ADVERTISEMENT

ಪಿಸ್ತೂಲ್ ಪತ್ತೆಗೆ ವಿದೇಶಿ ಮುಳುಗು ತಜ್ಞರು!

ವಿಚಾರವಾದಿಗಳ ಹತ್ಯೆ ಪ್ರಕರಣದ ಪತ್ತೆಗೆ ಕ್ರಮ * ₹50 ಲಕ್ಷ ಅಂದಾಜು ವೆಚ್ಚ

ಎಂ.ಸಿ.ಮಂಜುನಾಥ
Published 9 ಮಾರ್ಚ್ 2019, 19:15 IST
Last Updated 9 ಮಾರ್ಚ್ 2019, 19:15 IST
   

ಬೆಂಗಳೂರು: ಕರ್ನಾಟಕ ಹಾಗೂ ಮಹಾರಾಷ್ಟ್ರ ವಿಚಾರವಾದಿಗಳ ಹತ್ಯೆ ಪ್ರಕರಣಗಳಲ್ಲಿ ಮಹತ್ವದ ಸಾಕ್ಷ್ಯಗಳಾಗಿರುವ ಪಿಸ್ತೂಲ್‌ಗಳ ಪತ್ತೆಗೆ ಎಸ್‌ಐಟಿ ಪೊಲೀಸರು ವಿದೇಶಿ ಮುಳುಗು ತಜ್ಞರ ಮೊರೆ ಹೋಗಿದ್ದಾರೆ.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಎಸ್‌ಐಟಿ ವಶದಲ್ಲಿರುವ ಮಹಾರಾಷ್ಟ್ರದ ಶರದ್ ಕಳಾಸ್ಕರ್, ‘2018ರ ಜೂನ್ 23ರಂದು ನಾನು ಹಾಗೂ ಹಿಂದೂ ಗೋವಂಶ್‌ ರಕ್ಷಾ ಸಮಿತಿಯ ವೈಭವ್‌ ರಾವತ್‌ಅವರು ಮುಂಬೈ–ನಾಸಿಕ್ ಹೆದ್ದಾರಿಗೆ ತೆರಳಿ ಉಲ್ಲಾಸ್ ನದಿಗೆ ಪಿಸ್ತೂಲ್‌ಗಳನ್ನು ಎಸೆದು ಬಂದಿದ್ದೆವು.ನನ್ನನ್ನು ಕರೆದೊಯ್ದರೆ ಆ ಜಾಗ ತೋರಿಸುತ್ತೇನೆ’ ಎಂದು ಹೇಳಿಕೆ ನೀಡಿದ್ದ.

ಇದೀಗ ಎಸ್‌ಐಟಿ, ನದಿಯಲ್ಲಿ ಶೋಧನಡೆಸಲು ಅನುಮತಿ ಕೋರಿ ಮುಂಬೈನ ‘ಮೆರಿಟೈಮ್ ಸೆಕ್ಯುರಿಟಿ ಬೋರ್ಡ್’ಗೆ (ಎಂಎಸ್‌ಬಿ) ಪತ್ರ ಬರೆದಿದೆ. ಅಲ್ಲದೇ, ಮುಳುಗು ತಜ್ಞರ ಜತೆಗೂ ಮಾತುಕತೆ ನಡೆಸಿದೆ. ‘ನೀವು ನದಿಯಲ್ಲಿ ನಿರ್ದಿಷ್ಟ ಜಾಗ ತೋರಿಸಿದರೆ ಸಾಕು. ಅಲ್ಲಿರುವ ಕಬ್ಬಿಣ ಹಾಗೂ ಲೋಹದ ಎಲ್ಲ ಚೂರುಗಳನ್ನೂ ತೆಗೆದುಕೊಡುವ ಜವಾಬ್ದಾರಿ ನಮ್ಮದು’ ಎಂದು ಅವರು ಭರವಸೆ ಕೊಟ್ಟಿರುವುದಾಗಿ ಮೂಲಗಳು ತಿಳಿಸಿವೆ.

ADVERTISEMENT

ಸಣ್ಣ ಚೂರು ಸಿಕ್ಕರೂ ಸಾಕು: ‘ಆರೋಪಿಗಳು ಪಿಸ್ತೂಲ್‌ಗಳ ಸ್ಲೈಡ್ ಹಾಗೂ ಬ್ಯಾರಲ್‌ಗಳನ್ನು ಬೇರ್ಪಡಿಸಿ ಸೇತುವೆ ಮೇಲಿಂದ ಬೇರೆ ಬೇರೆ ದಿಕ್ಕುಗಳಿಗೆ ಎಸೆದಿದ್ದಾರೆ. ಈಗಾಗಲೇ ಒಂದು ಮಳೆಗಾಲವೂ ಕಳೆದು ಹೋಗಿದೆ. ಹೀಗಾಗಿ, ಬಿಡಿಭಾಗಗಳು ಸಿಗುವ ವಿಶ್ವಾಸ ಕಡಿಮೆ. ಆದರೆ, ಫೈರಿಂಗ್ ಪಿನ್, ನಳಿಕೆ ಸೇರಿದಂತೆ ಸಣ್ಣ ಚೂರು ಸಿಕ್ಕರೂ ನಾಲ್ಕೂ ಕೊಲೆ ಪ್ರಕರಣಗಳಿಗೆ ಸಂಬಂಧಿಸಿ ಅವು ಪ್ರಮುಖ ಸಾಕ್ಷ್ಯಗಳಾಗುವ ಸಾಧ್ಯತೆಯಿದೆ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನದಿಯಲ್ಲಿ ಶೋಧ ನಡೆಸಲು ₹ 40 ಲಕ್ಷದಿಂದ ₹ 50 ಲಕ್ಷ ಖರ್ಚಾಗಬಹುದು ಎಂದು ಮುಳುಗು ತಜ್ಞರು ಅಂದಾಜಿನ ಲೆಕ್ಕಚೀಟಿ ಕೊಟ್ಟಿದ್ದಾರೆ. ಹಣ ಬಿಡುಗಡೆಗೆ ಗೃಹಸಚಿವ ಎಂ.ಬಿ.ಪಾಟೀಲ ಸಮ್ಮತಿ ಸೂಚಿಸಿದ್ದಾರೆ. ಎಂಎಸ್‌ಬಿ ಯಿಂದ ಅನುಮತಿ ಸಿಕ್ಕ ಕೂಡಲೇ, ಸದ್ಯ ಸಿಬಿಐ ಕಸ್ಟಡಿಯಲ್ಲಿರುವ ವೈಭವ್ ರಾವತ್‌ನನ್ನು ಗೌರಿ ಹತ್ಯೆ ಪ್ರಕರಣದಲ್ಲಿ ಬಂಧಿಸುತ್ತೇವೆ. ನಂತರ ಇಬ್ಬರನ್ನೂ ನದಿ ಬಳಿ ಕರೆದೊಯ್ದು ಕಾರ್ಯಾಚರಣೆ ನಡೆಸುತ್ತೇವೆ’ ಎಂದು ಮಾಹಿತಿ ನೀಡಿದರು.

