ಬೆಂಗಳೂರು: ಗೆಜೆಟೆಡ್ ಪ್ರೊಬೇಷನರಿ ಗ್ರೂಪ್ ‘ಎ’ ಮತ್ತು ಗ್ರೂಪ್ ‘ಬಿ’ ವೃಂದದ 384 ಹುದ್ದೆಗಳ ನೇಮಕಾತಿಗೆ ಆರಂಭವಾದ ಮುಖ್ಯಪರೀಕ್ಷೆಗೆ ಹಾಜರಾಗಲು ಕೋರ್ಟ್ ಅನುಮತಿ ಪಡೆದ ಅಭ್ಯರ್ಥಿಗಳಿಗೆ ಕರ್ನಾಟಕ ಲೋಕಸೇವಾ ಆಯೋಗ ಪರೀಕ್ಷಾ ಕೇಂದ್ರದ ಬಳಿಯೂ ಪ್ರವೇಶ ಪತ್ರ ನೀಡಿತು.
ಪೂರ್ವಭಾವಿ ಪರೀಕ್ಷೆಯಲ್ಲಿ ಅರ್ಹತೆ ಪಡೆಯದಿದ್ದರೂ ಮುಖ್ಯಪರೀಕ್ಷೆ ಬರೆಯಲು 500ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಕೋರ್ಟ್ ಅನುಮತಿ ನೀಡಿದ್ದು, ಅನುಮತಿ ಪಡೆದ ಅಭ್ಯರ್ಥಿಗಳಿಗೆ ಬೆಂಗಳೂರಿನ ಮೈಸೂರು ರಸ್ತೆಯ ಕಸ್ತೂರಬಾ ನಗರದ ಬಿಬಿಎಂಪಿ ಸಂಯೋಜಿತ ಪಿಯು ಕಾಲೇಜಿನಲ್ಲಿ ಪರೀಕ್ಷೆ ಆಯೋಜಿಸಲಾಗಿತ್ತು.
ಮುಖ್ಯ ಪರೀಕ್ಷೆ ಬರೆಯಲು ಕೋರ್ಟ್‌ನಿಂದ ಶುಕ್ರವಾರ ಅನುಮತಿ ಪಡೆದುಕೊಂಡಿದ್ದ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಶುಕ್ರವಾರ ರಾತ್ರಿಯವರೆಗೂ ಶುಲ್ಕ ಪಾವತಿಸಿದರು. ಅವರಿಗೆ ಕೆಪಿಎಸ್‌ಸಿ ಕಚೇರಿಯಲ್ಲಿ ತಡರಾತ್ರಿವರೆಗೂ ಪ್ರವೇಶ ಪತ್ರ ನೀಡಲಾಗಿತ್ತು. ರಾತ್ರಿ ಪಡೆಯಲು ಸಾಧ್ಯವಾಗದವರಿಗೆ ಬೆಳಿಗ್ಗೆ ಪರೀಕ್ಷಾ ಕೇಂದ್ರದಲ್ಲೇ ವಿತರಿಸಲಾಯಿತು.
ಕಡ್ಡಾಯ ಕನ್ನಡ ಬೆಳಿಗ್ಗೆ 10ರಿಂದ 12ರವರೆಗೆ, ಕಡ್ಡಾಯ ಇಂಗ್ಲಿಷ್ ಮಧ್ಯಾಹ್ನ 2ರಿಂದ 4ರವರೆಗೆ ನಡೆಯಿತು.
‘ಕೋರ್ಟ್ ಅಂತಿಮ ಕ್ಷಣದಲ್ಲಿ ಆದೇಶ ನೀಡಿದ ಕಾರಣ ತಡರಾತ್ರಿವರೆಗೂ ಕೆಲಸ ಮಾಡಿದೆವು. ಎಲ್ಲರಿಗೂ ಅವಕಾಶ ನೀಡಿದೆವು. ಈ ಪ್ರಕ್ರಿಯೆ ಸಾಕಷ್ಟು ಟೀಕೆಗಳಿಗೆ ಕಾರಣವಾಯಿತು. ಆದರೆ, ಕೋರ್ಟ್ ಆದೇಶ ಪಾಲನೆ ಅನಿವಾರ್ಯವಾಗಿತ್ತು’ ಎಂದು ಕೆಪಿಎಸ್‌ಸಿ ಅಧಿಕಾರಿಯೊಬ್ಬರು ಹೇಳಿದರು.
