ADVERTISEMENT

ಚುನಾವಣೆ ಮುಂದೂಡಿಕೆ ಪೂರ್ವಯೋಜಿತ, ಸಂವಿಧಾನ ಬಾಹಿರ

ಗ್ರಾಮ ಪಂಚಾಯತ್‌ ಹಕ್ಕೊತ್ತಾಯ ಆಂದೋಲನ ಸಂಘಟನೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 31 ಮೇ 2020, 11:34 IST
Last Updated 31 ಮೇ 2020, 11:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಮುಂದೂಡಿರುವ ರಾಜ್ಯ ಚುನಾವಣಾ ಆಯೋಗದ ನಿರ್ಧಾರ ಪೂರ್ವಯೋಜಿತ, ಕಾನೂನಿಗೆ ವಿರುದ್ಧ ಹಾಗೂ ಸಂವಿಧಾನಬಾಹಿರ’ ಎಂದು ಗ್ರಾಮ ಪಂಚಾಯತ್‌ ಹಕ್ಕೊತ್ತಾಯ ಆಂದೋಲನ ಸಂಘಟನೆ ದೂರಿದೆ.

‘ಅನಿರೀಕ್ಷಿತ ನೈಸರ್ಗಿಕ ವಿಪತ್ತುಗಳಾದ ಪ್ರವಾಹ, ಭೂಕಂಪ ಇತ್ಯಾದಿ ತುರ್ತು ಪರಿಸ್ಥಿತಿಯನ್ನು ಹೊರತುಪಡಿಸಿ, ಪಂಚಾಯಿತಿಗಳ ಚುನಾವಣೆ ತಡೆ ಹಿಡಿಯಲು ಯಾವುದೇ ರಾಜ್ಯಗಳಿಗೆ ಅನುಮತಿ ನೀಡಲಾಗುವುದಿಲ್ಲ ಎಂದು 1997ರಲ್ಲಿ ಸುಪ್ರೀಂ ಕೋರ್ಟ್‌ ಹೇಳಿದೆ. ಆದರೆ, ಕೋವಿಡ್‌–19 ಸಂದರ್ಭವನ್ನು ಅಸಾಧಾರಣ ಪರಿಸ್ಥಿತಿ ಎಂದು ಪರಿಗಣಿಸಿ ಚುನಾವಣೆ ಮುಂದೂಡಿರುವುದು ಸರಿಯಲ್ಲ’ ಎಂದು ಸಂಘಟನೆಯ ಸಂಚಾಲಕ ನಂದನರೆಡ್ಡಿ ಹಾಗೂ ಸಂಯೋಜಕ ದಾಮೋದರ ಆಚಾರ್ಯ ಹೇಳಿದ್ದಾರೆ.

‘ರಾಜ್ಯದಲ್ಲಿ ಕಂಟೈನ್‌ಮೆಂಟ್ ವಲಯಗಳನ್ನು ಹೊರತುಪಡಿಸಿ, ಎಲ್ಲ ಪ್ರದೇಶಗಳಲ್ಲಿ ದೈನಂದಿನ ಚಟುವಟಿಕೆಗೆ ರಾಜ್ಯ ಸರ್ಕಾರವೇ ಅವಕಾಶ ನೀಡಿದೆ. ಸಾರ್ವಜನಿಕ ವಾಹನಗಳ ಸಂಚಾರಕ್ಕೆ, ಲಕ್ಷಾಂತರ ವಿದ್ಯಾರ್ಥಿಗಳು ಪಾಲ್ಗೊಳ್ಳುವ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ರಾಜ್ಯಸರ್ಕಾರವೇ ಅನುಮತಿ ನೀಡಿದೆ. ಹೀಗಿರುವಾಗ, ಹಳ್ಳಿಯ ಮಟ್ಟದಲ್ಲಿ ಒಬ್ಬ ಅಭ್ಯರ್ಥಿಗೆ ಕೇವಲ 400 ಮತದಾರರು ಇರುವ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಮುಂದೂಡಲು ಮಾತ್ರ ಕೋವಿಡ್‌ 19 ಅಸಾಧಾರಣ ಪರಿಸ್ಥಿತಿ ಎಂದು ಬಿಂಬಿಸಲು ಹೊರಟಿರುವುದನ್ನು ಒಪ್ಪಲಾಗದು’ ಎಂದು ಅವರು ಹೇಳಿದ್ದಾರೆ.

ADVERTISEMENT

‘ಎರಡು ತಿಂಗಳ ಹಿಂದೆಯೇ ಪ್ರಾರಂಭಿಸಬೇಕಾಗಿದ್ದ ಮತದಾರರ ಪಟ್ಟಿ ತಯಾರಿಕೆ ಪ್ರಕ್ರಿಯೆಯನ್ನು ಈವರೆಗೆ ಪ್ರಾರಂಭಿಸದೆ ಸುಮ್ಮನಿದ್ದು, ಈಗ ಮತ ಎಣಿಕೆ ಸಂದರ್ಭದಲ್ಲಿನ ಓಡಾಟ ಮತ್ತು ಜನರು ಒಂದೆಡೆ ಸೇರಬೇಕಾದ ಕಾರಣಕ್ಕಾಗಿ ಚುನಾವಣೆ ಮುಂದೂಡುವ ನಿರ್ಧಾರವನ್ನು ಒಂದು ಸ್ವಾಯತ್ತ ಸಂಸ್ಥೆಯಾಗಿರುವ ಚುನಾವಣಾ ಆಯೋಗ ಕೈಗೊಂಡಿರುವುದು ಪೂರ್ವಯೋಜಿತ ಎನಿಸುತ್ತದೆ’ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.