ADVERTISEMENT

‘ನೈಸ್‌’ ಪರಿಹಾರ ನೀಡದೆ ಗಾಢ ನಿದ್ದೆ: ಸುಪ್ರೀಂ ಕೋರ್ಟ್ ಕಿಡಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2025, 15:56 IST
Last Updated 2 ಜನವರಿ 2025, 15:56 IST
<div class="paragraphs"><p>ಸುಪ್ರೀಂ ಕೋರ್ಟ್</p></div>

ಸುಪ್ರೀಂ ಕೋರ್ಟ್

   

ನವದೆಹಲಿ: ಕಲ್ಯಾಣ ರಾಜ್ಯದಲ್ಲಿ ಆಸ್ತಿಯ ಹಕ್ಕು ಒಬ್ಬ ಮನುಷ್ಯನ ಮಾನವ ಹಕ್ಕು ಆಗಿದೆ ಹಾಗೂ ಸಂವಿಧಾನದ 300 ಎ ಪರಿಚ್ಛೇದದ ಅಡಿಯಲ್ಲಿ ಸಾಂವಿಧಾನಿಕ ಹಕ್ಕು ಆಗಿರುತ್ತದೆ. ಯಾವುದೇ ವ್ಯಕ್ತಿಗೆ ಸರಿಯಾದ ಪರಿಹಾರ ನೀಡದೆ ಆತನ ಸ್ವತ್ತನ್ನು ಸ್ವಾಧೀನಪಡಿಸಿಕೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ. 

ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಹಾಗೂ ಕೆ.ವಿ.ವಿಶ್ವನಾಥನ್‌ ಅವರನ್ನು ಒಳಗೊಂಡ ಪೀಠವು ಕರ್ನಾಟಕ ಸರ್ಕಾರದ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿತು. ಬೆಂಗಳೂರು–ಮೈಸೂರು ಮೂಲಸೌಕರ್ಯ ಕಾರಿಡಾರ್ ಯೋಜನೆಗಾಗಿ ವಶಪಡಿಸಿಕೊಂಡ ಭೂಮಿಗೆ ಪರಿಹಾರ ನೀಡದೇ ಭೂಮಾಲೀಕರಾದ ಬರ್ನಾರ್ಡ್‌ ಫ್ರಾನ್ಸಿಸ್ ಜೋಸೆಫ್ ವಾಜ್ ಮತ್ತು ಇತರರಿಗೆ 22 ವರ್ಷ ಅಲೆದಾಡುವಂತೆ ಮಾಡಿದ ಅಧಿಕಾರಿಗಳ ಉದಾಸೀನತೆ ಹಾಗೂ ಗಾಢ ನಿದ್ರೆ ಬಗ್ಗೆ ನ್ಯಾಯಪೀಠ ಕಿಡಿಕಾರಿತು. 

ADVERTISEMENT

ಸಂವಿಧಾನದ 142ನೇ ವಿಧಿಯಲ್ಲಿನ ವಿಶೇಷ ಅಧಿಕಾರ ಬಳಸಿಕೊಂಡ ನ್ಯಾಯಪೀಠವು, 2019ರ ಏಪ್ರಿಲ್‌ 22ಕ್ಕೆ  ಅನ್ವಯವಾಗುವಂತೆ ವಿವಾದಿತ ಭೂಮಿಯ ಮಾರುಕಟ್ಟೆ ಮೌಲ್ಯ ನಿರ್ಧರಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು. ಜತೆಗೆ, ಎರಡು ತಿಂಗಳಲ್ಲಿ ಪರಿಹಾರ ಮೊತ್ತವನ್ನು ಪಾವತಿ ಮಾಡುವಂತೆ ವಿಶೇಷ ಭೂಸ್ವಾಧೀನ ಅಧಿಕಾರಿಗೆ ಸೂಚಿಸಿತು. 

‘2003ರ ಮಾರುಕಟ್ಟೆ ಮೌಲ್ಯವನ್ನು ನೀಡಬೇಕೆಂದು ಸೂಚಿಸಿದರೆ ನ್ಯಾಯದ ಅಪಹಾಸ್ಯ ಮಾಡಿದಂತೆ ಆಗುತ್ತದೆ’ ಎಂದೂ ಪೀಠ ಅಭಿಪ್ರಾಯಪಟ್ಟಿತು. ಸಂವಿಧಾನದ 300ಎ ಪರಿಚ್ಛೇದದ ಪ್ರಕಾರ, ಯಾವುದೇ ವ್ಯಕ್ತಿಯನ್ನು ಭೂ ವಂಚಿತರನ್ನಾಗಿ ಮಾಡುವ ಅವಕಾಶ ಇಲ್ಲ ಎಂದು ಹೇಳಿತು. 

‘ಮೇಲ್ಮನವಿದಾರರಿಗೆ 2025ರಲ್ಲಿ 2003ರ ಮಾರುಕಟ್ಟೆ ದರದ ಪ್ರಕಾರ ಪರಿಹಾರ ನೀಡಿ ಎಂದು ಹೇಳಲು ಸಾಧ್ಯವಿಲ್ಲ. ಅವರಿಗೆ ಆದ್ಯತೆ ಮೇರೆಗೆ ಪರಿಹಾರ ಒದಗಿಸುವುದು ಮುಖ್ಯವಾಗಿದೆ. 2003ರಿಂದ 2019ರವರೆಗೆ ರಾಜ್ಯ ಸರ್ಕಾರ ಹಾಗೂ ಕೆಐಎಡಿಬಿ ಗಾಢ ನಿದ್ರೆಯಲ್ಲಿ ಇದ್ದಿದ್ದರಿಂದ ಮತ್ತು ನ್ಯಾಯಾಂಗ ನಿಂದನೆ ನೋಟಿಸ್‌ ಜಾರಿಯಾದ ಬಳಿಕ ಎಚ್ಚೆತ್ತುಕೊಂಡಿದ್ದರಿಂದ ವಿಶೇಷ ಭೂಸ್ವಾಧೀನ ಅಧಿಕಾರಿಗೆ ಮಾರುಕಟ್ಟೆ ಮೌಲ್ಯದ ದಿನಾಂಕವನ್ನು ಬದಲಿಸುವ ಅಧಿಕಾರ ಇಲ್ಲ’ ಎಂದು ಪೀಠ ಅಭಿಪ್ರಾಯಪಟ್ಟಿತು. 

