ADVERTISEMENT

ಹೆಸರಘಟ್ಟದಲ್ಲೇ ಚಿತ್ರನಗರಿ

ಅಂತರರಾಷ್ಟ್ರೀಯ ಮಟ್ಟದ ಸೌಲಭ್ಯಗಳ ಫಿಲ್ಮ್‌ ಸಿಟಿ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2020, 20:05 IST
Last Updated 8 ಜನವರಿ 2020, 20:05 IST
ಡಾ.ಸಿ.ಎನ್‌.ಅಶ್ವತ್ಥನಾರಾಯಣ
ಡಾ.ಸಿ.ಎನ್‌.ಅಶ್ವತ್ಥನಾರಾಯಣ   

ಬೆಂಗಳೂರು: ರಾಜ್ಯ ಸರ್ಕಾರ ಬೆಂಗಳೂರಿನಲ್ಲೇ ಚಿತ್ರನಗರಿ ಸ್ಥಾಪಿಸಲು ನಿರ್ಧರಿಸಿದ್ದು, ಈ ಮೂಲಕ ಚಿತ್ರನಗರಿ ಸ್ಥಾಪನೆ ಎಲ್ಲಿ ಆಗಬೇಕು ಎಂಬವಿವಾದಕ್ಕೆ ತೆರೆಬಿದ್ದಿದೆ.

ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ರಾಮನಗರದಲ್ಲಿ ಮತ್ತು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪಿಸಲು ನಿರ್ಧರಿಸಿದ್ದರು.ಈ ತೀರ್ಮಾನಗಳು ವಿವಾದಕ್ಕೂ ಕಾರಣವಾಗಿತ್ತು. ಇದೀಗ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಬೆಂಗಳೂರಿನಲ್ಲೇ ಚಿತ್ರನಗರಿ ಸ್ಥಾಪಿಸಲು ತೀರ್ಮಾನಿಸಿದೆ.

‘ಕೆಲವು ದಶಕಗಳ ಹಿಂದೆ ಹೆಸರಘಟ್ಟದಲ್ಲಿ ಚಿತ್ರನಗರಿ ಸ್ಥಾಪಿಸಲು ನಿರ್ಧರಿಸಲಾಗಿತ್ತು. ಬಹುತೇಕ ಅಲ್ಲಿಯೇ ಚಿತ್ರನಗರಿ ಸ್ಥಾಪನೆ ಆಗಬಹುದು’ ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್‌.ಅಶ್ವತ್ಥನಾರಾಯಣ ಅವರು ಫಿಲ್ಮ್‌ ಸಿಟಿ ನಿರ್ಮಾಣ ಸಂಬಂಧದ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ADVERTISEMENT

ಡಿಸ್ನಿ ಲ್ಯಾಂಡ್‌ ಮತ್ತು ರಾಮೋಜಿ ಫಿಲ್ಮ್‌ ಸಿಟಿಗಿಂತಲೂ ವಿಶಿಷ್ಟವಾದ ಹಾಗೂ ಅಂತರರಾಷ್ಟ್ರೀಯ ಮಟ್ಟದ ಚಿತ್ರನಗರಿಯನ್ನು ಸ್ಥಾಪಿಸಲಾಗುವುದು. ಮುಖ್ಯಮಂತ್ರಿಯವರ ಜತೆ ಚರ್ಚಿಸಿ ಚಿತ್ರನಗರಿ ನಿರ್ಮಾಣದ ಜಾಗವನ್ನು ಅಂತಿಮಗೊಳಿಸಲಾಗುವುದು ಎಂದು ಅವರು ಹೇಳಿದರು.

‘ರೋರಿಚ್‌ ಎಸ್ಟೇಟ್‌ನಲ್ಲಿ ಫಿಲ್ಮ್‌ ಸಿಟಿ ಸ್ಥಾಪನೆ ಮಾಡುವ ಆಲೋಚನೆ ಕೈಬಿಡಲಾಗಿದೆ. ಡಿಸ್ನಿ ಲ್ಯಾಂಡ್‌, ರಾಮೋಜಿ, ನೋಯಿಡಾ ಫಿಲ್ಮ್‌ ಸಿಟಿ ಸೇರಿದಂತೆ ಹಲವು ಫಿಲ್ಮ್‌ ಸಿಟಿಗಳನ್ನು ನೋಡಿದ್ದೇವೆ. ಅದಕ್ಕಿಂತ ಭಿನ್ನವಾದ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡ ಚಿತ್ರನಗರಿ ಸ್ಥಾಪನೆಗೊಳ್ಳಲಿದೆ. ಇದರಲ್ಲಿ ಅನಿಮೇಷನ್‌ ಕೇಂದ್ರ, ಚಿತ್ರ ನಿರ್ಮಾಣ ಮತ್ತು ನಿರ್ಮಾಣ ನಂತರದ ಪ್ರಕ್ರಿಯೆಗಳಿಗೆ
ಅನುಕೂಲವಾಗುವ ವ್ಯವಸ್ಥೆಗಳು ಇರಲಿವೆ’ ಎಂದು ಅವರು ಹೇಳಿದರು.

