ADVERTISEMENT

ಗೋದಾವರಿ–ಕಾವೇರಿ ಜೋಡಣೆಯಲ್ಲಿ ರಾಜ್ಯಕ್ಕೆ ಅನ್ಯಾಯ: ಎಚ್‌.ಡಿ.ದೇವೇಗೌಡ

ಸಿದ್ದರಾಮಯ್ಯ, ಶಿವಕುಮಾರ್ ಜತೆ ಸೇರಿ ಹೋರಾಡಲು ಹಿಂಜರಿಕೆ ಇಲ್ಲ: ದೇವೇಗೌಡ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2025, 14:30 IST
Last Updated 15 ಫೆಬ್ರುವರಿ 2025, 14:30 IST
ಎಚ್‌.ಡಿ.ದೇವೇಗೌಡ
ಎಚ್‌.ಡಿ.ದೇವೇಗೌಡ   

ಬೆಂಗಳೂರು: ‘ಗೋದಾವರಿ–ಕಾವೇರಿ ನದಿ ಜೋಡಣೆ ಯೋಜನೆಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಯೋಜನೆ ಅಡಿ ರಾಜ್ಯಕ್ಕೆ 25 ಟಿಎಂಸಿ ಅಡಿ ನೀರು ಹಂಚಿಕೆ ಮಾಡಬೇಕು ಎಂಬುದು ಕೇಂದ್ರಕ್ಕೆ ನನ್ನ ಒತ್ತಾಯ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಜತೆ ಸೇರಿ ಹೋರಾಡಲು ನನಗೆ ಹಿಂಜರಿಕೆ ಇಲ್ಲ’ ಎಂದು ರಾಜ್ಯಸಭಾ ಸದಸ್ಯ ಎಚ್‌.ಡಿ.ದೇವೇಗೌಡ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಗೋದಾವರಿ–ಕಾವೇರಿ ನದಿ ಜೋಡಣೆ ಯೋಜನೆಗೆ ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಿದಾಗ, ಕರ್ನಾಟಕಕ್ಕೆ ನೀರು ಹಂಚಿಕೆ ಮಾಡಿರಲಿಲ್ಲ. 2020 ಮತ್ತು 2022ರಲ್ಲಿ ನಾನು ಅಂದಿನ ಕೇಂದ್ರ ನೀರಾವರಿ ಸಚಿವರಿಗೆ ಪತ್ರ ಬರೆದಿದ್ದೆ’ ಎಂದರು.

‘ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಬಗ್ಗೆ ಸಚಿವರ ಗಮನ ಸೆಳೆದ ನಂತರ, ರಾಜ್ಯಕ್ಕೆ 15.91 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿದ್ದಾರೆ. ಆದರೆ ಅದನ್ನು ಘಟಪ್ರಭಾ ನದಿಗೆ ಹರಿಸುತ್ತೇವೆ ಎಂದಿದ್ದಾರೆ. ಇದು ಸಾಧ್ಯವೇ ಇಲ್ಲ. ಗೋದಾವರಿಯಿಂದ ಹರಿಸಿದ ನೀರು ರಾಜ್ಯದಲ್ಲಿ ಕಾವೇರಿಗೆ ಎಲ್ಲಿ ಜೋಡಿಸುತ್ತಾರೆ ಎಂಬುದನ್ನು ಡಿಪಿಆರ್‌ನಲ್ಲಿ ಸ್ಪಷ್ಟವಾಗಿ ತೋರಿಸಿಯೇ ಇಲ್ಲ. ಅದನ್ನು ಸ್ಪಷ್ಟಪಡಿಸಿ ಎಂದು ಕೋರಿದ್ದೇನೆ. ಈ ಸಂಬಂಧ ಪ್ರಧಾನಿಗೆ ಪತ್ರ ಬರೆಯುತ್ತೇನೆ’ ಎಂದರು.

