ADVERTISEMENT

ಪ್ರತಿ ತಲೆಗೆ ಅರ್ಧ ಲಕ್ಷ ಹೊರೆ!

₹3 ಲಕ್ಷ ಕೋಟಿ ದಾಟಲಿದೆ ರಾಜ್ಯ ಸರ್ಕಾರದ ಸಾಲ

ವೈ.ಗ.ಜಗದೀಶ್‌
Published 27 ಜನವರಿ 2019, 20:32 IST
Last Updated 27 ಜನವರಿ 2019, 20:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯ ಸರ್ಕಾರದ ಸಾಲದ ಮೊತ್ತ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದ್ದು, ನಾಡಿನ ಜನಸಂಖ್ಯೆಗೆ ಲೆಕ್ಕ ಹಾಕಿದರೆ ಪ್ರತಿಯೊಬ್ಬರ ತಲೆ ಮೇಲೆ ಅರ್ಧ ಲಕ್ಷ ಸಾಲದ ‘ಹೊರೆ’ಯನ್ನು ಆಳುವವರು ಹಾಕಿದ್ದಾರೆ.

ನಮ್ಮನ್ನು ಆಳಿದವರು ಅಧಿಕಾರದಲ್ಲಿ ಉಳಿಯಲು, ಮತ್ತೆ ಅಧಿಕಾರಕ್ಕೆ ಏರಲು ಘೋಷಿಸಿದ, ಘೋಷಿಸುತ್ತಲೇ ಇರುವ ಜನಪ್ರಿಯ ಕಾರ್ಯಕ್ರಮಗಳಿಗಾಗಿ ಸಾಲದ ಮೊತ್ತ ಏರುಗತಿಯಲ್ಲೇ ಇದೆ. ಫೆ. 8ರಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ಗಾತ್ರ ₹2.30 ಲಕ್ಷಕೋಟಿಗೆ ಮುಟ್ಟಲಿದೆ ಎಂಬ ಲೆಕ್ಕಾಚಾರವಿದೆ. ಅದೇ ಹೊತ್ತಿಗೆ ಸಾಲದ ಗಾತ್ರ ₹3 ಲಕ್ಷ ಕೋಟಿಯನ್ನು ದಾಟಲಿದೆ ಎನ್ನುತ್ತವೆ ಆರ್ಥಿಕ ಇಲಾಖೆಯ ಮೂಲಗಳು.

‘ಋಣಮುಕ್ತ ರೈತ’ ಎಂಬ ಘೋಷಣೆಕೊಟ್ಟಿದ್ದ ಕುಮಾರಸ್ವಾಮಿ, ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಬೆಳೆ ಸಾಲ ಮನ್ನಾ ಮಾಡಲು ಕ್ರಮ ಕೈಗೊಂಡಿದ್ದಾರೆ. ಇದಕ್ಕಾಗಿ ₹48 ಸಾವಿರ ಕೋಟಿ ಅಗತ್ಯ. ಜುಲೈನಲ್ಲಿ ಮಂಡಿಸಿದ್ದ ಬಜೆಟ್‌ನಲ್ಲಿ ₹ 6,500 ಕೋಟಿ ಒದಗಿಸಿದ್ದರು. ಎರಡು ಕಡೆ ಸಾಲ ಪಡೆದವರು, ‘ಅನರ್ಹ’ರನ್ನು ಕೈಬಿಟ್ಟರೂ ₹40 ಸಾವಿರ ಕೋಟಿ ಅಗತ್ಯವಿದೆ.

ADVERTISEMENT

‘ಈ ಸಲದ ಬಜೆಟ್‌ನಲ್ಲಿ ರೈತರ ಋಣ ಬಾಕಿಯನ್ನು ತೀರಿಸುವೆ’ ಎಂದು ಕುಮಾರಸ್ವಾಮಿ ‘ಶಪಥ’ ಮಾಡಿದ್ದಾರೆ. ಬೇರೆ ಮೂಲದಿಂದ ಹಣ ಹೊಂದಿಸಿಕೊಳ್ಳದೇ, ರಾಜ್ಯದ ಸಂಪನ್ಮೂಲ ಆಧರಿಸಿ ರೈತರ ಬಾಕಿ ಚುಕ್ತಾ ಮಾಡಲು ಮುಂದಾದರೆ, ಸಾಲದ ಪ್ರಮಾಣ ಮತ್ತಷ್ಟು ಹೆಚ್ಚಾಗಬಹುದು ಎನ್ನುತ್ತವೆ ಇಲಾಖೆ ಮೂಲಗಳು.

