ADVERTISEMENT

ಗೆಜೆಟೆಡ್‌ ಪ್ರೊಬೇಷನರಿ: ಮೀಸಲು ಕಾಯ್ದೆ ಪಾಸ್‌

ಬಿಜೆಪಿ ಸದಸ್ಯರ ಗದ್ದಲದ ನಡುವೆ ಮೂರು ಮಸೂದೆಗಳಿಗೆ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2018, 19:19 IST
Last Updated 21 ಡಿಸೆಂಬರ್ 2018, 19:19 IST
   

ಬೆಳಗಾವಿ: ಬಿಜೆಪಿ ಸದಸ್ಯರ ಗದ್ದಲದ ಮಧ್ಯೆಯೇ ‘ಕರ್ನಾಟಕ ಸಿವಿಲ್‌ ಸೇವೆಗಳ (ನೇಮಕಾತಿ ಸಮಯದಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಕಾರ್ಯವಿಧಾನ)–2018’ ಕಾಯ್ದೆ ರೂಪಿಸಲು ಮಂಡಿಸಿದ ಮಸೂದೆ ಸೇರಿ ಒಟ್ಟು ಮೂರು ಮಸೂದೆಗಳು ಅಂಗೀಕಾರಗೊಂಡವು.

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಗೆಜೆಟೆಡ್‌ ಪ್ರೊಬೇಷನರಿಗೆ ನಡೆಸುವ ನೇರ ನೇಮಕಾತಿಗಳಲ್ಲಿ ಮೀಸಲಾತಿ ಅನ್ವಯಿಸುವ ಕುರಿತು ಗೊಂದಲ ಪರಿಹರಿಸುವ ಉದ್ದೇಶದಿಂದ ಸರ್ಕಾರ ಈ ಕಾಯ್ದೆ ಜಾರಿಗೆ ತರಲಿದೆ. 1994ರ ಮೇ 3ರಿಂದಲೇ ಈ ಕಾಯ್ದೆ ಪೂರ್ವಾನ್ವಯ ಆಗಲಿದೆ. ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ನಡೆಯುವ ಸ್ಪರ್ಧಾತ್ಮಕ ಮುಖ್ಯ ಪರೀಕ್ಷೆ, ಪೂರ್ವಭಾವಿ ಪರೀಕ್ಷೆ, ಅಂತಿಮ ಆಯ್ಕೆ ಪಟ್ಟಿ ಮತ್ತು ಹೆಚ್ಚುವರಿ ಪಟ್ಟಿಗಳಿಗೆ ಅಭ್ಯರ್ಥಿಗಳ ಆಯ್ಕೆಯ ಕಾರ್ಯವಿಧಾನವನ್ನು ಈ ಕಾಯ್ದೆಯಲ್ಲಿ ವಿವರಿಸಲಾಗಿದೆ.

ರಾಜ್ಯ ಸರ್ಕಾರ 1994 ಮೇ 3ರಂದು ಹೊರಡಿಸಿದ್ದ ಆದೇಶದಲ್ಲಿ ಗ್ರೂಪ್‌ ಎ, ಬಿ, ಸಿ ಮತ್ತು ಡಿ ಹುದ್ದೆಗಳ ನೇಮಕಾತಿ ವೇಳೆ ಅನುಸರಿಸಬೇಕಾದ ಮೀಸಲು ಪದ್ದತಿ ಕುರಿತು ಸ್ಪಷ್ಟಪಡಿಸಿದೆ. ಆಯ್ಕೆ ಪ್ರಾಧಿಕಾರವು ಯಾವ ಜಾತಿ, ಪಂಗಡ, ವರ್ಗಗಳಿಗೆ ಸೇರಿದ್ದಾರೆ ಎನ್ನುವುದನ್ನು ಪರಿಗಣಿಸದೆ, ಕೇವಲ ಅರ್ಹತೆ ಆಧಾರದಲ್ಲಿ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಬೇಕು ಎಂದು ಈ ಆದೇಶದಲ್ಲಿದೆ. ಅಂದರೆ, ಎಸ್‌.ಸಿ, ಎಸ್‌.ಟಿ ಹಾಗೂ ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಸಾಮಾನ್ಯ ವರ್ಗದ
ಅಭ್ಯರ್ಥಿಗಳಿಗಿಂತ ಹೆಚ್ಚಿನ ಅಂಕ ಪಡೆದರೆ ಅಂತಹ ಅಭ್ಯರ್ಥಿಗಳು ಸಾಮಾನ್ಯ ವರ್ಗದ ಅಡಿ ಆಯ್ಕೆ ಆಗಲಿದ್ದಾರೆ.

ADVERTISEMENT

ಅಂಗೀಕಾರವಾದ ಇತರ ಮಸೂದೆಗಳು

* ಮುಖ್ಯಮಂತ್ರಿಯ ‘ರಾಜಕೀಯ ಕಾರ್ಯದರ್ಶಿ’ ಹುದ್ದೆಯನ್ನು ‘ಲಾಭದಾಯಕ ಹುದ್ದೆ’ ವ್ಯಾಪ್ತಿಯಿಂದ ಹೊರಗಿಡುವ ಉದ್ದೇಶದಿಂದ ‘ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣಾ) ತಿದ್ದುಪಡಿ ಮಸೂದೆ’

* ವಿಧಾನಪರಿಷತ್‌ನಿಂದ ತಿದ್ದುಪಡಿಯಾಗಿ ಅಂಗೀಕಾರಗೊಂಡ ‘ರೈ ತಾಂತ್ರಿಕ ವಿಶ್ವವಿದ್ಯಾಲಯ ಬೆಂಗಳೂರು ತಿದ್ದುಪಡಿ ಮಸೂದೆ’

ಕಾಯ್ದೆ ಅನುಷ್ಠಾನದ ಪರಿಣಾಮ

* 1998, 1999 ಮತ್ತು 2004ನೇ ಸಾಲಿನ ನೇಮಕಾತಿ ಪ್ರಕರಣದಲ್ಲಿ ಹೈಕೋರ್ಟ್‌ ನೀಡಿದ್ದ ತೀರ್ಪಿನಿಂದ ಹುದ್ದೆ ಕಳೆದುಕೊಳ್ಳುವ ಮತ್ತು ಹಿಂಬಡ್ತಿ ಭೀತಿಯಲ್ಲಿರುವವರಿಗೆ ರಕ್ಷಣೆ ಸಿಗಲಿದೆ

* 2015ರ ಗೆಜೆಟೆಡ್‌ ಪ್ರೊಬೇಷನರಿಯ ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆಗಳಿಗೆ ಅಭ್ಯರ್ಥಿಗಳ ಆಯ್ಕೆಗೆ 1995ರಆದೇಶದಲ್ಲಿರುವ ಮೀಸಲಾತಿ ಪದ್ಧತಿ ಅನ್ವಯ ಆಗಲಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.