ADVERTISEMENT

ಗ್ರಾಪಂ ಅನುದಾನ: ಕೇಂದ್ರಕ್ಕೆ ಒತ್ತಡ ಹಾಕಲು ವಿಪ ಕಾಂಗ್ರೆಸ್‌ ಸದಸ್ಯರ ಪತ್ರ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 21:00 IST
Last Updated 9 ಜನವರಿ 2026, 21:00 IST
<div class="paragraphs"><p>ಹಣ </p></div>

ಹಣ

   

ಸಾಂದರ್ಭಿಕ ಚಿತ್ರ

ಬೆಂಗಳೂರು: ಬಾಕಿ ಇರುವ 15ನೇ ಹಣಕಾಸು ಆಯೋಗದ ₹2,100 ಕೋಟಿ ಅನುದಾನವನ್ನು ಕರ್ನಾಟಕದ ಗ್ರಾಮ ಪಂಚಾಯಿತಿಗಳಿಗೆ ತುರ್ತಾಗಿ ಬಿಡುಗಡೆ ಮಾಡಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು ಎಂದು ಕೋರಿ ವಿಧಾನಪರಿಷತ್‌ನ ಕಾಂಗ್ರೆಸ್‌ ಸದಸ್ಯರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ADVERTISEMENT

ಗ್ರಾಮೀಣಾಭಿವೃದ್ಧಿಯ ಜೀವನಾಡಿಯಂತಿರುವ ಗ್ರಾಮ ಪಂಚಾಯಿತಿಗಳಿಗೆ 15ನೇ ಹಣಕಾಸು ಆಯೋಗದ ಅನುದಾನ ಬಿಡುಗಡೆಯಾಗದೆ ‘ಗ್ರಾಮ ಸ್ವರಾಜ್ಯ’ದ ಪರಿಕಲ್ಪನೆ ಸೊರಗಿದೆ. ಗ್ರಾಮೀಣ ವ್ಯವಸ್ಥೆಯನ್ನು ದುರ್ಬಲ ಮಾಡುತ್ತಿದೆ ಎಂದು ಸಲೀಂ ಅಹಮದ್‌, ದಿನೇಶ್ ಗೂಳಿಗೌಡ, ಮಂಜುನಾಥ ಭಂಡಾರಿ, ಎಸ್.ರವಿ, ಅನಿಲ್‌ ಕುಮಾರ್‌, ಚನ್ನರಾಜ ಹಟ್ಟಿಹೊಳಿ, ಡಾ.ಡಿ.ತಿಮ್ಮಯ್ಯ, ಶರಣಗೌಡ ಬಯ್ಯಾಪುರ, ಭೀಮರಾವ್‌ ಪಾಟೀಲ, ಸುನೀಲ್‌ ಗೌಡ ಪಾಟೀಲ, ರಾಜೇಂದ್ರ ರಾಜಣ್ಣ ಹೇಳಿದ್ದಾರೆ.

‘ಕೇಂದ್ರ ಸರ್ಕಾರ ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಸೇರಿ ಕೆಲ ರಾಜ್ಯಗಳಿಗೆ ಅನುದಾನ ಬಿಡುಗಡೆ ಮಾಡಿದೆ. ಕರ್ನಾಟಕಕ್ಕೆ ಮಾತ್ರ ಅನುದಾನ ಬಿಡುಗಡೆ ಮಾಡಿಲ್ಲ. ಎಲ್ಲ ಷರತ್ತುಗಳನ್ನು ಪೂರೈಸಿದರೂ ಮೊದಲ ಕಂತಿನ ₹1,092 ಕೋಟಿಯೂ ಬಿಡುಗಡೆಯಾಗಿಲ್ಲ. ಅಂದುಕೊಂಡಂತೆ ಹಣ ನೀಡಿದ್ದರೆ ಪ್ರತಿ ಗ್ರಾಮ ಪಂಚಾಯಿತಿಗೆ ₹30 ಲಕ್ಷದಿಂದ ₹60 ಲಕ್ಷ  ಅನುದಾನ ಸಿಗುತ್ತಿತ್ತು. ಅನುದಾನ ಇಲ್ಲದೆ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ. ಸ್ವಂತ ಆದಾಯ ಮೂಲಗಳಿಲ್ಲದ ಪಂಚಾಯಿತಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಕುಡಿಯುವ ನೀರು ಪೂರೈಕೆಗೂ ಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದಿದ್ದಾರೆ.

‘ತಡೆಹಿಡಿಯಲಾಗಿರುವ ಅನುದಾನವನ್ನು ತುರ್ತಾಗಿ ಬಿಡುಗಡೆ ಮಾಡಲು ಕೇಂದ್ರದ ಮೇಲೆ ಒತ್ತಡ ಹಾಕಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಅವರನ್ನು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.