ADVERTISEMENT

ಗ್ರಾಮಸ್ಥರ ಅಹವಾಲಿಗೆ ಸಾಹಿತಿಗಳ ಸ್ಪಂದನೆ

ಕೊಪ್ಪಳ ತಾಲ್ಲೂಕಿನ ಚಾಮಲಾಪುರದಲ್ಲಿ ಬರಹಗಾರರ ಗ್ರಾಮ ವಾಸ್ತವ್ಯ

ಅನಿಲ್ ಬಾಚನಹಳ್ಳಿ
Published 14 ಜುಲೈ 2019, 20:01 IST
Last Updated 14 ಜುಲೈ 2019, 20:01 IST
ಕೊಪ್ಪಳ ತಾಲ್ಲೂಕಿನ ಚಾಮಲಾಪುರ ಗ್ರಾಮದಲ್ಲಿ ಸಾಹಿತಿಗಳ ತಂಡದಿಂದ ಸಭೆ
ಕೊಪ್ಪಳ ತಾಲ್ಲೂಕಿನ ಚಾಮಲಾಪುರ ಗ್ರಾಮದಲ್ಲಿ ಸಾಹಿತಿಗಳ ತಂಡದಿಂದ ಸಭೆ   

ಕೊಪ್ಪಳ: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಮಾದರಿಯಲ್ಲಿಯೇ ಜಿಲ್ಲೆಯ ಸಾಹಿತಿಗಳು ಗ್ರಾಮ ವಾಸ್ತವ್ಯ ಮಾಡುವ ವಿಶಿಷ್ಟ ಪ್ರಯತ್ನಕ್ಕೆ ಮುಂದಾಗಿದ್ದು, ಇದಕ್ಕೆ ಗ್ರಾಮಸ್ಥರಿಂದಉತ್ತಮ ಸ್ಪಂದನೆ ಸಿಕ್ಕಿದೆ.

ತಾಲ್ಲೂಕಿನ ಚಾಮಲಾಪುರ ಗ್ರಾಮಕ್ಕೆ ಭೇಟಿ ನೀಡಿದ ‘ವೀಕೆಂಡ್‌ ವಿತ್‌ ಸಾಹಿತಿಗಳು’ ಗ್ರಾಮ ವಾಸ್ತವ್ಯ ತಂಡವನ್ನು ಗ್ರಾಮಸ್ಥರು ಆತ್ಮೀಯವಾಗಿ ಸ್ವಾಗತಿಸಿದರು. ಅವರೆದುರು ಗ್ರಾಮದ ಸ್ಥಿತಿಗತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ಏನಿದು ಗ್ರಾಮ ವಾಸ್ತವ್ಯ: ವಕೀಲ ಹಾಗೂ ಸಾಹಿತಿ ವಿಜಯ ಅಮೃತರಾಜ್‌ ಅವರ ನೇತೃತ್ವದಲ್ಲಿ ನಡೆಯುವ ಗ್ರಾಮ ವಾಸ್ತವ್ಯದ ಮೂಲ ಉದ್ದೇಶ ಜಿಲ್ಲೆಯ ಗ್ರಾಮಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮಸ್ಯೆ ಅರಿಯುವುದು. ಗ್ರಾಮಸ್ಥರಿಂದ ಮಾಹಿತಿ ಪಡೆದು, ಖುದ್ದು ಪರಿಶೀಲಿಸಿದ ಬಳಿಕ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸುವುದು. ಸಮಸ್ಯೆ ಪರಿಹರಿಸುವಂತೆ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಕೋರುವುದು.

ADVERTISEMENT

‘ಪ್ರತಿ ಎರಡನೇ ಶನಿವಾರ ಜಿಲ್ಲೆಯ ಒಂದು ಗ್ರಾಮವನ್ನು ಆಯ್ಕೆ ಮಾಡಿಕೊಂಡು ಸಮಾನ ಮನಸ್ಕ ಸಾಹಿತಿಗಳು ಮತ್ತು ಕವಿಗಳ‌ ಜೊತೆ ಬಸ್‌ ಮೂಲಕ ಗ್ರಾಮಗಳಿಗೆ ತೆರಳುತ್ತೇವೆ.