ಗುಂಡಿನ ಚೂರುಗಳಿವೆ: ‘ಜಾಲದ ಸದಸ್ಯರು ಬೆಳಗಾವಿಯ ಜಾಂಬೋಟಿ ಅರಣ್ಯ ಪ್ರದೇಶದಲ್ಲಿ ಆರು ಪಿಸ್ತೂಲ್‌ಗಳಿಂದ ಗುಂಡು ಹಾರಿಸಿ ಅಭ್ಯಾಸ ನಡೆಸಿದ್ದರು. ಅವುಗಳಲ್ಲಿ ಗೌರಿ ಹತ್ಯೆಗೆ ಬಳಸಿದ್ದ ಪಿಸ್ತೂಲ್ ಕೂಡ ಇತ್ತು. ಅಲ್ಲಿನ ಮರಗಳಿಗೆ ಹೊಕ್ಕಿದ್ದ ಗುಂಡಿನ ಚೂರುಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದೇವೆ. ಒಂದು ವೇಳೆ ಉಲ್ಲಾಸ್ ನದಿಯಲ್ಲಿ ಬಿಡಿಭಾಗ ಸಿಕ್ಕು, ಆ ಗುಂಡಿನ ಚೂರುಗಳಿಗೆ ಹೋಲಿಕೆಯಾದರೆ ತನಿಖೆಯಲ್ಲಿ ದೊಡ್ಡ ಯಶಸ್ಸು ಸಿಕ್ಕಂತಾಗುತ್ತದೆ’ ಎಂದರು.

ಉತ್ತರ ಪತ್ರಿಕೆಯೂ ಸಾಕ್ಷ್ಯ

ಎಸ್‌ಐಟಿ ಅಮೋಲ್ ಕಾಳೆಯನ್ನು ಬಂಧಿಸಿದ್ದಾಗ, ಸಂಚಿನ ವಿವರಗಳಿದ್ದ ಡೈರಿ ಹಾಗೂ ಕೆಲ ವಿಚಾರವಾದಿಗಳ ಹೆಸರುಗಳನ್ನು ಬರೆಯಲಾಗಿದ್ದ ಚೀಟಿ (ಹಿಟ್‌ಲಿಸ್ಟ್) ಆತನ ಬಳಿ ಸಿಕ್ಕಿತ್ತು. ಅದರಲ್ಲಿದ್ದ ಬರಹ ಕಾಳೆಯದ್ದೇ ಎಂಬುದನ್ನು ಉತ್ತರ ಪತ್ರಿಕೆಗಳು ಖಚಿತಪಡಿಸಿವೆ!

‘ಕೈಬರಹ ಪರಿಶೀಲಿಸಲು ಎರಡು ರೀತಿಯ ಪರೀಕ್ಷೆಗಳನ್ನು ನಡೆಸಿದ್ದೆವು. ಕಾಳೆ ಬಳಿ ಒಂದು ಪತ್ರ ಬರೆಸಿ, ಅದನ್ನು ಹಾಗೂ ಹಿಟ್‌ಲಿಸ್ಟ್‌ ಅನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದೆವು. ಅವೆರೆಡರ ಕೈಬರಹಕ್ಕೂ ಹೋಲಿಕೆ ಕಂಡು ಬರಲಿಲ್ಲ. ಕೊನೆಗೆ, ಕಾಳೆ ಓದಿದ್ದ ಎಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿಯನ್ನು ಸಂಪರ್ಕಿಸಿ, ಆತನ ಉತ್ತರ ಪತ್ರಿಕೆಯೊಂದನ್ನು ತರಿಸಿಕೊಂಡೆವು. ಅದನ್ನು ಹಾಗೂ ಹಿಟ್‌ಲಿಸ್ಟ್‌ ಅನ್ನು ಪುನಃ ಎಫ್‌ಎಸ್‌ಎಲ್‌ಗೆ ಕಳುಹಿಸಿದಾಗ ಇವೆರಡೂ ಒಬ್ಬರದ್ದೇ ಕೈಬರಹ ಎಂದು ವರದಿ ಬಂತು. ತನಿಖೆಯ ದಿಕ್ಕು ತಪ್ಪಿಸಲು ಕಾಳೆ ಕಸ್ಟಡಿಯಲ್ಲಿ ಬರವಣಿಗೆ ಶೈಲಿ ಬದಲಿಸಿದ್ದ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.