ADVERTISEMENT

ಗ್ರಾ.ಪಂ. ಚುನಾವಣೆಗೆ ಕಾಂಗ್ರೆಸ್‌ ಪಟ್ಟು

ರಾಜ್ಯ ಚುನಾವಣಾ ಆಯೋಗಕ್ಕೆಕಾಂಗ್ರೆಸ್‌ ಮನವಿ

​ಪ್ರಜಾವಾಣಿ ವಾರ್ತೆ
Published 22 ಮೇ 2020, 21:42 IST
Last Updated 22 ಮೇ 2020, 21:42 IST
ರಾಜ್ಯ ಚುನಾವಣಾ ಆಯುಕ್ತ ಬಿ.ಬಸವರಾಜು ಅವರಿಗೆ ಕಾಂಗ್ರೆಸ್‌ ನಾಯಕರು ಶುಕ್ರವಾರ ಮನವಿ ಸಲ್ಲಿಸಿದರು
ರಾಜ್ಯ ಚುನಾವಣಾ ಆಯುಕ್ತ ಬಿ.ಬಸವರಾಜು ಅವರಿಗೆ ಕಾಂಗ್ರೆಸ್‌ ನಾಯಕರು ಶುಕ್ರವಾರ ಮನವಿ ಸಲ್ಲಿಸಿದರು   

ಬೆಂಗಳೂರು: ‘ಗ್ರಾಮ ಪಂಚಾಯಿತಿಗಳಿಗೆ ಸಕಾಲಕ್ಕೆ ಚುನಾವಣೆ ನಡೆಸಲೇಬೇಕು. ಸಂವಿಧಾನ ಆಶಯಗಳಿಗೆ ವಿರುದ್ಧವಾಗಿ ಆಡಳಿತ ಸಮಿತಿ ರಚಿಸಲು ರಾಜ್ಯ ಚುನಾವಣಾ ಆಯೋಗ ಅವಕಾಶ ಕೊಡಬಾರದು’ ಎಂದು ಕಾಂಗ್ರೆಸ್ ಒತ್ತಾಯಿಸಿದೆ.

ಶುಕ್ರವಾರ ಇಲ್ಲಿ ರಾಜ್ಯ ಚುನಾವಣಾ ಆಯುಕ್ತ ಬಿ.ಬಸವರಾಜು ಅವರನ್ನು ಭೇಟಿ ಮಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್‌.ಆರ್‌.ಪಾಟೀಲ, ಶಾಸಕ ಎಚ್‌.ಕೆ.ಪಾಟೀಲ ಮತ್ತಿತರರು ಮನವಿ ಸಲ್ಲಿಸಿದರು.

‘ಬಹುಪಾಲು ಗ್ರಾಮ ಪಂಚಾಯತಿಗಳ ಅಧಿಕಾರಾವಧಿ ಜೂನ್ ಮತ್ತು ಜುಲೈ ತಿಂಗಳಲ್ಲಿ ಮುಕ್ತಾಯವಾಗುತ್ತದೆ. ಚುನಾವಣಾ ಪ್ರಕ್ರಿಯೆಗಳನ್ನು ಆರಂಭಿಸದೆ ಇರುವುದು ಸಂವಿಧಾನ ವಿರೋಧಿ ನಡೆ. ನಿಗದಿತ ಅವಧಿಯಲ್ಲಿ ಚುನಾವಣೆಗಳನ್ನು ನಡೆಸದಿದ್ದರೆ ವಿಕೇಂದ್ರೀಕೃತ ಸ್ಥಳೀಯ ಸ್ವಯಂ ಆಡಳಿತ ವ್ಯವಸ್ಥೆಯನ್ನು ದಮನ ಮಾಡಿದಂತಾಗುತ್ತದೆ. ಇದರಿಂದ ಸಂವಿಧಾನದ 73 ನೇ ತಿದ್ದುಪಡಿಯ ಧ್ಯೇಯೋದ್ದೇಶಗಳನ್ನು ಉಲ್ಲಂಘಿಸಿದಂತಾಗುತ್ತದೆ’ ಎಂದು ಮನವಿಯಲ್ಲಿ ತಿಳಿಸಲಾಗಿದೆ.‌‌

ADVERTISEMENT

‘ಚುನಾವಣಾ ವೇಳಾಪಟ್ಟಿ ಮತ್ತು ಮೀಸಲಾತಿಯ ಅಧಿಸೂಚನೆಯನ್ನು ಇನ್ನೂ ಏಕೆ ಹೊರಡಿಸಿಲ್ಲ?‘ ಎಂದು ಮನವಿಯಲ್ಲಿ ಪ್ರಶ್ನಿಸಲಾಗಿದ್ದು, ‘ಆಯೋಗವು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಯ ಸೆಕ್ಷನ್ 308 ಎ ಅನ್ನು ಉದ್ದೇಶ ಪೂರ್ವಕವಾಗಿ ಉಲ್ಲಂಘನೆ ಮಾಡಿದೆ ಮತ್ತು ಕಾಯ್ದೆಯ ಕುರಿತು ಸಂಪೂರ್ಣ ನಿರ್ಲಕ್ಷ್ಯ ತೋರಿದೆ’ ಎಂದು ಆರೋಪಿಸಲಾಗಿದೆ.‌

ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ‘ಕೊರೊನಾ ನೆಪ ಒಡ್ಡಿ ಗ್ರಾಮ ಪಂಚಾಯಿತಿಗಳ ಚುನಾವಣೆ ಮುಂದೂಡಲು ಸರ್ಕಾರ ಹುನ್ನಾರ ನಡೆಸಿದೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.