ಸಾಮಾನ್ಯ ಅಧ್ಯಯನ ಪರೀಕ್ಷೆ ಮೇ 5ಕ್ಕೆ
ಮೇ 5ರಂದು ಬೆಳಿಗ್ಗೆ 10ರಿಂದ 1, ಸಾಮಾನ್ಯ ಅಧ್ಯಯನ– 1; ಮೇ 7ರಂದು ಬೆಳಿಗ್ಗೆ 9ರಿಂದ 12, ಸಾಮಾನ್ಯ ಅಧ್ಯಯನ–2; ಮೇ 7ರಂದು ಮಧ್ಯಾಹ್ನ 2ರಿಂದ 5, ಸಾಮಾನ್ಯ ಅಧ್ಯಯನ–3; ಮೇ 9ರಂದು ಬೆಳಿಗ್ಗೆ 9ರಿಂದ 12, ಸಾಮಾನ್ಯ ಅಧ್ಯಯನ–4; ಮೇ 9ರಂದು ಮಧ್ಯಾಹ್ನ 2 ಗಂಟೆಯಿಂದ 5 ಗಂಟೆಯವರೆಗೆ ನಡೆಯಲಿದೆ.
ಮುಖ್ಯ ಪರೀಕ್ಷೆಯ ಪ್ರವೇಶ ಪತ್ರ ಪಡೆಯಲು ಹಲವು ಅಭ್ಯರ್ಥಿಗಳು ಕೆಪಿಎಸ್‌ಸಿ ಕಚೇರಿ ಬಳಿ ರಾತ್ರಿ 12.30ರವರೆಗೂ ಪರದಾಟ ನಡೆಸಿದ್ದಾರೆ. ದೂರದ ಊರುಗಳಿಂದ ತಡರಾತ್ರಿ ಬಂದಿದ್ದ ಮಹಿಳಾ ಅಭ್ಯರ್ಥಿಗಳು, ಅಂಗವಿಕಲರು ಪ್ರವೇಶ ಪತ್ರ ಸಿಗದ ಕಾರಣ ತೊಂದರೆ ಅನುಭವಿಸಿದರು.
‘ಕೋರ್ಟ್ ಬೆಳಿಗ್ಗೆಯೇ ತೀರ್ಪು ನೀಡಿದ್ದರೂ ಕೆಪಿಎಸ್‌ಸಿ ರಾತ್ರಿ 12ಕ್ಕೆ ಅರ್ಜಿ ಬಿಡುಗಡೆ ಮಾಡಿದೆ. ಬೆಂಗಳೂರಿನಲ್ಲೇ ಪ್ರತ್ಯೇಕ ಪರೀಕ್ಷಾ ಕೇಂದ್ರ ತೆರೆದಿದೆ. ಮಹಿಳೆಯರು ಅಷ್ಟು ಸಮಯದಲ್ಲಿ ಬಂದು ಹೇಗೆ ಪ್ರವೇಶ ಪತ್ರ ಪಡೆಯಬೇಕು. ಕೆಲವರು ತಡರಾತ್ರಿ ಬಂದರೂ ಅವರಿಗೆ ನೀಡದೆ, ಪರೀಕ್ಷಾ ಕೇಂದ್ರದ ಬಳಿ ನೀಡುವುದಾಗಿ ವಾಪಸ್ ಕಳುಹಿಸಿದರು’ ಎಂದು ಮಹಿಳಾ ಅಭ್ಯರ್ಥಿಯೊಬ್ಬರು ಅಳಲು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.