ADVERTISEMENT

6ರಿಂದ 8ನೇ ತರಗತಿ: ಪದವಿ ಇದ್ದರಷ್ಟೇ ಶಿಕ್ಷಕ ಹುದ್ದೆ

15 ಸಾವಿರ ಹುದ್ದೆಗಳಿಗೆ ನೇಮಕ

​ಪ್ರಜಾವಾಣಿ ವಾರ್ತೆ
Published 21 ಜನವರಿ 2022, 20:11 IST
Last Updated 21 ಜನವರಿ 2022, 20:11 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 6ರಿಂದ 8ನೇ ತರಗತಿಯವರೆಗೆ ಬೋಧನೆ ಮಾಡಲು 15 ಸಾವಿರ ಪದವೀಧರ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಲಾಗಿದೆ.

ಶೈಕ್ಷಣಿಕ ಅರ್ಹತೆ, ವಯೋಮಾನದ ವಿವರಗಳನ್ನು ಇದು ಒಳಗೊಂಡಿದೆ. ಈ ಬಾರಿ ಶಿಕ್ಷಕರ ನೇಮಕಾತಿಗೆ ಪದವಿಯನ್ನು ಕಡ್ಡಾಯಗೊಳಿಸಲಾಗಿದೆ. ಜತೆಗೆ, ಎಂಜಿನಿಯರಿಂಗ್‌ ಪದವೀಧರರಿಗೂ ಅವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿಗಳಿಗೆ ಹಲವು ಆಯ್ಕೆಗಳನ್ನು ನೀಡಲಾಗಿದೆ.

ಅಧಿಕೃತ ಗೆಜೆಟ್‌ನಲ್ಲಿ ಪ್ರಕಟವಾದ ಬಳಿಕ ಈ ನಿಯಮಗಳು ಜಾರಿಗೆ ಬರಲಿವೆ. ಈಗಾಗಲೇ ನೌಕರಿಯಲ್ಲಿರುವ ಅಭ್ಯರ್ಥಿಗಳಿಗೆ ವಯೋಮಿತಿ ಅನ್ವಯಿಸುವುದಿಲ್ಲ. ಉಳಿದ ಅಭ್ಯರ್ಥಿಗಳಿಗೆ ಈಗಾಗಲೇ ಜಾರಿಯಲ್ಲಿರುವ ನಿಯಮಗಳು ಅನ್ವಯಿಸಲಿವೆ.

ADVERTISEMENT

ಅಧಿಸೂಚನೆಗೆ ಸಂಬಂಧಿಸಿದ ಆಕ್ಷೇಪಗಳು ಮತ್ತು ಸಲಹೆಗಳನ್ನು ಪ್ರಧಾನ ಕಾರ್ಯದರ್ಶಿ, ಶಿಕ್ಷಣ ಇಲಾಖೆ (ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ), ಬಹುಮಹಡಿ ಕಟ್ಟಡ, ಡಾ.ಬಿ.ಆರ್‌.ಅಂಬೇಡ್ಕರ್‌ ಬೀದಿ, ಬೆಂಗಳೂರು–560001
ಇವರಿಗೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

ಅಭ್ಯರ್ಥಿಗಳಿಗೆ ಕನಿಷ್ಠ ಅರ್ಹತೆ:

* ಅಭ್ಯರ್ಥಿಗಳು ಪದವಿಯಲ್ಲಿ ಕನಿಷ್ಠ ಶೇ 50ರಷ್ಟು ಅಂಕಗಳನ್ನು ಪಡೆದಿರಬೇಕು ಮತ್ತು ಎರಡು ವರ್ಷದ ಡಿ.ಇಡಿ. ಮಾಡಿರಬೇಕು ಅಥವಾ ಪದವಿಯಲ್ಲಿ ಕನಿಷ್ಠ ಶೇ 50ರಷ್ಟು ಅಂಕಗಳನ್ನು ಪಡೆದಿರಬೇಕು ಮತ್ತು ಬಿ.ಇಡಿ. ಪಡೆದಿರಬೇಕು.

* ಪಿಯುಸಿಯಲ್ಲಿ ಕನಿಷ್ಠ 50ರಷ್ಟು ಅಂಕಗಳೊಂದಿಗೆ(ಮೀಸಲಾತಿಗೆ ಅರ್ಹರಾಗಿರುವವರಿಗೆ ಶೇ 45)ನಾಲ್ಕು ವರ್ಷದ ಬಿ.ಇಡಿ. ಮತ್ತು ಕರ್ನಾಟಕ ಸರ್ಕಾರ ಅಥವಾ ಕೇಂದ್ರ ಸರ್ಕಾರದ ನಡೆಸುವ ಶಿಕ್ಷಕರ ಅರ್ಹತಾ ಪರೀ‌ಕ್ಷೆಯಲ್ಲಿ (ಟಿಇಟಿ) ಉತ್ತೀರ್ಣರಾಗಿರಬೇಕು.

