ADVERTISEMENT

ಕೋವಿಡ್‌ ಎದುರಿಸುವಲ್ಲಿ ಸರ್ಕಾರ ಯಶಸ್ವಿ: ರಾಜ್ಯಪಾಲರ ಪ್ರಶಂಸೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2022, 18:56 IST
Last Updated 14 ಫೆಬ್ರುವರಿ 2022, 18:56 IST
   

ಬೆಂಗಳೂರು: ಕೋವಿಡ್‌ನಿಂದ ಎದುರಾದ ಸವಾಲು ಮತ್ತು ಸಂಕಷ್ಟಗಳನ್ನು ಸಮರ್ಥವಾಗಿ ಎದುರಿಸಿ, ರಾಜ್ಯವನ್ನು ಅಭಿವೃದ್ಧಿಯತ್ತ ಮುನ್ನಡೆಸುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಶ್ಲಾಘಿಸಿದರು‌.

ವಿಧಾನಸಭೆಯ ಸಭಾಂಗಣದಲ್ಲಿ ಸೋಮವಾರ ನಡೆದ ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಅವರು, ‘ಕೋವಿಡ್ ನಿರ್ವಹಣೆ ಮತ್ತು ನಿರ್ವಹಣೆಯ ವಿಚಾರದಲ್ಲಿ ಕರ್ನಾಟಕ ಸರ್ಕಾರವು ಅಗತ್ಯಕ್ಕೆ ಅನುಸಾರವಾಗಿ ಕೆಲಸ ಮಾಡಿದೆ. ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳಿಂದಾಗಿ ರಾಜ್ಯದಲ್ಲಿ ಸಾವಿನ ಸಂಖ್ಯೆಯನ್ನು ಕಡಿಮೆ‌ ಮಾಡಲು ಸಾಧ್ಯವಾಗಿದೆ’ ಎಂದರು.

ರಾಜ್ಯದಲ್ಲಿ 9.33 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ. ಶೇಕಡ 100ರಷ್ಟು ಜನರಿಗೆ ಮೊದಲ ಡೋಸ್ ಮತ್ತು ಶೇ 85ರಷ್ಟು ಜನರಿಗೆ ಎರಡನೇ ಡೋಸ್ ನೀಡಲಾಗಿದೆ‌. ಆರು ಕೋಟಿ ಕೋವಿಡ್ ಪರೀಕ್ಷೆ ನಡೆಸಿದ್ದು, ಈ ವಿಚಾರದಲ್ಲಿ ಕರ್ನಾಟಕವು ದೇಶದ ಮುಂಚೂಣಿ ರಾಜ್ಯಗಳಲ್ಲಿ ಒಂದಾಗಿದೆ ಎಂದು ಹೇಳಿದರು.

ADVERTISEMENT

55,256 ಎಚ್‌ಡಿಯು ಹಾಸಿಗೆಗಳು, 7,216 ಐಸಿಯು ಹಾಸಿಗೆಗಳು, 6,123 ಐಸಿಯು- ವೆಂಟಿಲೇಟರ್ ಹಾಸಿಗೆ ಸೇರಿದಂತೆ 1.95 ಲಕ್ಷ ಹಾಸಿಗೆಗಳನ್ನು ಕೋವಿಡ್‌ ಚಿಕಿತ್ಸೆಗಾಗಿ ಸಜ್ಜುಗೊಳಿಸಲಾಗಿದೆ. 1,200 ಟನ್ ಆಮ್ಲಜನಕ ಉತ್ಪಾದಿಸುವಷ್ಟು ಸಾಮರ್ಥ್ಯ ವೃದ್ಧಿಸಲಾಗಿದೆ ಎಂದರು.

ಆಯುಷ್ಮಾನ್‌ ಭಾರತ್‌ ಯೋಜನೆ ಅಡಿಯಲ್ಲಿ 8.25 ಲಕ್ಷ ಆರೋಗ್ಯ ಕಾರ್ಡ್‌ ವಿತರಿಸಲಾಗಿದೆ. 6.7 ಲಕ್ಷ ಫಲಾನುಭವಿಗಳ ಚಿಕಿತ್ಸೆಗಾಗಿ ₹ 875 ಕೋಟಿ ವೆಚ್ಚ ಮಾಡಲಾಗಿದೆ. ‘ಆರೋಗ್ಯ ನಂದನ’ ಯೋಜನೆಯಡಿ 70 ಲಕ್ಷಕ್ಕೂ ಹೆಚ್ಚು ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.

