ADVERTISEMENT

ಕರ್ನಾಟಕ ಪುರಸಭೆಗಳ ಮಸೂದೆಗೆ ಸರ್ಕಾರ ಹಿಂದೇಟು: ರಾಜಕಾರಣಿಗಳ ವಿರೋಧದ ಭೀತಿ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2019, 6:59 IST
Last Updated 26 ಡಿಸೆಂಬರ್ 2019, 6:59 IST
ಬೆಂಗಳೂರು ಮಹಾನಗರ ಪಾಲಿಕೆ
ಬೆಂಗಳೂರು ಮಹಾನಗರ ಪಾಲಿಕೆ   

ಬೆಂಗಳೂರು: ಪ್ರತಿಯೊಂದು ಸ್ಥಳೀಯ ಸಂಸ್ಥೆಗೂ ಮೇಯರ್‌ ಆಯ್ಕೆ ಮಾಡಿ, ಅವರಿಗೆ ಐದು ವರ್ಷಗಳ ಅಧಿಕಾರ ಅವಧಿ ನೀಡುವ ‘ಕರ್ನಾಟಕ ಪುರಸಭೆಗಳ ಮಸೂದೆ, 2019’ರ ಕರಡನ್ನು ಬಿಡುಗಡೆ ಮಾಡಿದ್ದು, ಸರ್ಕಾರ ಈ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದೆ.

ಸ್ಥಳೀಯ ಸಂಸ್ಥೆಗಳಿಗೆ ಯೋಜನೆಗಳನ್ನು ರೂಪಿಸುವ ಮತ್ತು 14 ವಿವಿಧ ರೀತಿಯ ತೆರಿಗೆಗಳನ್ನು ವಿಧಿಸುವ ಅಧಿಕಾರವನ್ನು ನೀಡುವ ಮಹತ್ವದ ಅಂಶಗಳನ್ನು ಈ ಮಸೂದೆ ಒಳಗೊಂಡಿದೆ.

ನಗರ ಸ್ಥಳೀಯ ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿ ಏಕರೂಪತೆ ತರುವ ಮೂಲಕ ಆಡಳಿತದಲ್ಲಿ ಸುಧಾರಣೆ ತರುವುದು ಈ ಮಸೂದೆಯ ಉದ್ದೇಶವಾಗಿದೆ. ಕರಡು ಮಸೂದೆ ರೂಪಿಸಲು ರಾಜ್ಯ ಸರ್ಕಾರ ನ್ಯಾಷನಲ್‌ ಲಾ ಸ್ಕೂಲ್‌ಗೆ ಮನವಿ ಮಾಡಿತ್ತು. ಆ ಬಳಿಕ ಒಪ್ಪಂದ ಮಾಡಿಕೊಳ್ಳಲಾಗಿತ್ತು.

ADVERTISEMENT

‘ಕರಡು ಮಸೂದೆಯನ್ನು ಮೂರು ತಿಂಗಳ ಹಿಂದೆಯೇ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇದು ಎರಡು ವರ್ಷಗಳ ಯೋಜನೆಯಾಗಿತ್ತು. ಬಹುತೇಕ ಇದರ ಕಾರ್ಯ ಮುಗಿಯುತ್ತಾ ಬಂದಿದೆ. ಆದರೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದು ಲಾ ಸ್ಕೂಲ್‌ನ ಮೂಲಗಳು ತಿಳಿಸಿವೆ.

‘ಕರಡು ಮಸೂದೆಯ ಬಗ್ಗೆ ಈವರೆಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ’ ಎಂದು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅಂಜುಮ್‌ ಪರ್ವೇಜ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ನಗರ ಆಡಳಿತದ ಕಾನೂನನ್ನು ಕ್ರೋಡೀಕರಿಸುವ ಅಗತ್ಯ ಏನಿದೆ’ ಎಂದು ಸರ್ಕಾರ ಈಗ ಪ್ರಶ್ನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಈ ಮಸೂದೆಯ ಬಗ್ಗೆ ರಾಜಕೀಯ ಮತ್ತು ಅಧಿಕಾರಿಗಳ ವಲಯದಿಂದ ತೀವ್ರ ಪ್ರತಿರೋಧ ವ್ಯಕ್ತವಾಗಬಹುದು ಎಂಬ ಭೀತಿ ಸರ್ಕಾರವನ್ನು ಕಾಡಿದೆ. ಇದಕ್ಕೆ ಮುಖ್ಯ ಕಾರಣ ಸ್ಥಳೀಯ ಸಂಸ್ಥೆಗಳ ಪ್ರದೇಶದ ವ್ಯಾಪ್ತಿಯನ್ನು ಮರು ವ್ಯಾಖ್ಯಾನಿಸಲಾಗಿದೆ. 25 ಲಕ್ಷಕ್ಕೂ ಹೆಚ್ಚು ಜನರನ್ನು ಹೊಂದಿರುವ ಮಹಾನಗರವನ್ನು ‘ಗ್ರೇಟರ್‌ ಸಿಟಿ’ ಎಂದು, 5 ಲಕ್ಷದಿಂದ 25 ಲಕ್ಷ ಜನಸಂಖ್ಯೆ ಹೊಂದಿರುವ ನಗರ ಪ್ರದೇಶವನ್ನು ‘ಸಿಟಿ’ ಎಂದೂ, 5 ಲಕ್ಷದಿಂದ 50 ಸಾವಿರ ಒಳಗಿನ ಜನಸಂಖ್ಯೆ ಹೊಂದಿರುವ ಪ್ರದೇಶವನ್ನು ‘ಟೌನ್‌’, 50 ಸಾವಿರದಿಂದ 20 ಸಾವಿರದೊಳಗೆ ಜನಸಂಖ್ಯೆ ಹೊಂದಿರುವ ಪ್ರದೇಶಕ್ಕೆ ‘ನಗರ’ ಎಂದು ಹೆಸರಿಸಲಾಗಿದೆ.

ಇದನ್ನು ಒಪ್ಪಿಕೊಂಡರೆ ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯ ಚಿತ್ರಣವೇ ಬದಲಾಗಿ ಹಲವು ರಾಜಕೀಯ ನಾಯಕರು ಹಿಡಿತ ಕಳೆದುಕೊಳ್ಳುತ್ತಾರೆ. ಸಾಕಷ್ಟು ಅಧಿಕಾರಿಗಳು ಆಯಕಟ್ಟಿನ ಸ್ಥಾನಗಳನ್ನು ಕಳೆದುಕೊಳ್ಳುತ್ತಾರೆ ಎಂಬ ಭೀತಿಗೆ ಒಳಗಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಗರ ಸ್ಥಳೀಯ ಸಂಸ್ಥೆಗಳಿಗೆ ಸೇರಿದ ಎಂಟು ಕಾಯ್ದೆಗಳನ್ನು ಕ್ರೋಡೀಕರಿಸಿ ಈ ಮಸೂದೆಯನ್ನು ರೂಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.