* ಭಾಷಾ ವಿಷಯದ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿಯಲ್ಲಿ ಸಂಬಂಧಪಟ್ಟ ಭಾಷೆಯನ್ನು ಅಧ್ಯಯನ ಮಾಡಿರಬೇಕು.

* ಸಂಬಂಧಪಟ್ಟ ಭಾಷಾ ವಿಷಯದಲ್ಲಿ ಮತ್ತು ಇತರ ವಿಷಯದಲ್ಲಿ ಶೇಕಡ 50ರಷ್ಟು ಅಂಕಗಳನ್ನು ಪಡೆದಿರಬೇಕು.

* ಪ್ರಾಥಮಿಕ ಶಿಕ್ಷಕರ (ಪಿಜಿಟಿ–ಗಣಿತ ಮತ್ತು ವಿಜ್ಞಾನ) ಹುದ್ದೆಗಳಿಗೆ ಅರ್ಹತೆಗಳು ಪದವಿಯಲ್ಲಿ ಕಡ್ಡಾಯವಾಗಿ ಗಣಿತ
ಮತ್ತು ಭೌತ ವಿಜ್ಞಾನ ಅಧ್ಯಯನ ಮಾಡಿರಬೇಕು. ಜತೆಗೆ,
ರಸಾಯನ ವಿಜ್ಞಾನ ಅಥವಾ ಕಂಪ್ಯೂಟರ್‌ ಸೈನ್ಸ್‌ ಅಥವಾ ಎಲೆಕ್ಟ್ರಾನಿಕ್ಸ್‌ ಅಥವಾ ಸಂಖ್ಯಾಶಾಸ್ತ್ರ ಅಥವಾ ಭೂವಿಜ್ಞಾನ ಅಥವಾ ಜೈವಿಕ ತಂತ್ರಜ್ಞಾನ ಅಥವಾ ಭೂಗೋಳ ವಿಷಯ ಅಧ್ಯಯನ ಮಾಡಿರಬೇಕು. ಜತೆಗೆ, ಮೊದಲ ಮೂರು ಅಥವಾ ನಾಲ್ಕು ಸೆಮಿಸ್ಟರ್‌ಗಳಲ್ಲಿ ಹಾಗೂ ಉಳಿದ ಸೆಮಿಸ್ಟರ್‌ಗಳಲ್ಲಿ ಅಪ್ಲೈಡ್‌ ಗಣಿತ ಅಧ್ಯಯನ ಮಾಡಿರುವ ಎಂಜಿನಿಯರಿಂಗ್‌ ಪದವೀಧರರು ಅರ್ಹರು.

* ಪದವೀಧರ ಪ್ರಾಥಮಿಕ ಶಿಕ್ಷಕರ (ಜೀವ ವಿಜ್ಞಾನ) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು, ಕಡ್ಡಾಯವಾಗಿ ಪದವಿಯಲ್ಲಿ ರಸಾಯನ ವಿಜ್ಞಾನ ಅಧ್ಯಯನ ಮಾಡಿರಬೇಕು. ಜತೆಗೆ, ಸಸ್ಯ ವಿಜ್ಞಾನ ಅಥವಾ ಪ್ರಾಣಿ ವಿಜ್ಞಾನ ಅಥವಾ ರೇಷ್ಮೆ ಅಥವಾ ಪರಿಸರ ವಿಜ್ಞಾನ ಅಥವಾ ಗಣಿತ ವಿಷಯವನ್ನು ಪದವಿಯಲ್ಲಿ ಮೂರು ವರ್ಷಗಳ ಕಾಲ ಅಧ್ಯಯನ
ಮಾಡಿರಬೇಕು.

* ಪದವೀಧರ ಪ್ರಾಥಮಿಕ ಶಿಕ್ಷಕರ (ಸಮಾಜ ವಿಜ್ಞಾನ) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿಯಲ್ಲಿ ಮೂರು ವರ್ಷಗಳ ಕಾಲ ಇತಿಹಾಸ ಅಥವಾ ಅರ್ಥಶಾಸ್ತ್ರ ಅಥವಾ ರಾಜ್ಯಶಾಸ್ತ್ರ ಅಥವಾ ಭೂಗೋಳ ವಿಷಯಗಳ ಪೈಕಿ ಎರಡು ವಿಷಯಗಳನ್ನು ಐಚ್ಛಿಕವಾಗಿ ಅಧ್ಯಯನ ಮಾಡಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.