ADVERTISEMENT

ರಾಜ್ಯಪಾಲರ ಟೀಕೆ ಸಲ್ಲದು: ರೂಲಿಂಗ್‌ ನೀಡಿದ ಸಭಾಧ್ಯಕ್ಷ ಯು.ಟಿ. ಖಾದರ್‌

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 15:30 IST
Last Updated 28 ಜನವರಿ 2026, 15:30 IST
ಯು.ಟಿ ಖಾದರ್‌
ಯು.ಟಿ ಖಾದರ್‌   

ಬೆಂಗಳೂರು: ‘ರಾಜ್ಯಪಾಲರು ಭಾಷಣ ಮಾಡಿ ತೆರಳುವಾಗ ನಡೆದಂತಹ ಘಟನೆಗಳು ಇನ್ನು ಮುಂದೆ ನಡೆಯದಂತೆ ಸದನದ ಎಲ್ಲ ಸದಸ್ಯರು ಎಚ್ಚರ ವಹಿಸಬೇಕು. ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಚರ್ಚೆಯಲ್ಲಿ ಭಾಗವಹಿಸುವ ಯಾವುದೇ ಸದಸ್ಯ, ರಾಜ್ಯಪಾಲರ ನಡವಳಿಕೆಯ ಬಗ್ಗೆ ಮಾತನಾಡಬಾರದು’ ಎಂದು ಸಭಾಧ್ಯಕ್ಷ ಯು.ಟಿ. ಖಾದರ್‌ ರೂಲಿಂಗ್‌ ನೀಡಿದರು.

ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿ ರಾಜ್ಯಪಾಲರ ನಡವಳಿಕೆಯ ಬಗ್ಗೆ ವಿಧಾನಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಮತ್ತು ವಿರೋಧ ಪಕ್ಷಗಳಾದ ಬಿಜೆಪಿ, ಜೆಡಿಎಸ್ ಸದಸ್ಯರ ನಡುವಿನ ಆರೋಪ–ಪ್ರತ್ಯಾರೋಪ ಬುಧವಾರ ತಾರಕಕ್ಕೇರಿತು. ಕಲಾಪವನ್ನು ಹತ್ತು ನಿಮಿಷ ಮುಂದೂಡಲಾಗಿತ್ತು.

ಈ ವೇಳೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಉಭಯ ಪಕ್ಷಗಳ ಪ್ರಮುಖರ ಜೊತೆ ತಮ್ಮ ಕೊಠಡಿಯಲ್ಲಿ ಸಭಾಧ್ಯಕ್ಷರು ಚರ್ಚೆ ನಡೆಸಿದರು. ಬಳಿಕ, ಕಲಾಪ ಆರಂಭವಾದಾಗ  ರೂಲಿಂಗ್‌ ನೀಡಿದ ಸಭಾಧ್ಯಕ್ಷರು, ರಾಜ್ಯಪಾಲರ ನಡವಳಿಕೆಯ ಕುರಿತ ಚರ್ಚೆಗೆ ಅಂತ್ಯವಾಡಿದರು.

ADVERTISEMENT

‘ರಾಜ್ಯಪಾಲರು ಭಾಷಣ ಮಾಡಿದ ನಂತರ ಸದನದಲ್ಲಿ ನಡೆದಿರುವ ಘಟನೆಗಳು ಮತ್ತು ಚರ್ಚೆಯು ಸಾರ್ವಜನಿಕರಲ್ಲಿ ತಪ್ಪು ಸಂದೇಶ ಮೂಡಲು ಕಾರಣವಾಗಿದೆ. ಈ ಸದನದ ಸದಸ್ಯರಾಗಿರುವ ನಮ್ಮ ನಡತೆ ಮತ್ತು ವ್ಯಕ್ತಪಡಿಸುವ ಅಭಿಪ್ರಾಯಗಳು ಸದಭಿರುಚಿಯಿಂದ ಮತ್ತು ಸಂವಿಧಾನದತ್ತವಾಗಿ ಇರಬೇಕಾಗಿದೆ. ಅಲ್ಲದೆ, ಈ ಸದನದ ಹಾಗೂ ಸದಸ್ಯರ ಘನತೆ ಮತ್ತು ಗೌರವವನ್ನು ಎತ್ತಿ ಹಿಡಿಯುವಂತಿರಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಈ ವಿಷಯವನ್ನು ಇಲ್ಲಿಗೆ ಮುಕ್ತಾಯಗೊಳಿಸಿ, ರಾಜ್ಯಪಾಲರು ಮಾಡಿದ ಭಾಷಣ ಮೇಲಿನ ವಂದನಾ ನಿರ್ಣಯದ ಮೇಲೆ ಚರ್ಚೆ ಮಾಡಬೇಕು’ ಎಂದೂ ಖಾದರ್‌ ರೂಲಿಂಗ್‌ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.