ADVERTISEMENT

ಕೋವಿಡ್‌ನಿಂದ ತಂದೆತಾಯಿ ಕಳೆದುಕೊಂಡ ಮಕ್ಕಳ ಪೋಷಣೆಗೆ ವ್ಯವಸ್ಥೆ -ಶಶಿಕಲಾ ಜೊಲ್ಲೆ

​ಪ್ರಜಾವಾಣಿ ವಾರ್ತೆ
Published 18 ಮೇ 2021, 9:56 IST
Last Updated 18 ಮೇ 2021, 9:56 IST
ಶಶಿಕಲಾ ಜೊಲ್ಲೆ
ಶಶಿಕಲಾ ಜೊಲ್ಲೆ   

ಬೆಂಗಳೂರು: ಕೋವಿಡ್‌ ಎರಡನೇ ಅಲೆಯ ಸಂದರ್ಭದಲ್ಲಿ ತಂದೆ–ತಾಯಿ ಕಳೆದುಕೊಂಡು ಅನಾಥರಾದ ಮಕ್ಕಳ ಪೋಷಣೆಗೆ ರಾಜ್ಯ ಸರ್ಕಾರ ಸಿದ್ಧವಿದ್ದು, ಅಂತಹ ಮಕ್ಕಳಿಗೆ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ಅನಾಥರಾಗಿರುವ ಮಕ್ಕಳ ಸಂಖ್ಯೆಯ ಬಗ್ಗೆ ಮಾಹಿತಿ ಪಡೆಯಲು ಸರ್ಕಾರ ಸೇವಾ ಸಂಸ್ಥೆಗಳ ನೆರವು ಕೇಳಿದೆ. ಸೇವಾ ಸಂಸ್ಥೆಗಳು ಮಕ್ಕಳ ಬಗ್ಗೆ ಮಾಹಿತಿ ನೀಡಬೇಕೇ ಹೊರತು, ಸಾಕುವ ಜವಾಬ್ದಾರಿಯನ್ನು ಹೊರುವಂತಿಲ್ಲ. ಸರ್ಕಾರವೇ ಆ ವ್ಯವಸ್ಥೆ ಮಾಡುತ್ತದೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಸಂಬಂಧ ಮಾಹಿತಿ ಕೇಳಲು ದಿನಕ್ಕೆ ಕನಿಷ್ಠ 60 ಕರೆಗಳು ಬರುತ್ತಿವೆ. ಆದರೆ, ಮಕ್ಕಳನ್ನು ಸರ್ಕಾರದ ಸುಪರ್ದಿ ನೀಡಲು ಯಾರು ಮುಂದೆ ಬಂದಿಲ್ಲ. ಮಂಡ್ಯ ಮತ್ತು ಚಾಮರಾಜನಗರದ ಎರಡು ಪ್ರಕರಣಗಳಲ್ಲಿ ಮುಂದೆ ಬಂದಿದ್ದಾರೆ ಎಂದು ಅವರು ಹೇಳಿದರು.

ADVERTISEMENT

ಅನಾಥ ಮಕ್ಕಳನ್ನು ಗುರುತಿಸಿ ಪುನರ್ವಸತಿಗಾಗಿ ಸರ್ಕಾರ 1098 ಎಂಬ ಸಹಾಯವಾಣಿ ಆರಂಭಿಸಿದೆ. ಐಎಎಸ್‌ ಅಧಿಕಾರಿ ಮೋಹನ್ ರಾಜ್‌ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಇಂಥ ಮಕ್ಕಳಿಗೆ ಕೌಟುಂಬಿಕ ವಾತಾವರಣ ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯ ಎಂದು ಜೊಲ್ಲೆ ತಿಳಿಸಿದರು.

