಶಿಸಿದರು. ವಿಚಾರಣೆಯನ್ನು ಡಿಸೆಂಬರ್‌ಗೆ ಮುಂದೂಡಲಾಗಿದೆ.

ಗೌರಿ ಅವರನ್ನು 2017ರ ಸೆಪ್ಟೆಂಬರ್ 5ರಂದು ರಾಜರಾಜೇಶ್ವರಿ ನಗರದಲ್ಲಿನ ಅವರ ಮನೆಯ ಹೊರಗೆ ಆಗಂತುಕರು ಗುಂಡಿಟ್ಟು ಹತ್ಯೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.