ADVERTISEMENT

ಶಿಕ್ಷಕರು, ವಿದ್ಯಾರ್ಥಿಗಳ ತರಬೇತಿಗೆ ಮೆಟಾ ಸಹಭಾಗಿತ್ವ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2023, 22:01 IST
Last Updated 28 ನವೆಂಬರ್ 2023, 22:01 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಆನ್‌ಲೈನ್‌ ಸುರಕ್ಷತೆ ಮತ್ತು ಡಿಜಿಟಲ್‌ ಪೌರತ್ವದ ಕುರಿತು ರಾಜ್ಯದ ಒಂದು ಲಕ್ಷ ಶಿಕ್ಷಕರು ಹಾಗೂ ಹತ್ತು ಲಕ್ಷ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಯೋಜನೆಗೆ ಸಹಭಾಗಿತ್ವ ವಹಿಸಲು ರಾಜ್ಯ ಸರ್ಕಾರವು ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಸಂಸ್ಥೆಯಾದ ಮೆಟಾ ಜತೆ ಮಂಗಳವಾರ ಒಪ್ಪಂದಕ್ಕೆ ಸಹಿಮಾಡಿದೆ.

ಮೆಟಾ ಕಂಪನಿಯ ಉಪಾಧ್ಯಕ್ಷ ಜೋಯಲ್‌ ಕಪ್ಲಾನ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಂಗಳವಾರ ಭೇಟಿ ಮಾಡಿದರು. ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಕೂಡ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಮೆಟಾ ಪ್ರತಿನಿಧಿಗಳು ಒಪ್ಪಂಕ್ಕೆ ಸಹಿ ಹಾಕಿದರು.

ADVERTISEMENT

2025ರ ವೇಳೆಗೆ ರಾಜ್ಯದ 100 ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಒಂದು ಲಕ್ಷ ಶಿಕ್ಷಕರು ಹಾಗೂ ಹತ್ತು ಲಕ್ಷ ವಿದ್ಯಾರ್ಥಿಗಳಿಗೆ ಡಿಜಿಟಲ್‌ ಜಾಗೃತಿಯ ತರಬೇತಿ ನೀಡುವ ಗುರಿ ಇದೆ. ಮುಖ್ಯ ತರಬೇತುದಾರರಿಗೆ ತರಬೇತಿ ನೀಡಲಾಗುತ್ತದೆ. ಅವರು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಾರೆ. ಈ ಯೋಜನೆಯಡಿ ಮೆಟಾ ಕಂಪನಿಯು ಸರ್ಕಾರದ ವಿವಿಧ ಇಲಾಖೆಗಳ ಮಧ್ಯೆ ಮಾಹಿತಿ ವಿನಿಮಯಕ್ಕೆ ಪ್ರತ್ಯೇಕವಾದ ವಾಟ್ಸ್‌ ಆ್ಯಪ್‌ ಚಾಟ್‌ಬಾಟ್‌ ಅಭಿವೃದ್ಧಿಪಡಿಸಲಿದೆ.

ಒಪ್ಪಂದದ ಕುರಿತು ಮಾತನಾಡಿದ ಸಿದ್ದರಾಮಯ್ಯ, ‘ಆನ್‌ಲೈನ್‌ ಸುರಕ್ಷತೆ ಕುರಿತು ತರಬೇತಿ ನೀಡುವುದು ಈಗಿನ ತುರ್ತಾಗಿದೆ. ಡೀಪ್‌ಫೇಕ್‌ಗಳಂತಹ ತಂತ್ರಜ್ಞಾನಗಳಿಂದ ಎದುರಾಗುವ ಅಪಾಯಗಳನ್ನು ಎದುರಿಸಲು ಈ ತರಬೇತಿ ಸಹಕಾರಿಯಾಗುತ್ತದೆ’ ಎಂದರು.

ಪ್ರಿಯಾಂಕ್‌ ಖರ್ಗೆ ಮಾತನಾಡಿ, ‘ಆನ್‌ಲೈನ್‌ ಸುರಕ್ಷತೆಗೆ ಸಂಬಂಧಿಸಿದ ವಿಷಯಗಳು ಭವಿಷ್ಯದಲ್ಲಿ ಹೆಚ್ಚಿನ ಉದ್ಯೋಗಗಳ ಸೃಜನೆಗೆ ಪೂರಕವಾಗಲಿವೆ. ಆ ನಿಟ್ಟಿನಲ್ಲಿ ನಮ್ಮ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ತರಬೇತಿ ನೀಡಲಾಗುತ್ತಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.