ADVERTISEMENT

ಮತದಾರರ ಪಟ್ಟಿ‌ ಪರಿಶೀಲನೆಗೆ ರಾಜ್ಯಪಾಲ ಸೂಚನೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2019, 10:14 IST
Last Updated 25 ಜನವರಿ 2019, 10:14 IST
ವಜುಭಾಯಿ ವಾಲಾ
ವಜುಭಾಯಿ ವಾಲಾ   

ಬೆಂಗಳೂರು:‘ಹೊಸ ಮತದಾದರ ಪಟ್ಟಿಯಲ್ಲಿಕೆಲವರ ಹೆಸರು ಬಿಟ್ಟು ಹೋಗುತ್ತಿರುವುದರ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಹೀಗಾಗಿ, ಎರಡೆರಡು ಬಾರಿ ಪಟ್ಟಿ ಪರಿಶೀಲನೆಯಾಗಬೇಕು’ ಎಂದು ರಾಜ್ಯಪಾಲ ವಜುಭಾಯಿ ವಾಲಾ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದರು.

ಕೇಂದ್ರ ಚುನಾವಣಾ ಆಯೋಗ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನ ಕಾರ್ಯಕ್ರಮದಲ್ಲಿ ಅವರು‌ ಮಾತನಾಡಿದರು.

‘ಕೆಲವು ರಾಜಕೀಯ ಪಕ್ಷಗಳು ವಿದ್ಯುನ್ಮಾನ ಮತ ಯಂತ್ರ (ಇವಿಎಂ)ದಲ್ಲಿ ದೋಷವಿದೆ ಎಂದು ಆರೋಪಿಸುತ್ತಾರೆ. ದೋಷವೆಲ್ಲಿದೆ ತೋರಿಸಿ ಎಂದು ಆಯೋಗದ ಅಧಿಕಾರಿಗಳು ಪ್ರಶ್ನಿಸುತ್ತಾರೆ. ಯಂತ್ರ ದೋಷ ಮುಕ್ತವಾಗಿದೆ ಎಂಬುದರ ಬಗ್ಗೆ ಅಧಿಕಾರಿಗಳು ಮತದಾರರಲ್ಲಿ ವಿಶ್ವಾಸ ಮೂಡಿಸುವ ಅಗತ್ಯವಿದೆ’ ಎಂದರು.

ADVERTISEMENT

‘ರಾಜ್ಯದಲ್ಲಿ 5 ಕೋಟಿ ಮತದಾರರಿದ್ದಾರೆ. ಜನವರಿ 1ಕ್ಕೆ 12 ಲಕ್ಷ ಹೊಸ ಮತದಾರರು ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟುಹೋದವರನ್ನು ಹುಡಿಕಿ, ಕೂಲಂಕುಷವಾಗಿ ಪರಿಶೀಲಿಸಿ, ಹೆಸರು ಸೇರ್ಪಡೆಯಾಗುವಂತೆ ಮತ್ತು ಎಚ್ಚರಿಕೆಯಿಂದ ಪಟ್ಟಿ ತಯಾರಾಗಲು ಕ್ರಮಕೈಗೊಳ್ಳುವುದುಆಯೋಗದ ಜವಾಬ್ದಾರಿ’ ಎಂದು ಹೇಳಿದರು.

‘ಯಾರಿಗೆ ಮತ ಹಾಕುತ್ತಿದ್ದೇವೆ ಎಂಬುದರ ಬಗ್ಗೆ ಎಚ್ಚರವಹಿಸಿ. ಮತ ಪಡೆಯಲು ಯಾರೂ ಸೂಕ್ತ ವ್ಯಕ್ತಿಗಳಲ್ಲ ಅನ್ನಿಸಿದಾಗ ‘ನೋಟಾ’ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ರಾಷ್ಟ್ರದ ಬಲಿಷ್ಠತೆಗಾಗಿ ಎಲ್ಲರೂ ಮತದಾನ ಸೇವೆ ಮಾಡಬೇಕು’ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಚುನಾವಣೆ ಕುರಿತರಾಜ್ಯ ಮಟ್ಟದ ರಸಪ್ರಶ್ನೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.