ADVERTISEMENT

ಗ್ರಾಫೈಟ್‌ ಇಂಡಿಯಾ ಮುಚ್ಚಲು ಆದೇಶ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2019, 20:33 IST
Last Updated 3 ಏಪ್ರಿಲ್ 2019, 20:33 IST

ಬೆಂಗಳೂರು: ವೈಟ್‌ಫೀಲ್ಡ್‌ ಪ್ರದೇಶದಲ್ಲಿರುವಗ್ರಾಫೈಟ್‌ ಇಂಡಿಯಾ ಲಿಮಿಟೆಡ್‌ (ಜಿಐಎಲ್‌) ಕಾರ್ಖಾನೆಯನ್ನು ಮುಚ್ಚುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಆದೇಶ ಮಾಡಿದೆ.

ಕಾರ್ಖಾನೆಯ ಮಾಲಿನ್ಯದ ವಿರುದ್ಧ ಹೋರಾಟ ನಡೆಸಿದ್ದ ಸ್ಥಳೀಯರು ಈ ಕ್ರಮದಿಂದ ನಿಟ್ಟುಸಿರು ಬಿಡುವಂತಾಗಿದೆ.

ವೈಟ್‌ಫೀಲ್ಡ್‌ ರೈಸಿಂಗ್‌ ಸಂಘಟನೆಯೂ ಸೇರಿದಂತೆ ಸ್ಥಳೀಯ ನಿವಾಸಿಗಳು ಹಾಗೂ ಪರಿಸರ ಹೋರಾಟಗಾರರು ಎರಡು ದಶಕಗಳಿಂದ ಈ ಕಾರ್ಖಾನೆ ವಿರುದ್ಧ ಹೊರಾಟ ನಡೆಸಿದ್ದರು.

ADVERTISEMENT

‘ಕಾರ್ಖಾನೆ ಮುಚ್ಚಿರುವುದು ಸಂತಸ ತಂದಿದೆ’ ಎಂದು ವೈಟ್‌ಫೀಲ್ಡ್‌ ರೈಸಿಂಗ್‌ ಸಂಘಟನೆಯ ಸದಸ್ಯರಾದ ಜಿಬಿ ಜಮಾಲ್‌ ತಿಳಿಸಿದರು.

1981ರ ವಾಯು (ಮಾಲಿನ್ಯ ತಡೆ ಮತ್ತು ನಿಯಂತ್ರಣ) ಕಾಯ್ದೆಯ ಸೆಕ್ಷನ್‌ 31 ಹಾಗೂ 1983ರ ಕರ್ನಾಟಕ ವಾಯು (ಮಾಲಿನ್ಯ ತಡೆ ಮತ್ತು ನಿಯಂತ್ರಣ) ನಿಯಮಗಳು 20(ಎ) ಅಡಿ ಕೆಎಸ್‌ಪಿಸಿಬಿ ಈಕಾರ್ಖಾನೆಗೆ ನೋಟಿಸ್‌ ಜಾರಿ ಮಾಡಿತ್ತು.

‘ಸುಪ್ರೀಂ ಕೋರ್ಟ್‌, ಹಸಿರು ನ್ಯಾಯಮಂಡಳಿ ಸೇರಿದಂತೆ ಯಾವುದೇ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳಿಗೂ ಈ ಆದೇಶಕ್ಕೂ ಸಂಬಂಧವಿಲ್ಲ’ ಎಂದು ಮಂಡಳಿಯುಆದೇಶದಲ್ಲಿ ಸ್ಪಷ್ಟಪಡಿಸಿದೆ.

‘ಜಲ ಮಾಲಿನ್ಯ ಹಾಗೂ ವಾಯು ಮಾಲಿನ್ಯಕ್ಕೆ ಆಸ್ಪದ ಕಲ್ಪಿಸುವ ಯಾವುದೇ ಕೈಗಾರಿಕಾ ಕಾರ್ಯಾಚರಣೆಗೆ ಅವಕಾಶ ಇಲ್ಲ. 2020ರ ಜೂನ್‌ 30ರವರೆಗೆ ಕೈಗಾರಿಕೆಯನ್ನು ಮುಂದುವರಿಸಲು ನೀಡಿದ್ದ ಅನುಮತಿಯನ್ನು ಹಿಂಪಡೆಯುವಂತೆ ರಾಷ್ಟ್ರಿಯ ಹಸಿರು ನ್ಯಾಯಮಂಡಳಿಯು ಆದೇಶ ಮಾಡಿತ್ತು. ಅದು ತಕ್ಷಣದಿಂದಲೇ ಜಾರಿಗೆ ಬರಲಿದೆ. ಈ ಕಾರ್ಖಾನೆಯನ್ನು ಮುಚ್ಚುವಂತೆ ಮಂಡಳಿಯು 2012–13ರಲ್ಲಿ ಮಾಡಿದ್ದ ಆದೇಶವನ್ನು ಎನ್‌ಜಿಟಿ ಇತ್ತೀಚೆಗೆ ಎತ್ತಿ ಹಿಡಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.