ADVERTISEMENT

ಜಿಲ್ಲೆಗೊಂದು ಗೋಶಾಲೆ ಯೋಜನೆಗೆ ಜೂನ್ 23ರ ಗಡುವು: ಪ್ರಭು ಚವ್ಹಾಣ್

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 18:50 IST
Last Updated 5 ಏಪ್ರಿಲ್ 2022, 18:50 IST
ಪ್ರಭು ಚವಾಣ್‌
ಪ್ರಭು ಚವಾಣ್‌   

ಬೆಂಗಳೂರು: ‘ಜಿಲ್ಲೆಗೊಂದು ಗೋಶಾಲೆ ಯೋಜನೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜೂನ್ 23ರ ಒಳಗೆ ಅನುಷ್ಠಾನ ಆಗದಿದ್ದರೆ ಅಧಿಕಾರಿಗಳ ತಲೆದಂಡ ಖಚಿತ’ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಅವರು, ಜಿಲ್ಲೆಗೊಂದು ಗೋಶಾಲೆ ಅನುಷ್ಠಾನ ಯಾವ ಹಂತದಲ್ಲಿದೆ ಎಂಬ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಯೋಜನೆ ಅನುಷ್ಠಾನದಲ್ಲಿ ತೊಡಕುಗಳಿದ್ದರೆ ತಕ್ಷಣ ಗಮನಕ್ಕೆ ತರುವಂತೆ ಸೂಚಿಸಿದರು.

‘ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ ಆದಾಗಿನಿಂದ ರಾಜ್ಯದಲ್ಲಿ ಗೋಶಾಲೆಗಳು ಕ್ರಮೇಣ ಭರ್ತಿಯಾಗುತ್ತಿವೆ. ಹೀಗಾಗಿ ಆದ್ಯತೆಯ ಮೇಲೆ ಗೋಶಾಲೆಗಳನ್ನು ನಿರ್ಮಿಸಬೇಕು. ಗೋಶಾಲೆ ತೆರೆಯುವಲ್ಲಿ ಆಗುತ್ತಿರುವ ವಿಳಂಬ ಸಹಿಸುವುದಿಲ್ಲ’ ಎಂದು ಅಧಿಕಾರಿಗಳನ್ನು ಅವರು ತರಾಟೆಗೆ ತೆಗೆದುಕೊಂಡರು.

ADVERTISEMENT

‘ಬೇಸಿಗೆಯ ಧಗೆ ಹೆಚ್ಚುತ್ತಿರುವುದರಿಂದ ಗೋಶಾಲೆಗಳಲ್ಲಿ ಮೇವು, ನೀರು ಹಾಗೂ ಔಷಧಿ ಕೊರತೆ ಆಗದಂತೆ ನೋಡಿಕೊಳ್ಳಬೇಕು. ದೇಸಿ ತಳಿಗಳ ಸಂರಕ್ಷಣೆ ಹಾಗೂ ಗೋಹತ್ಯೆಯ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಕ್ರಮಕೈಗೊಳ್ಳಬೇಕು’ ಎಂದೂ ಅಧಿಕಾರಿಗಳಿಗೆ ಸೂಚಿಸಿದರು.

ಇಲಾಖೆಯ ಕಾರ್ಯದರ್ಶಿ ಸಲ್ಮಾ ಫಹಿಂ, ಆಯುಕ್ತ ಬಸವರಾಜೇಂದ್ರ, ನಿರ್ದೇಶಕ ಮಂಜುನಾಥ್ ಪಾಳೇಗಾರ ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.