ADVERTISEMENT

ಸರ್ಕಾರದ ಮೈಮರೆವು ಅಪಾಯಕಾರಿ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 17:35 IST
Last Updated 18 ಜೂನ್ 2021, 17:35 IST
ಎಚ್‌.ಡಿ. ಕುಮಾರಸ್ವಾಮಿ
ಎಚ್‌.ಡಿ. ಕುಮಾರಸ್ವಾಮಿ   

ಬೆಂಗಳೂರು: ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ನಡೆಸುತ್ತಿರುವ ಪ್ರಯತ್ನಗಳ ಬಗ್ಗೆ ರಾಜ್ಯದ ಬಿಜೆಪಿ ಸರ್ಕಾರ ಸರಿಯಾದ ಕ್ರಮ ಕೈಗೊಳ್ಳದೆ, ಆಂತರಿಕ ಕಲಹದಲ್ಲೇ ಮೈಮರೆತಿರುವುದು ಕರ್ನಾಟಕದ ಪಾಲಿಗೆ ಅಪಾಯಕಾರಿಯಾಗಲಿದೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

ಈ ಕುರಿತು ಶುಕ್ರವಾರ ಸರಣಿ ಟ್ವೀಟ್‌ ಮಾಡಿರುವ ಅವರು, ‘ಕರ್ನಾಟಕದ ಮೇಕೆದಾಟು ಜಲಾಶಯ ನಿರ್ಮಾಣ ಕಾಮಗಾರಿಗೆ ತಡೆ ನೀಡುವಂತೆ ಮತ್ತು ಪ್ರಸಕ್ತ ವರ್ಷದಲ್ಲಿ ತಮಿಳುನಾಡಿನ ಪಾಲಿನ ಪೂರ್ಣ ನೀರನ್ನು ಬಿಡುಗಡೆ ಮಾಡಿಸುವಂತೆ ಸ್ಟಾಲಿನ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಒತ್ತಾಯಿಸಿದ್ದಾರೆ. ಈ ಬಗ್ಗೆ ಕ್ಷಿಪ್ರವಾಗಿ ಪ್ರತಿಕ್ರಿಯಿಸಬೇಕಿದ್ದ ಆಡಳಿತಾರೂಢ ಬಿಜೆಪಿ ಮೈಮರೆತು ಕುಳಿತಿದೆ’ ಎಂದು ಟೀಕಿಸಿದ್ದಾರೆ.

ಎರಡೂ ರಾಷ್ಟ್ರೀಯ ಪಕ್ಷಗಳ ಸರ್ಕಾರಗಳು ಇದ್ದಾಗ ಮೇಕೆದಾಟು ಯೋಜನೆ ರೂಪಿಸಲು ಸಾಧ್ಯವಾಗಿರಲಿಲ್ಲ. ತಮ್ಮ ಸರ್ಕಾರ ಅದನ್ನು ಜಾರಿಗೆ ತರುವ ಧೈರ್ಯ ತೋರಿತು. ರಾಜ್ಯ ಮತ್ತು ಕೇಂದ್ರ ಎರಡೂ ಕಡೆ ಬಿಜೆಪಿ ಸರ್ಕಾರ ಇದ್ದರೂ ಯೋಜನೆಗೆ ಅನಿಶ್ಚಿತತೆ ಎದುರಾಗಿದೆ. ಸರ್ಕಾರ ನಡೆಸಲಾಗದೆ ನಲುಗಿ ಹೋಗಿರುವ ಬಿಜೆಪಿಗೆ ನೆಲ, ಜಲ, ಭಾಷೆಯ ಬಗ್ಗೆ ಅಕ್ಕರೆ ಇದೆಯೆ ಎಂದು ಪ್ರಶ್ನಿಸಿದ್ದಾರೆ.

ADVERTISEMENT

‘ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷ ಅಧಿಕಾರದಲ್ಲಿ ಇರುವುದರಿಂದ ಆ ನಾಡಿನ ಅಸ್ಮಿತೆ ಪ್ರಬಲವಾಗಿದೆ. ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳೇ ಹೆಚ್ಚು ಅಧಿಕಾರ ನಡೆಸಿವೆ. ಆದರೆ, ರಾಜ್ಯದ ಹಿತಾಸಕ್ತಿ ರಕ್ಷಣೆ ಸಾಧ್ಯವಾಗುತ್ತಿಲ್ಲ ಎಂಬುದನ್ನು ಜನರು ಗಮನಿಸಬೇಕು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.