‘ಮೈಸೂರಿಗೆ ಚಿತ್ರ ನಗರಿ ಏಕಿಲ್ಲ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಬೆಂಗಳೂರು ಅನಿಮೇಷನ್‌ ಕ್ಷೇತ್ರದಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿದೆ. ಹಾಲಿವುಡ್‌ನ ‘ಲಯನ್‌ಕಿಂಗ್‌’, ‘ಅವತಾರ್‌’ನಂತಹ ಚಿತ್ರಗಳ ಅನಿಮೇಷನ್‌ ಬೆಂಗಳೂರಿನಲ್ಲೇ ಆಗಿದ್ದು. ಚಿತ್ರನಗರಿ ಯಾವುದೇ ಒಂದೆರಡು ವಿಷಯಕ್ಕೆ ಸೀಮಿತವಾಗದೇ ಎಲ್ಲ ವ್ಯವಸ್ಥೆಗಳನ್ನು ಒಳಗೊಂಡ ಚಿತ್ರ ನಗರಿ ಸ್ಥಾಪಿಸುವುದು ನಮ್ಮ ಉದ್ದೇಶ’ ಎಂದು ಅಶ್ವತ್ಥನಾರಾಯಣ ಹೇಳಿದರು.

ಮುಖ್ಯಮಂತ್ರಿ ಅನುಪಸ್ಥಿತಿಯಲ್ಲಿ ಸಭೆ: ಕಳೆದ ಕೆಲವು ದಿನಗಳಿಂದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಎಡೆಬಿಡದೇ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರಿಂದ ವಿಶ್ರಾಂತಿ ತೆಗೆದುಕೊಳ್ಳಲು ಪೂರ್ವನಿಗದಿತ ಸಭೆಗಳಲ್ಲಿ ಹಾಜರಾಗಲಿಲ್ಲ. ಎಲ್ಲ ಸಭೆಗಳನ್ನು ನಡೆಸುವಂತೆ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರಿಗೆ ಸೂಚಿಸಿದ್ದರು.

ರೋರಿಚ್ ಎಸ್ಟೇಟ್‌ ಇನ್ನು ಕಲಾ ಗ್ರಾಮ

ದೇವಿಕಾರಾಣಿ ಮತ್ತು ರೋರಿಚ್ ಎಸ್ಟೇಟ್‌ ಅನ್ನು ಕಲೆ, ಸಂಸ್ಕೃತಿ, ಅಧ್ಯಾತ್ಮ ಮತ್ತು ನಿಸರ್ಗ ಸೌಂದರ್ಯದ ಗ್ರಾಮ ಮತ್ತು ಮ್ಯೂಸಿಯಂ ಆಗಿ ರೂಪಾಂತರಿಸುವ ಉದ್ದೇಶವಿದೆ. ಆರ್ಟ್‌ ಅಂಡ್‌ ಕ್ರಾಫ್ಟ್‌ ವಿಲೇಜ್‌ ಎಂದು ಹೆಸರಿಸಿ, ಇಡೀ ದೇಶವೇ ಹೆಮ್ಮೆಪಡುವ ರೀತಿಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ತಾಣವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಅಶ್ವತ್ಥನಾರಾಯಣ ಹೇಳಿದರು.

80 ಅಡಿ ಕೆಂಪೇಗೌಡ ಪ್ರತಿಮೆ

‘ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿ ಕೆಂಪೇಗೌಡರ 80 ಅಡಿ ಎತ್ತರದ ಪ್ರತಿಮೆ ಸ್ಥಾಪಿಸಲು ನಿರ್ಧರಿಸಲಾಗಿದೆ’ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.

ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ‘ಪ್ರತಿಮೆ ಸ್ಥಾಪನೆಗೆ ಜಾಗ ನಿಗದಿ ಮಾಡಲಾಗಿದೆ. ಪ್ರತಿಮೆಯ ವಿನ್ಯಾಸ, ಪರಿಕಲ್ಪನೆ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಥೀಮ್‌ ಪಾರ್ಕ್‌ ಕೂಡಾ ನಿರ್ಮಿಸಲು ಉದ್ದೇಶಿಸಲಾಗಿದೆ’ ಎಂದು ಅವರು ಹೇಳಿದರು.

‘ಕೆಂಪೇಗೌಡರು ತಮ್ಮ ಆಡಳಿತದ ಅವಧಿಯಲ್ಲಿ ಅಭಿವೃದ್ಧಿಪಡಿಸಿದ್ದ 46 ತಾಣಗಳನ್ನು ಗುರುತಿಸಿ, ಅವುಗಳನ್ನು ರಕ್ಷಿಸುವುದರ ಜತೆಗೆ ಪುನರುಜ್ಜೀವನ ಮಾಡಲು ತಜ್ಞರ ಜತೆ ವಿಸ್ತೃತ ಚರ್ಚೆ ನಡೆಸಲಾಯಿತು. ಜನ ಈ ಎಲ್ಲ ತಾಣಗಳಿಗೆ ಭೇಟಿ ಕೊಟ್ಟು, ಅದರ ಮಹತ್ವವನ್ನು ಅರಿತುಕೊಳ್ಳುವುದರ ಜತೆಗೆ, ನಾಡಿಗೆ ಕೆಂಪೇಗೌಡರ ಕೊಡುಗೆಯೂ ತಿಳಿಯುವಂತೆ ಮಾಡುವುದು ಸರ್ಕಾರದ ಆಶಯ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.