ಅಲ್ಲದೆ, ಅಪ್ಪ– ಅಮ್ಮ ಇಬ್ಬರೂ ಕೋವಿಡ್‌ನಿಂದ ಆಸ್ಪತ್ರೆಗೆ ದಾಖಲಾಗಿದ್ದರೆ ಅವರು ಗುಣಮುಖರಾಗಿ ಬರುವವರೆಗೆ ಅವರ ಮಕ್ಕಳ ಪಾಲನೆ ಪೋಷಣೆಗೆ ಸರ್ಕಾರ ವಸತಿ ಶಾಲೆಗಳಲ್ಲಿ ವ್ಯವಸ್ಥೆ ಮಾಡಲಿದೆ. 18 ವರ್ಷದೊಳಗಿನವರಿಗೆ ಈ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದೂ ತಿಳಿಸಿದರು.

ಯಾರಿಗೆಲ್ಲ ಸೌಲಭ್ಯ:

ಕೋವಿಡ್‌ನಿಂದ ತಂದೆ ತಾಯಿ ಮೃತಪಟ್ಟಿದ್ದರೆ, ತಂದೆ ತಾಯಿ ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದರೆ, ಕೋವಿಡ್‌ನಿಂದ ಒಬ್ಬರು ಮೃತಪಟ್ಟು, ಇನ್ನೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದರೆ. ಒಬ್ಬರು ಮೃತರಾಗಿ ಇನ್ನೊಬ್ಬರು ಬೇರೆ ಪ್ರದೇಶದಲ್ಲಿ ವಾಸವಾಗಿದ್ದರೆ ಅಂತಹವರ ಮಕ್ಕಳಿಗೆ ಅನಾಥ ಭಾವನೆ ಬರಬಾರದು ಎಂಬ ಕಾರಣಕ್ಕೆ ಸರ್ಕಾರ ನೆರವಿಗೆ ಬರಲಿದೆ ಎಂದು ಜೊಲ್ಲೆ ತಿಳಿಸಿದರು.

ಮಕ್ಕಳ ಆರೈಕೆಗೆ ವಿಶೇಷ ಕೇಂದ್ರ:

ಆರು ವರ್ಷದೊಳಗಿನ ಮಕ್ಕಳ ಆರೈಕೆಗೆ ವಿಶೇಷ ಕ್ವಾರಂಟೈನ್‌ ಸೌಲಭ್ಯ ಮತ್ತು ದತ್ತು ಸಂಸ್ಥೆಗಳನ್ನು ಗೊತ್ತುಪಡಿಸಲಾಗುವುದು. 7 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಆರೈಕೆಗೆ ವಿಶೇಷ ಕೇಂದ್ರ, 18 ವರ್ಷ ವರ್ಷದವರೆಗಿನ ಮಕ್ಕಳಿಗೆ ವಸತಿ ಶಾಲೆಯನ್ನು ಮೀಸಲಿಡಲು ತೀರ್ಮಾನಿಸಲಾಗಿದೆ.
ಯಾವುದೇ ಲಕ್ಷಣಗಳಿಲ್ಲದ ಕೋವಿಡ್‌ ಪೀಡಿತ ಮಕ್ಕಳಿಗೆ ವಿಶೇಷ ಪಿಡಿಯಾಟ್ರಿಕ್‌ ಕೋವಿಡ್‌ ಕೇರ್‌ ಸೆಂಟರ್‌(ಸಿಸಿಸಿ)ಗಳಲ್ಲಿ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ 30 ಜಿಲ್ಲೆಗಳಲ್ಲಿ ಪ್ರತ್ಯೇಕ ಕೋವಿಡ್ ಕೇರ್‌ ಸೆಂಟರ್‌ ಸ್ಥಾಪಿಸಲಾಗುವುದು.

ಲಕ್ಷಣ ಇರುವ ಕೋವಿಡ್‌ ಸೋಂಕಿತ ಮಕ್ಕಳಿಗೆ ತಾಲ್ಲೂಕು ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ಪಿಡಿಯಾಟ್ರಿಕ್‌ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ವಿಶೇಷ ಆರೈಕೆ ಮತ್ತು ಇಲಾಖೆಯಿಂದ ವಿಶೇಷ ಆರೈಕೆದಾರರ ನೇಮಕ ಮಾಡಲಾಗುವುದು ಎಂದು ಜೊಲ್ಲೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.