ADVERTISEMENT

ರಾಜ್ಯಪಾಲರ ಹೆಸರಿನಲ್ಲಿ ವಂಚನೆ: ಬಳ್ಳಾರಿ ವ್ಯಕ್ತಿ ಬಂಧನ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2022, 21:30 IST
Last Updated 6 ಆಗಸ್ಟ್ 2022, 21:30 IST
ಸದ್ರುಲ್ಲಾ ಖಾನ್
ಸದ್ರುಲ್ಲಾ ಖಾನ್   

ಬೆಂಗಳೂರು: ನಾನಾ ಹುದ್ದೆಗಳ ಆಮಿಷವೊಡ್ಡಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್ ಅವರ ಹೆಸರಿನಲ್ಲಿ ವಂಚಿಸುತ್ತಿದ್ದ ಆರೋಪಿ ಸದ್ರುಲ್ಲಾ ಖಾನ್ ಎಂಬುವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಬಳ್ಳಾರಿಯ ಸದ್ರುಲ್ಲಾ ಖಾನ್, ರಾಜ್ಯಪಾಲರ ಹೆಚ್ಚುವರಿ ಕಾರ್ಯದರ್ಶಿ ಎಂದು ಸುಳ್ಳು ಹೇಳಿಕೊಂಡು ಜನರನ್ನು ವಂಚಿಸುತ್ತಿದ್ದ. ಈತನನ್ನು ಬಂಧಿಸಿ, ನಕಲಿ ಗುರುತಿನ ಚೀಟಿ, ಇತರೆ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.

‘ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್.ಪ್ರಭುಶಂಕರ್ ಅವರು ಆರೋಪಿ ವಿರುದ್ಧ ಜುಲೈ 29ರಂದು ವಿಧಾನಸೌಧ ಠಾಣೆಗೆ ದೂರು ನೀಡಿದ್ದರು. ಈ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿತ್ತು’ ಎಂದೂ ತಿಳಿಸಿವೆ.

ADVERTISEMENT

‘ಆರೋಪಿ ಸದ್ರುಲ್ಲಾ ಖಾನ್, ಬಳ್ಳಾರಿಯಲ್ಲಿ ಮಕ್ಕಳಿಗಾಗಿ ಟ್ಯೂಷನ್ ನಡೆಸುತ್ತಿದ್ದ. ಕೋವಿಡ್ ಲಾಕ್‌ಡೌನ್‌ ಸಂದರ್ಭದಲ್ಲಿ ಟ್ಯೂಷನ್‌ ಬಂದ್ ಮಾಡಿದ್ದ. ಆರ್ಥಿಕ ತೊಂದರೆ ಅನುಭವಿಸುತ್ತಿದ್ದ ಈತ, ರಾಜ್ಯಪಾಲರ ಹೆಸರಿನಲ್ಲಿ ವಂಚನೆಗೆ ಇಳಿದಿದ್ದ. ಈತನನ್ನು ಕೋರ್ಟ್‌ಗೆ ಹಾಜರುಪಡಿಸಲಿದ್ದು, ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುವುದು’ ಎಂದೂ ಹೇಳಿವೆ.

ನಕಲಿ ನೇಮಕಾತಿ ಆದೇಶ ಸೃಷ್ಟಿ: ‘ರಾಜ್ಯಪಾಲರ ಹೆಚ್ಚುವರಿ ಕಾರ್ಯದರ್ಶಿ ಹಾಗೂ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಸೆನೆಟ್ ಸದಸ್ಯನೆಂದು ಹೇಳಿಕೊಂಡಿದ್ದ ಸದ್ರುಲ್ಲಾ ಖಾನ್, ಗೀತಾ ಶಶಿಕುಮಾರ್ ಎಂಬುವರನ್ನು ಪರಿಚಯಿಸಿಕೊಂಡು ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ್ದ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

‘ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಗೀತಾ ಶಶಿಕುಮಾರ್ ನೇಮಕವಾದ ರೀತಿಯಲ್ಲಿ ಆರೋಪಿ ನಕಲಿ ಆದೇಶ ಸೃಷ್ಟಿಸಿದ್ದ’ ಎಂದೂ ಹೇಳಿವೆ.

‘ರಾಜ್ಯಪಾಲರ ಕಚೇರಿ ಸಿಬ್ಬಂದಿಗಳಾದ ಎಸ್. ಸಂತೋಷ್ ಹಾಗೂ ಮಲ್ಲಿಕಾರ್ಜುನ ಬಾಳಿಕಾಯಿ ಅವರಿಗೂ ಆರೋಪಿ ವಂಚಿಸಿದ್ದನೆಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.