ADVERTISEMENT

ಪಿಡಬ್ಲ್ಯೂಡಿಗೆ ಅನುದಾನ: ಬಿಜೆಪಿ ಕೋಪ

ಸಭಾತ್ಯಾಗದ ಮಧ್ಯೆ ಪೂರಕ ಅಂದಾಜಿಗೆ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 18:53 IST
Last Updated 18 ಡಿಸೆಂಬರ್ 2018, 18:53 IST

ಬೆಳಗಾವಿ: ಮೈತ್ರಿ ಸರ್ಕಾರದ ಪೂರಕ ಅಂದಾಜಿನಲ್ಲಿ (ಮೊದಲನೇ ಕಂತು) ಲೋಕೋಪಯೋಗಿ ಇಲಾಖೆಗೆ ₹1900 ಕೋಟಿ ಹೆಚ್ಚುವರಿ ಅನುದಾನ ನೀಡಿರುವ ಬಗ್ಗೆ ಬಿಜೆಪಿ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಬಿಜೆಪಿ ಸದಸ್ಯರ ಸಭಾತ್ಯಾಗದ ಮಧ್ಯೆ ಪೂರಕ ಅಂದಾಜಿಗೆ ಅನುಮೋದನೆ ನೀಡಲಾಯಿತು.

ಚರ್ಚೆ ವೇಳೆ ಮಾತನಾಡಿದ ಬಿಜೆಪಿಯ ಜೆ.ಸಿ.ಮಾಧುಸ್ವಾಮಿ, ’ತುರ್ತು ಕಾರಣ ಇಲ್ಲದೇ ಇದ್ದರೂ ಪೂರಕ ಅಂದಾಜಿನಲ್ಲಿ ₹6,900 ಕೋಟಿ ಮೊತ್ತ ಕೋರಲಾಗಿದೆ. ಪ್ರತಿ ಇಲಾಖೆಯೂ ಹೆಚ್ಚುವರಿ ಅನುದಾನ ಕೋರಿದೆ. ಲೋಕೋಪಯೋಗಿ ಇಲಾಖೆಗೆ ₹1,900 ಕೋಟಿ ನಿಗದಿಪಡಿಸಲಾಗಿದೆ. ಹಳೆ ಬಿಲ್‌ ಪಾವತಿಗೆ ₹1,700 ಕೋಟಿ ಕೋರಲಾಗಿದೆ. ಇದಕ್ಕೆಲ್ಲ ಎಲ್ಲಿಂದ ಸಂಪನ್ಮೂಲ ಕ್ರೋಡೀ
ಕರಣ ಮಾಡುತ್ತೀರಿ‘ ಎಂದು ಪ್ರಶ್ನಿಸಿದರು.

‘ಟೆಲಿಫೋನ್‌ ಬಿಲ್‌ಗಳ ಪಾವತಿಗಾಗಿ ₹75 ಲಕ್ಷ ಕೇಳಲಾಗಿದೆ. ಪ್ರವಾಹದಂತಹ ತುರ್ತು ಪರಿಸ್ಥಿತಿಗಳ ನಿಭಾಯಿಸಲು ಪೂರಕ ಅಂದಾಜಿನಲ್ಲಿ ಅನುದಾನ ಕೇಳುವುದು ಸಹಜ. ಆದರೆ, ಇಲ್ಲಿ ಹಾಗಾಗಿಲ್ಲ. ಇದು ಅನೈತಿಕ‘ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ, ’ಎಲ್ಲದಕ್ಕೂ ಲೆಕ್ಕ ಕೊಡುತ್ತೇನೆ. ಈ ಹಿಂದೆ ಯಾರೆಲ್ಲ ಅನುದಾನ ಕೋರಿದ್ದರು ಎಂಬುದು ಗೊತ್ತಿದೆ. ಈ ಹಿಂದೆ ಬಾಕಿ ಬಿಲ್‌ಗಳು ಎಷ್ಟಿದ್ದವು ಎಂಬ ಕುರಿತು ಚರ್ಚೆ ನಡೆಯಲಿ‘ ಎಂದು ತಿರುಗೇಟು ನೀಡಿದರು.