ನ್ಯಾಯಾಲಯವು ಮೇಲ್ಮನವಿಯನ್ನು ಅಂಗೀಕರಿಸಿತು. ಕರ್ನಾಟಕ ಹೈಕೋರ್ಟ್‌ ವಿಭಾಗೀಯ ಪೀಠ 2022ರ ನವೆಂಬರ್‌ 22ರಂದು ನೀಡಿದ್ದ ತೀರ್ಪನ್ನು ರದ್ದುಗೊಳಿಸಿತು. 

ಪ್ರಕರಣವೇನು?

ಮೇಲ್ಮನವಿದಾರರು 1995ರಿಂದ 1997ರ ಅವಧಿಯಲ್ಲಿ ವಿವಿಧ ನಿವೇಶನಗಳನ್ನು ಖರೀದಿಸಿದ್ದರು. ಈ ನಡುವೆ, ಬೆಂಗಳೂರು–ಮೈಸೂರು ಮೂಲಸೌಕರ್ಯ ಕಾರಿಡಾರ್‌ ಯೋಜನೆಗಾಗಿ ರಾಜ್ಯ ಸರ್ಕಾರ ಹಾಗೂ ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸ್ ಲಿಮಿಟೆಡ್ (ನೈಸ್‌) ಒಪ್ಪಂದ ಮಾಡಿಕೊಂಡಿದ್ದವು. ಈ ಒಪ್ಪಂದದ ಪ್ರಕಾರ, ರಾಜ್ಯ ಸರ್ಕಾರವು 13,237 ಎಕರೆಯನ್ನು ವ್ಯಕ್ತಿಗಳಿಂದ ಮತ್ತು 6,956 ಎಕರೆ ಸರ್ಕಾರಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ತೀರ್ಮಾನಿಸಿತ್ತು. ಈ ಯೋಜನೆ ಅನುಷ್ಠಾನಕ್ಕಾಗಿ ನೈಸ್‌ ಸಂಸ್ಥೆಗೆ 20,193 ಎಕರೆಯನ್ನು ವರ್ಗಾಯಿಸಲು ಒಪ್ಪಿಗೆ ನೀಡಲಾಗಿತ್ತು. ಅಗತ್ಯ ಜಮೀನಿನ ಭೂಸ್ವಾಧೀನಕ್ಕಾಗಿ ನೈಸ್ ಸಂಸ್ಥೆಯು ಕೆಐಎಡಿಬಿಗೆ 1998ರಲ್ಲಿ ಅರ್ಜಿ ಸಲ್ಲಿಸಿತ್ತು. ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಕಾಯ್ದೆ 1966ರ ಸೆಕ್ಷನ್‌ 28ರ ಪ್ರಕಾರ, ಭೂಸ್ವಾಧೀನಕ್ಕಾಗಿ ಕೆಐಎಡಿಬಿಯು 2003ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಭೂಮಾಲೀಕರಿಂದ ಆಕ್ಷೇಪಣೆ ಸ್ವೀಕರಿಸಲಾಗಿತ್ತು. ನಂತರ ಈ ಜಾಗಗಳನ್ನು ವಶಪಡಿಸಿ ಕೊಳ್ಳಲಾಗಿತ್ತು. ಈ ಜಾಗಗಳನ್ನು ನೈಸ್ ಸಂಸ್ಥೆಗೆ ವರ್ಗಾವಣೆ ಮಾಡಲಾಗಿತ್ತು. ಭೂಮಾಲೀಕರಿಗೆ ಪರಿಹಾರ ನೀಡಲು ಸರ್ಕಾರ ಕ್ರಮ ಕೈಗೊಂಡಿರಲಿಲ್ಲ. ಭೂಸ್ವಾಧೀನದ ಅಧಿಸೂಚನೆ ರದ್ದುಗೊಳಿಸುವಂತೆ ಭೂಮಾಲೀಕರು ಹೈಕೋರ್ಟ್‌ ಮೊರೆಹೋಗಿದ್ದರು.

ಭೂಸ್ವಾಧೀನದ ಅಧಿಸೂಚನೆಗಳನ್ನು ರದ್ದುಗೊಳಿಸಲು ನಿರಾಕರಿಸಿದ್ದ ಪೀಠವು, ಭೂಮಾಲೀಕರಿಗೆ ಪರ್ಯಾಯ ನಿವೇಶನಗಳನ್ನು ಹಂಚಿಕೆ ಮಾಡಲು ಯಾವುದೇ ನಿರ್ದೇಶನ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು. ಬಳಿಕ ಭೂಮಾಲೀಕರು ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ಮನವಿಯನ್ನು ಪರಿಗಣಿಸುವಂತೆ ಪೀಠವು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಆದರೆ, ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ನಂತರ ಭೂಮಾಲೀಕರು ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.