ADVERTISEMENT

ಜೀವ ವೈವಿಧ್ಯ ಮಂಡಳಿಗೆ ಜೀವ ನೀಡಿ: ಅನಂತ ಹೆಗಡೆ ಅಶೀಸರ ಮನವಿ

​ಪ್ರಜಾವಾಣಿ ವಾರ್ತೆ
Published 15 ಮೇ 2025, 16:28 IST
Last Updated 15 ಮೇ 2025, 16:28 IST
<div class="paragraphs"><p>ಅನಂತ ಹೆಗಡೆ ಅಶೀಸರ</p></div>

ಅನಂತ ಹೆಗಡೆ ಅಶೀಸರ

   

ಬೆಂಗಳೂರು: ಕರಾವಳಿ, ಮಲೆನಾಡು ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಒಟ್ಟು 12 ಜೀವ ವೈವಿಧ್ಯ ತಾಣಗಳನ್ನು ಗುರುತಿಸಲಾಗಿದ್ದು, ಆದರೆ ಈವರೆಗೆ ಸರ್ಕಾರ ಅಧಿಸೂಚನೆ ಹೊರಡಿಸಿಲ್ಲ ಎಂದು ವೃಕ್ಷ ಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದ್ದಾರೆ.

ಈ ಕುರಿತು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಪತ್ರ ಬರೆದಿರುವ ಅವರು, ಅವುಗಳನ್ನು ಜೀವ ವೈವಿಧ್ಯ ತಾಣಗಳೆಂದು ಘೋಷಿಸಲು ಈ ಹಿಂದೆ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, ಸರ್ಕಾರ ಇನ್ನೂ ಮನಸ್ಸು ಮಾಡಿಲ್ಲ ಎಂದಿದ್ದಾರೆ.

ADVERTISEMENT

ಈ 12 ಜೀವ ವೈವಿಧ್ಯ ತಾಣಗಳ ಪೈಕಿ ಪ್ರಮುಖವಾದವು ಆದಿನಾರಾಯಣ ಸ್ವಾಮಿ ಬೆಟ್ಟ, ಕೋಲಾರ ಅಂತರಗಂಗೆ ಬೆಟ್ಟ, ಸಾಗರ ಬರೂರು ಸೀತಾ ಅಶೋಕ ವನ, ಜೋಗ ಬಳಿಯ ಕತ್ತಲೆ ಕಾನು ಪ್ರಮುಖವಾದವು ಎಂದು ಅವರು ತಿಳಿಸಿದ್ದಾರೆ.

ಅಲ್ಲದೇ, ಈ ಹಿಂದೆ ಜೀವ ವೈವಿಧ್ಯ ಮಂಡಳಿಯು ಮೀನುಗಾರಿಕೆ ಇಲಾಖೆ ನೆರವಿನೊಂದಿಗೆ ರಾಜ್ಯ ಮಟ್ಟದಲ್ಲಿ 11 ಮತ್ಸ್ಯಧಾಮಗಳನ್ನು ಗುರುತಿಸಿದೆ. ಪಶ್ಚಿಮಘಟ್ಟದಲ್ಲಿ 15 ನದಿ ಸ್ಥಳಗಳಲ್ಲಿ ಅಪರೂಪದ ಮೀನುಗಳು ಇರುವುದನ್ನು ಗುರುತಿಸಲಾಗಿದೆ. ಇವುಗಳ ರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

ಜೀವ ವೈವಿಧ್ಯ ಸಂರಕ್ಷಣಾ ಕಾಯ್ದೆಯ ಮೂಲಕ ಗ್ರಾಮ ಪಂಚಾಯಿತಿಗಳಿಗೆ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ ಜವಾಬ್ದಾರಿ ಸಿಕ್ಕಿದೆ. ಸುಮಾರು 6,000 ಜೀವವೈವಿಧ್ಯ ನಿರ್ವಹಣಾ ಸಮಿತಿಗಳು ಹೆಸರಿಗೆ ಮಾತ್ರ ಇವೆ. ಇವುಗಳಿಗೆ ಜೀವ ತುಂಬುವ ಕಾರ್ಯ ಮಾಡಬೇಕು. ಮಂಡಳಿಗೆ ತಜ್ಞ ಅಧಿಕಾರೇತರ ಸದಸ್ಯರ ನೇಮಕ ಮಾಡಬೇಕು ಆಗ್ರಹಿಸಿದ್ದಾರೆ.

ಈ ಮಂಡಳಿಗೆ ಜೀವವೇ ಇಲ್ಲದ ಪರಿಸ್ಥಿತಿ ಬಂದಿದೆ. 25 ತಜ್ಞರು ಇದ್ದಾರೆ. ಆದರೆ, ನಾಡಿನ ಪ್ರಾಕೃತಿಕ ಸಂಪತ್ತಿನ ನಿರ್ವಹಣೆ, ಸಂರಕ್ಷಣೆ ಅಭಿವೃದ್ಧಿಗೆ ಕೊಡುಗೆ ನೀಡಬೇಕಾದ ಜೀವ ವೈವಿಧ್ಯ ಮಂಡಳಿ ನಿಂತ ನೀರಾಗಿದೆ. ಆದ್ದರಿಂದ,  ಮಂಡಳಿಯನ್ನು ಚುರುಕುಗೊಳಿಸಲು ಸಚಿವರೇ ‘ಚುಚ್ಚುಮದ್ದು’ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.