ADVERTISEMENT

₹17,901 ಕೋಟಿ: ಕೇಂದ್ರಕ್ಕೆ ಕೋರಿಕೆ ಸಲ್ಲಿಸಲು ಸಂಪುಟ ತೀರ್ಮಾನ

ಕೇಂದ್ರಕ್ಕೆ ಕೋರಿಕೆ ಸಲ್ಲಿಸಲು ಸಂಪುಟ ತೀರ್ಮಾನ * ಸ್ಪಂದಿಸದ ಕೇಂದ್ರ ಸಚಿವರು ಸಭೆಯಲ್ಲಿ ಕಳವಳ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2023, 20:03 IST
Last Updated 19 ಅಕ್ಟೋಬರ್ 2023, 20:03 IST
ಎಚ್‌.ಕೆ.ಪಾಟೀಲ
ಎಚ್‌.ಕೆ.ಪಾಟೀಲ   

ಬೆಂಗಳೂರು: ಬರ ಕಾರಣ ಬೆಳೆ ನಷ್ಟ, ಕುಡಿಯುವ ನೀರು ಪೂರೈಕೆ ಮತ್ತು ಜಾನುವಾರುಗಳ ಸಂರಕ್ಷಣೆ ಮತ್ತಿತರ ಪರಿಹಾರ ಕಾರ್ಯಗಳಿಗಾಗಿ ಕೇಂದ್ರದಿಂದ ₹17,901.73 ಕೋಟಿ ನೆರವು ಕೋರಲು ತೀರ್ಮಾನಿಸಲಾಗಿದೆ ಎಂದು ಕಾನೂನು ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು.

ಸಚಿವ ಸಂಪುಟ ಸಭೆಯ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಒಟ್ಟು ₹33,770.10 ಕೋಟಿ ಮೌಲ್ಯದ ಬೆಳೆ ಹಾನಿಯಾಗಿದೆ. ಕೇಂದ್ರ ಸಚಿವರನ್ನು ಭೇಟಿ ಮಾಡಿ ರಾಜ್ಯದ ಸ್ಥಿತಿ ವಿವರಿಸಲು ಸಮಯ ಕೇಳುತ್ತಿದ್ದೇವೆ. ಈವರೆಗೆ ಸಮಯ ನೀಡಿಲ್ಲ. ಈ ಬಗ್ಗೆ ಸಭೆಯಲ್ಲಿ ಕಳವಳ ವ್ಯಕ್ತವಾಯಿತು ಎಂದರು.

ADVERTISEMENT

195 ತಾಲ್ಲೂಕುಗಳಲ್ಲದೇ ಹೆಚ್ಚುವರಿಯಾಗಿ 21 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲು ಸಂಪುಟ ಒಪ್ಪಿಗೆ ನೀಡಿತು ಎಂದರು.

ರಸಗೊಬ್ಬರ ಬಫರ್‌ ಸ್ಟಾಕ್‌ ದಾಸ್ತಾನು ಮಾಡಲು ಕರ್ನಾಟಕ ಸಹಕಾರ ಮಾರಾಟ ಮಂಡಳಿಗೆ ₹200 ಕೋಟಿ ಮತ್ತು ಕರ್ನಾಟಕ  ರಾಜ್ಯ ಬೀಜ ನಿಗಮ ನಿಯಮಿತಕ್ಕೆ ₹200 ಕೋಟಿ ಸಾಲದ ಮೊತ್ತಕ್ಕೆ ಗ್ಯಾರಂಟಿ ನೀಡಲು ಸಂಪುಟ ಒಪ್ಪಿಗೆ ನೀಡಿತು.

ಸಚಿವರ ವೇತನ ಹೆಚ್ಚಿಸುವ ಸಂಬಂಧ ಘಟನೋತ್ತರ ಮಂಜೂರಾತಿ ನೀಡಲಾಯಿತು. ಕಳೆದ ಅಧಿವೇಶನದಲ್ಲಿ ವೇತನ ಹೆಚ್ಚಳ ಸಂಬಂಧ ಮಸೂದೆಗೆ ಅಂಗೀಕಾರ ನೀಡಲಾಗಿತ್ತು ಎಂದು ಪಾಟೀಲ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.