ADVERTISEMENT

ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಅನುದಾನ ಮಂಜೂರು ಮಾಡಿಸುವಲ್ಲಿ ಜೆಡಿಎಸ್‌–ಬಿಜೆಪಿ ಸಂಸದರು ಏನೂ ಕೆಲಸ ಮಾಡುತ್ತಿಲ್ಲ ಎಂದು ಕಾಂಗ್ರೆಸ್ ಆರೋಪಿಸುತ್ತಿದೆಯಲ್ಲ ಎಂಬ ಪ್ರಶ್ನೆಗೆ, ‘ಕಾಂಗ್ರೆಸ್‌ ಸರ್ಕಾರದವರು ಕೆಲವು ಯೋಜನೆಗಳನ್ನು ಮಾಡಿದ್ದಾರೆ. ಅವಕ್ಕೆ ಹಣ ಬೇಕಿದ್ದು, ನೀರಾವರಿಗೆ ಹಣ ಮೀಸಲಿಡಲು ಸಾಧ್ಯವಾಗಿಲ್ಲ. ಹೀಗಾಗಿ ಕೇಂದ್ರದ ಮೇಲೆ ಹೇಳುತ್ತಿದ್ದಾರೆ. ಆದರೆ ನಾನು ಅವನ್ನು ವಿರೋಧಿಸುವುದಿಲ್ಲ. ಅವರ ಯೋಜನೆಗಳನ್ನು ಅವರು ನಡೆಸಲಿ’ ಎಂದರು.

‘ಎಲ್ಲರೂ ಹೋರಾಡುತ್ತಿದ್ದಾರೆ’

‘ಗೋದಾವರಿ–ಕಾವೇರಿ ಜೋಡಣೆ ಕಳಸಾ–ಬಂಡೂರಿ–ಮಹದಾಯಿ ಯೋಜನೆ ಅಡಿಯಲ್ಲಿ ರಾಜ್ಯಕ್ಕೆ ನಷ್ಟವಾಗಿದೆ. ಇದು ರಾಜ್ಯದ ಸಮಸ್ಯೆ. ಇದರಲ್ಲಿ ಜೆಡಿಎಸ್–ಬಿಜೆಪಿ ಸಂಸದರು ಮಾತ್ರವಲ್ಲ ಕಾಂಗ್ರೆಸ್‌ನ ಸಂಸದರೂ ಹೋರಾಡುತ್ತಿದ್ದಾರೆ’ ಎಂದು ದೇವೇಗೌಡ ಹೇಳಿದರು. ‘ಮಹದಾಯಿಗೆ ಸಂಬಂಧಿಸಿದ ವ್ಯಾಜ್ಯ ಸುಪ್ರೀಂ ಕೋರ್ಟ್‌ನಲ್ಲಿದೆ. ಇದರಲ್ಲಿ ರಾಜ್ಯ ಸರ್ಕಾರದ ವಕೀಲರು ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸಬೇಕು. ಈ ಹೋರಾಟದಲ್ಲಿ ರಾಜ್ಯ ಸರ್ಕಾರಕ್ಕೆ ನಮ್ಮ ಸಹಕಾರವಿದೆ’ ಎಂದರು.

ಜೆಡಿಎಸ್‌ ಸಮಾವೇಶ

‘ಹಾಸನದಲ್ಲಿ ಕಾಂಗ್ರೆಸ್‌ನವರು ಸಮಾವೇಶ ನಡೆಸಿದರು. ಹೀಗಾಗಿ ಅಂಥದ್ದೇ ಸಮಾವೇಶವನ್ನು ದೊಡ್ಡ ಮಟ್ಟದಲ್ಲಿ ನಡೆಸಬೇಕು ಎಂಬುದು ಎಚ್‌.ಡಿ.ಕುಮಾರಸ್ವಾಮಿ ಅವರ ಇಂಗಿತ. ಇದಕ್ಕೆ ಸಿದ್ಧತೆ ನಡೆದಿದೆ’ ಎಂದು ದೇವೇಗೌಡ ಹೇಳಿದರು. ‘ಮೇ ತಿಂಗಳಿನಲ್ಲಿ ಸಮಾವೇಶ ನಡೆಸಬೇಕು ಎಂದುಕೊಂಡಿದ್ದೇವೆ. ಇದಕ್ಕಾಗಿ ಮಾರ್ಚ್‌ 6ರಂದು ಪಕ್ಷದ ಎಲ್ಲ ಚುನಾಯಿತ ಪ್ರತಿನಿಧಿಗಳು ಪದಾಧಿಕಾರಿಗಳು ಕಾರ್ಯಕರ್ತರನ್ನು ಸೇರಿಸಿ ಪೂರ್ವಸಿದ್ಧತಾ ಸಭೆ ನಡೆಸುತ್ತೇವೆ. ಸಮಾವೇಶವನ್ನು ತುಮಕೂರು ಅಥವಾ ಮಂಡ್ಯ ಅಥವಾ ಬೆಂಗಳೂರಿನಲ್ಲಿ ನಡೆಸಬೇಕೇ ಎಂಬುದನ್ನು ಅಲ್ಲಿ ಚರ್ಚಿಸುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.