2022-23ರಲ್ಲಿ 27.14 ಲಕ್ಷ ಮತ್ತು 2023- 24ರಲ್ಲಿ 17.45 ಲಕ್ಷ‌ ಮನೆಗಳಿಗೆ ನಲ್ಲಿ ಮೂಲಕ ಕುಡಿಯುವ ನೀರಿ‌ನ ಸಂಪರ್ಕ ಕಲ್ಪಿಸಲಾಗುವುದು. 5,965 ಗ್ರಾಮ ಪಂಚಾಯಿತಿಗಳ ಪೈಕಿ 5,571 ಗ್ರಾಮ ಪಂಚಾಯಿತಿಗಳಲ್ಲಿ ಘನ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯಪಾಲರು ಹೇಳಿದರು.

ಪ್ರವಾಹದಿಂದ ಹಾನಿಯಾದ ಪ್ರಕರಣಗಲ್ಲಿ 85,862 ಕುಟುಂಬಗಳಿಗೆ ₹ 85.86 ಕೋಟಿ ಪರಿಹಾರ ನೀಡಲಾಗಿದೆ. ಹಾನಿಗೀಡಾದ ಮನೆಗಳ ಪುನರ್ ನಿರ್ಮಾಣಕ್ಕೆ ₹ 400.52 ಕೋಟಿ ನೆರವು ಒದಗಿಸಲಾಗಿದೆ ಎಂದರು.

ಮುಖ್ಯಮಂತ್ರಿ ರೈತ ವಿದ್ಯಾರ್ಥಿ ನಿಧಿ ಯೋಜನೆ ಅಡಿಯಲ್ಲಿ 5.2 ಲಕ್ಷ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಿಗೆ ₹ 126 ಕೋಟಿ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದರು.

ಎಫ್‌ಡಿಐ ಹೆಚ್ಚಳ: 2021ರ ಏಪ್ರಿಲ್‌– ಜೂನ್‌ ಅವಧಿಯಲ್ಲಿ ಭಾರತಕ್ಕೆ ಹರಿದುಬಂದ ವಿದೇಶಿ ನೇರ ಹೂಡಿಕೆಯಲ್ಲಿ ಶೇಕಡ 48ರಷ್ಟು ಕರ್ನಾಟಕಕ್ಕೆ ಬಂದಿದೆ. ನೀತಿ ಆಯೋಗ ಪ್ರಕಟಿಸಿರುವ ‘ಇಂಡಿಯಾ ಇನ್ನೋವೇಷನ್‌ ಇಂಡೆಕ್ಸ್‌–2020’ರಲ್ಲಿ ‘ಪ್ರಮುಖ ರಾಜ್ಯಗಳು’ ವಿಭಾಗವು ಕರ್ನಾಟಕ ಅಗ್ರ ಸ್ಥಾನದಲ್ಲಿದೆ ಎಂದು ಗೆಹಲೋತ್‌ ಹೇಳಿದರು.

ಬೆಂಗಳೂರು ಮೆಟ್ರೊ ರೈಲು ಯೋಜನೆಯ ಹಂತ–2ರ ಅಡಿಯಲ್ಲಿ 32.54 ಕಿ.ಮೀ. ಉದ್ದದ ಮಾರ್ಗದ ನಿರ್ಮಾಣ ಕಾಮಗಾರಿಯನ್ನು 2023ರಲ್ಲಿ ಮುಕ್ತಾಯಗೊಳಿಸಲಾಗುವುದು. ಬಿಬಿಎಂಪಿ ವ್ಯಾಪ್ತಿಯಲ್ಲಿ 158.27 ಕಿ.ಮೀ. ಉದ್ದದ ರಸ್ತೆಗಳನ್ನು ಗುಂಡಿ ಮುಕ್ತಗೊಳಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.