ಜಿಬಿಎ
ಸುವರ್ಣ ವಿಧಾನಸೌಧ(ಬೆಳಗಾವಿ): ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಸದಸ್ಯರ ಪಟ್ಟಿಯಲ್ಲಿ ಕೆಲವು ಜನಪ್ರತಿನಿಧಿಗಳ ಹೆಸರುಗಳು ಬಿಟ್ಟು ಹೋಗಿರುವುದರಿಂದ ಅವರ ಹೆಸರು ಸೇರಿಸುವ ಉದ್ದೇಶದ ಎರಡನೇ ತಿದ್ದುಪಡಿ ಮಸೂದೆಗೆ ವಿಧಾನಸಭೆ ಅಂಗೀಕಾರ ನೀಡಿತು.
ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಸೂದೆ ಮಂಡಿಸಿದರು.
ಚಿಕ್ಕಬಳ್ಳಾಪುರ ಸಂಸದ ಕೆ. ಸುಧಾಕರ್ ಅವರ ಕ್ಷೇತ್ರದ ಕೆಲವು ಭಾಗ ಪಾಲಿಕೆ ವ್ಯಾಪ್ತಿಗೆ ಬರುತ್ತವೆ. ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ ಬೆಂಗಳೂರಿನಲ್ಲಿದ್ದಾರೆ. ಅವರು ಸೇರಿದಂತೆ ಜಿಬಿಎ ಸದಸ್ಯರ ಪಟ್ಟಿಯಲ್ಲಿ ಪಾಲಿಕೆ ವ್ಯಾಪ್ತಿಯ ನಿವಾಸಿಯಾಗಿರುವ ಜನಪ್ರತಿನಿಧಿಗಳ ಹೆಸರು ಬಿಟ್ಟು ಹೋಗಿದೆ. ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು, ವಿಧಾನ ಪರಿಷತ್ ಸದಸ್ಯರು, ಸರ್ಕಾರದ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಮತ್ತು ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳನ್ನೂ ಜಿಬಿಎ ಸದಸ್ಯರನ್ನಾಗಿ ಸೇರಿಸಲಾಗುವುದು ಎಂದು ಅವರು ಹೇಳಿದರು.
‘ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಯಾವುದೇ ರೀತಿ ಚುನಾವಣೆ ನಡೆಯುವುದಿಲ್ಲ. ಇದು ರಾಜ್ಯ ಮಟ್ಟದ ಸಂಸ್ಥೆಯಾಗಿದೆ. ಮುಂದೆ ಹೊಸ ಪ್ರದೇಶವನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸಿಕೊಂಡಾಗ ಆ ಭಾಗದಲ್ಲಿ 6 ತಿಂಗಳ ಒಳಗೆ ಚುನಾವಣೆ ನಡೆಸಬೇಕಾಗುತ್ತದೆ. ಈ ಪ್ರದೇಶದಲ್ಲಿ ಯಾರಾದರೂ ಪಂಚಾಯಿತಿ ಸದಸ್ಯರಾಗಿದ್ದರೆ, ಅವರಿಗೆ ಇದರಲ್ಲಿ ಮತದಾನದ ಹಕ್ಕು ಬರುವುದಿಲ್ಲ. ಈ ಬದಲಾವಣೆ ಹಂತದಲ್ಲಿ ಆ ಪ್ರದೇಶವನ್ನು ಪ್ರತಿನಿಧಿಸಲು ಅವಕಾಶ ಕಲ್ಪಿಸಿದ್ದೇವೆ. ಇದು ಅಗತ್ಯವಿಲ್ಲ ಬೇಡ ಎಂದರೆ ಇದನ್ನು ತೆಗೆದು ಹಾಕಲು ಸಿದ್ಧನಿದ್ದೇನೆ. ನಿಮ್ಮ ಸಲಹೆಯಂತೆ ನಾಮ ನಿರ್ದೇಶಿತ ಸದಸ್ಯರ ಸೇರ್ಪಡೆ ಕೈಬಿಡುತ್ತೇನೆ’ ಎಂದು ಶಿವಕುಮಾರ್ ಹೇಳಿದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ‘ರಾಜ್ಯಸಭೆ ಹಾಗೂ ವಿಧಾನ ಪರಿಷತ್ತಿನ ಚುನಾಯಿತ ಪ್ರತಿನಿಧಿಗಳು ಒಂದೊಂದು ನಗರಸಭೆ, ಪುರಸಭೆಗಳಿಗೆ ಬದಲಾವಣೆ ಮಾಡಿಕೊಂಡು ಹೋಗುತ್ತಿರುತ್ತಾರೆ. ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ, ಬಳ್ಳಾರಿ ನಗರ ಸಭೆ ಚುನಾವಣೆ, ಬೀದರ್‌ನಲ್ಲಿ ನಡೆಯುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೋಗಿ ಮತ ಚಲಾಯಿಸುತ್ತಾರೆ. ಇದು ನಕಲಿ ಮತದಾನದಂತಾಗುತ್ತದೆ. ಹೀಗಾಗಿ ಅವರು ಐದು ವರ್ಷದಲ್ಲಿ ಯಾವುದಾದರೂ ಒಂದು ಕಡೆ ಮಾತ್ರ ಮತದಾನದ ಅಧಿಕಾರ ಹೊಂದಿರಬೇಕು’ ಎಂದು ತಿಳಿಸಿದರು.
‘ವಿರೋಧ ಪಕ್ಷದ ನಾಯಕರ ಸಲಹೆಯನ್ನು ಒಪ್ಪುತ್ತೇನೆ. ಯಾರೇ ಆದರೂ ಒಂದೇ ಕಡೆ ಮತ ಹಾಕುವಂತಾಗಬೇಕು. ಆದರೆ ಜಿಬಿಎ ಚುನಾಯಿತ ಸಂಸ್ಥೆಯಲ್ಲ’ ಎಂದು ಶಿವಕುಮಾರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.