ಸಾಲದ ಏರುಗತಿ:2006–07ರ ಅವಧಿಯಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ಸರ್ಕಾರದ ಸಾಲದಒಟ್ಟುಮೊತ್ತ ₹56,594 ಕೋಟಿಯಷ್ಟಿತ್ತು. ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಹೊತ್ತಿಗೆ ಈ ಪ್ರಮಾಣ ₹2.42 ಲಕ್ಷ ಕೋಟಿ ದಾಟಿತ್ತು.

ಪಡೆಯುವ ಸಾಲಕ್ಕೆ ತಕ್ಕಂತೆ ಪಾವತಿಸಬೇಕಾದ ಬಡ್ಡಿ ಮೊತ್ತವೂ ಗಮನಾರ್ಹವಾಗಿ ಏರಿಕೆಯಾಗುತ್ತಿದೆ. 2018 ಬಜೆಟ್‌ ಮೊತ್ತ ₹2.18 ಲಕ್ಷ ಕೋಟಿಯಾಗಿದ್ದರೆ, ಸಾಲದ ಮೇಲಿನ ಬಡ್ಡಿ ಮೊತ್ತ ₹16,209 ಕೋಟಿಯಷ್ಟಾಗಲಿದೆ.

ರಾಜ್ಯವು ಕೇಂದ್ರ ಸರ್ಕಾರದಿಂದ, ಉಳಿತಾಯ ಪತ್ರಗಳ ಆಧರಿಸಿ ಸಾಲ ಪಡೆಯುವುದಕ್ಕಿಂತ ಮಾರುಕಟ್ಟೆಯಲ್ಲಿ ನೇರ ಸಾಲ ಪಡೆಯುವ ಕ್ರಮದಿಂದಾಗಿ ಬಡ್ಡಿ ಪ್ರಮಾಣ ಹೆಚ್ಚುತ್ತಿದೆ ಎಂದು ಆರ್ಥಿಕ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ (2008) ಮುಖ್ಯಮಂತ್ರಿಯಾದ ಎಲ್ಲರೂ ಸಾಲದ ಮೊರೆ ಹೋಗಿದ್ದೇ ಹೆಚ್ಚು.

ಆಸ್ತಿ ಸೃಜಿಸುವಹಾಗೂ ಸಂಪನ್ಮೂಲ ಕ್ರೋಡೀಕರಣಕ್ಕೆ ನೆರವಾಗುವ ಬಂಡವಾಳ ಹೂಡಿಕೆಗಿಂತ ಜನಪ್ರಿಯ ಕಾರ್ಯಕ್ರಮಗಳಿಗೆ ಆದ್ಯತೆ ನೀಡುತ್ತಲೇ ಬಂದಿದ್ದಾರೆ. ಹೀಗಾಗಿ ಬೊಕ್ಕಸದ ಮೇಲೆ ಹೆಚ್ಚಿನ ಹೊರೆಬೀಳುತ್ತಲೇ ಇದೆ.

ಆಹಾರ, ಸಾರಿಗೆ, ವಸತಿ, ಕೈಗಾರಿಕೆ ಹಾಗೂ ವಿದ್ಯುತ್‌ ಸಹಾಯಧನದ ಮೊತ್ತದ 2008ರಲ್ಲಿ ₹3,902 ಕೋಟಿಗಳಷ್ಟಿತ್ತು. 2018–19ರಲ್ಲಿ ಈ ಮೊತ್ತ ₹20,041 ಕೋಟಿಗೆ ಏರಲಿದೆ ಎಂದು ಅಂದಾಜಿಸಲಾಗಿದೆ.

ಸಾಲ ಏರುತ್ತಿದೆ ಎಂಬ ಆಪಾದನೆ ಬಂದಾಗಲೆಲ್ಲ ‘ಆರ್ಥಿಕ ಹೊಣೆಗಾರಿಕೆ ಅಧಿನಿಯಮ’ದ ಪರಿಮಿತಿಯಲ್ಲೇ ಇದೆ ಎಂದು ಆಳುವವರು ಸಮರ್ಥಿಸುವುದು ಉಂಟು.

ಒಟ್ಟು ಆಂತರಿಕ ಉತ್ಪನ್ನದ ಶೇ 25ರಷ್ಟು ಮೊತ್ತವನ್ನು ಸಾಲ ಪಡೆಯಲು ಅವಕಾಶ ಇದೆ. 2015–16ರಲ್ಲಿ ಇದು 24.91ರಷ್ಟಿದ್ದು, 2016–17ರಲ್ಲಿ ಶೇ 19.81ಕ್ಕೆ ಕುಗ್ಗಿತ್ತು. ಆದರೆ, 2019–20ರಲ್ಲಿ ಈ ಪ್ರಮಾಣವು ಶೇ 21.75ನ್ನು ದಾಟಬಹುದು ಎಂದು ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.