ADVERTISEMENT

ಎನ್‌ಆರ್‌ಸಿ ಗೊಂದಲಕ್ಕೆ ತೆರೆ ಎಳೆಯಿರಿ: ಯು.ಟಿ.ಖಾದರ್‌ ಆಗ್ರಹ

ಮುಖ್ಯಮಂತ್ರಿ, ಗೃಹ ಸಚಿವರಿಗೆ ಯು.ಟಿ.ಖಾದರ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಜನವರಿ 2020, 20:00 IST
Last Updated 16 ಜನವರಿ 2020, 20:00 IST
ಶಾಸಕ ಯು.ಟಿ.ಖಾದರ್‌ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.– ಪ್ರಜಾವಾಣಿ ಚಿತ್ರ
ಶಾಸಕ ಯು.ಟಿ.ಖಾದರ್‌ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.– ಪ್ರಜಾವಾಣಿ ಚಿತ್ರ   

ಮಂಗಳೂರು: ರಾಜ್ಯದಲ್ಲೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಜಾರಿ ಆರಂಭವಾಗಿದೆ ಎಂಬ ಶಂಕೆಯಿಂದ ಜನರು ಸರ್ಕಾರಿ ಕಾರ್ಯಕ್ರಮಗಳಿಗೆ ದಾಖಲೆ ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಕೂಡಲೇ ಈ ಗೊಂದಲಕ್ಕೆ ತೆರೆ ಎಳೆಯಬೇಕು ಎಂದು ಶಾಸಕ ಯು.ಟಿ.ಖಾದರ್‌ ಆಗ್ರಹಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರೋಗ್ಯ ಇಲಾಖೆಯ ಯೋಜನೆಗಳೂ ಸೇರಿದಂತೆ ಸರ್ಕಾರಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ದಾಖಲೆ ಸಂಗ್ರಹಿಸಲು ಎನ್‌ಆರ್‌ಸಿಯ ಭಯ ದೊಡ್ಡ ತೊಡಕು ಉಂಟು ಮಾಡುತ್ತಿದೆ. ಹೆಚ್ಚಿನವರು ದಾಖಲೆಗಳನ್ನು ನೀಡಲು ನಿರಾಕರಿಸುತ್ತಿದ್ದಾರೆ. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆ ಭೇಟಿಗೆ ಹೋಗಲು ಸಾಧ್ಯವಾಗದ ಪರಿಸ್ಥಿತಿ ಕೆಲವೆಡೆ ಇದೆ’ ಎಂದರು.

ರಾಜ್ಯದಲ್ಲಿ ಎನ್‌ಆರ್‌ಸಿ ಅನುಷ್ಠಾನ ಪ್ರಕ್ರಿಯೆ ಆರಂಭವಾಗಿಲ್ಲ. ಆದರೆ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಸಂಸತ್ತಿನಲ್ಲೇ ನೀಡಿದ ಹೇಳಿಕೆಯಿಂದ ಇಡೀ ದೇಶದಲ್ಲಿ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಸರ್ಕಾರಿ ಯೋಜನೆಗಳಿಗೆ ಮಾಹಿತಿ ಸಂಗ್ರಹಿಸುವುದೂ ಕಷ್ಟವಾಗಿದೆ. ಈ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ತಕ್ಷಣವೇ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಪೋಲಿಯೊ ಲಸಿಕೆ ಹಾಕಿಸಿ:

ಇದೇ ಭಾನುವಾರ ದೇಶದಾದ್ಯಂತ ಪೋಲಿಯೊ ಲಸಿಕೆ ಅಭಿಯಾನ ನಡೆಯುತ್ತಿದೆ. ಎನ್‌ಆರ್‌ಸಿ ವಿಷಯದಲ್ಲಿನ ಗಾಬರಿಯಿಂದ ಪೋಷಕರು ತಮ್ಮ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಿಸುವುದನ್ನು ತಪ್ಪಿಸಬಾರದು. ಅಂತಹ ತಪ್ಪು ಮಾಡಿದರೆ ಭವಿಷ್ಯದಲ್ಲಿ ಸಮಸ್ಯೆಗೆ ಸಿಲುಕಬೇಕಾಗುತ್ತದೆ. ಎನ್‌ಆರ್‌ಸಿಗೂ ಪಲ್ಸ್‌ ಪೋಲಿಯೊ ಲಸಿಕೆಗೂ ಸಂಬಂಧ ಕಲ್ಪಿಸಬಾರದು ಎಂದು ಖಾದರ್‌ ಮನವಿ ಮಾಡಿದರು.

ಎಲ್ಲ ಹಂತದ ಚುನಾಯಿತ ಪ್ರತಿನಿಧಿಗಳು ತಮ್ಮ ವ್ಯಾಪ್ತಿಯಲ್ಲಿ ಈ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕು. ಜನರಲ್ಲಿ ಉಂಟಾಗಿರುವ ಗೊಂದಲಕ್ಕೆ ತೆರೆ ಎಳೆಯಲು ಪ್ರಯತ್ನಿಸಬೇಕು. ರಾಜ್ಯ ಸರ್ಕಾರ ಅಧಿಕೃತವಾಗಿ ಪ್ರಕಟಿಸಿದರೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ದೊರಕುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.