ಗ್ರಾಮಸ್ಥರೊಂದಿಗೆ ಸಭೆ ನಡೆಸಿ, ಖುದ್ದು ಸ್ಥಿತಿಗತಿ ಅರಿಯುತ್ತೇವೆ.ರಾತ್ರಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಮಾಡಿ, ಭಾನುವಾರ ಗ್ರಾಮದ ಹಿರಿಯರು, ಮುಖಂಡರ ಜೊತೆ ಸಭೆ ನಡೆಸುತ್ತೇವೆ. ಮುಂದಿನ ಕ್ರಮಕ್ಕೆ ಮುಂದಾಗುತ್ತೇವೆ’ ಎಂದು ವಿಜಯ ಅಮೃತರಾಜ್ ತಿಳಿಸಿದರು.

ಗ್ರಾಮ ವಾಸ್ತವ್ಯಕ್ಕೆ ಮಹಾಂತೇಶ ಮಲ್ಲನಗೌಡರ, ಎ.ಎಂ.ಮದರಿ, ಸಾಹಿತಿ ಸಾವಿತ್ರಿ ಸೇರಿ ಎಲ್ಲ ಜಿಲ್ಲೆಯ ಹಿರಿಯ ಸಾಹಿತಿಗಳಿಂದ ಬೆಂಬಲ ವ್ಯಕ್ತವಾಗಿದೆ.ಯುವ ಸಾಹಿತಿಗಳಾದ ಮಂಜುನಾಥ, ಮುಮ್ತಾಜ್‌ ಬೇಗಂ, ಬಸವರಾಜ್‌ ಸಂಕನೂರು, ಯಾರ್ಕರ್‌ ಮಹೇಶ, ಬಸವರಾಜ್‌ ಮರದೂರು ಗ್ರಾಮ ವಾಸ್ತವ್ಯದಲ್ಲಿ ಪಾಲ್ಗೊಂಡಿದ್ದಾರೆ’ ಎಂದರು.

‘ಚಾಮಲಾಪುರದಲ್ಲಿ ಹಿರಿಯರ ಪಿಂಚಣಿ, ಆರೋಗ್ಯ ಹಾಗೂ ಶೌಚಾಲಯ ಸಮಸ್ಯೆಯಿದೆ. ಇವುಗಳನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದೇವೆ. ಸಮಸ್ಯೆ ಪರಿಹರಿಸುವ ಕುರಿತು ಅವರಿಂದ ಭರವಸೆ ಸಿಕ್ಕಿದೆ’ ಎಂದರು.

ಎರಡನೇ ಗ್ರಾಮವಾಸ್ತವ್ಯ ತಾಲ್ಲೂಕಿನ ಬುಡಶಟ್ನಾಳ ಗ್ರಾಮದಲ್ಲಿ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಮೂಲಕವು ಗ್ರಾಮ ವಾಸ್ತವ್ಯದ ಕುರಿತು ಪ್ರಚಾರ ಮಾಡಲಾಗುತ್ತಿದೆ’ ಎಂದರು.

ಆಸಕ್ತರು ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ:99458 73626.

**

ಗ್ರಾಮ ವಾಸ್ತವ್ಯದ ಮೂಲಕ ಗ್ರಾಮಸ್ಥರ ಬದುಕಿಗೆ ಮುಖಾಮುಖಿಯಾಗುವ ಮೂಲಕ ಬದುಕನ್ನು ಸಾರ್ಥಕ ಪಡಿಸಿಕೊಳ್ಳುವ ಉದ್ದೇಶವಿದೆ.
- ವಿಜಯ ಅಮೃತರಾಜ್, ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.