ಬಸವರಾಜ ಬೊಮ್ಮಾಯಿ, ’ಫೆಬ್ರುವರಿಯಲ್ಲಿ ಸಿದ್ದರಾಮಯ್ಯ ಬಜೆಟ್‌ ಮಂಡಿಸಿದ್ದರು. ಜುಲೈನಲ್ಲಿ ಕುಮಾರಸ್ವಾಮಿ ಅವರು ₹2.18 ಲಕ್ಷ ಕೋಟಿಯ ಮತ್ತೊಂದು ಬಜೆಟ್‌ ಮಂಡನೆ ಮಾಡಿದ್ದರು. ಅದರ ಶೇ 45 ಅನುದಾನ ಖರ್ಚಾಗಿಲ್ಲ. ಈಗ ಮತ್ತೆ ಹಣ ಕೋರಿರುವುದು ಏಕೆ‘ ಎಂದು ಪ್ರಶ್ನಿಸಿದರು.

‘ಎಲ್ಲ ಇಲಾಖೆಗಳು ಹೆಚ್ಚುವರಿ ಅನುದಾನ ಕೋರಿವೆ. ಅನಗತ್ಯ ವೆಚ್ಚದಲ್ಲಿ ನಾವ್ಯಾಕೆ ಭಾಗಿದಾರರು ಆಗಬೇಕು ಎಂದೂ ಕೇಳಿದರು. ಇದುವರೆಗೆ ವಿತ್ತೀಯ ಶಿಸ್ತು ಕಾಪಾಡಿಕೊಂಡು ಬರಲಾಗಿದೆ. ಈಗಿನ ಬೇಡಿಕೆಯಿಂದ ಅದಕ್ಕೆ ಧಕ್ಕೆ ಬರಲಿದೆ’ ಎಂದೂ ಎಚ್ಚರಿಸಿದರು.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ’2006ರಲ್ಲಿ ನನ್ನ ಪಕ್ಕದಲ್ಲಿ ಕುಳಿತಿದ್ದ ಹಣಕಾಸು ಸಚಿವರು ಕಿಸೆಯಲ್ಲಿದ್ದ ಚೀಟಿ ತೆಗೆದು ಹೆಚ್ಚುವರಿ ವಿಷಯಗಳನ್ನು ಸೇರಿಸಿದ್ದರು. ಆಗ ಮೊದಲ ಸಾಲಿನಲ್ಲಿದ್ದ ಮಾಧುಸ್ವಾಮಿ ಅವರು ಚಕಾರ ಎತ್ತಿರಲಿಲ್ಲ‘ ಎಂದು ವ್ಯಂಗ್ಯವಾಡಿದರು. ಈ ಮಾತಿನಿಂದ ಬಿಜೆಪಿ ಸದಸ್ಯರು ಕೆರಳಿದರು. ಬಿಜೆಪಿ ಹಾಗೂ ಆಡಳಿತ ಪಕ್ಷದ ಸದಸ್ಯರ ನಡುವೆ ಜಟಾಪಟಿ ನಡೆಯಿತು.

ಲೋಕೋಪಯೋಗಿ ಇಲಾಖೆಗೆ ಹೆಚ್ಚುವರಿ ಅನುದಾನ ನೀಡಿದ್ದು ಏಕೆ ಎಂದು ಬಿಜೆಪಿಯ ಎಸ್.ಎ.ರಾಮದಾಸ್‌ ತಗಾದೆ ಎತ್ತಿದರು. ’ನಾನು ಸಂಘ ಸಂಸ್ಥೆಗಳಿಗೆ ಅನುದಾನ ನೀಡಿಲ್ಲ. ಇಲಾಖೆಗಳಿಗೆ ಅನುದಾನ ಹಂಚಿದ್ದೇನೆ‘ ಎಂದು ಕುಮಾರಸ್ವಾಮಿ ಸಮರ್ಥಿಸಿಕೊಂಡರು. ಮುಖ್ಯಮಂತ್ರಿ ಸಮರ್ಥನೆ ಸಮಾಧಾನಕರವಾಗಿಲ್ಲ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.