ADVERTISEMENT

ಕಾರಂತರು ಕಲ್ಪವೃಕ್ಷವಾಗಿದ್ದರು: ತಂದೆ ಜತೆಗಿನ ಒಡನಾಟ ಬಿಚ್ಚಿಟ್ಟ ಮಕ್ಕಳು

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2021, 21:25 IST
Last Updated 8 ಅಕ್ಟೋಬರ್ 2021, 21:25 IST
ಕೆ. ಶಿವರಾಮ ಕಾರಂತ ಅವರ ಜೀವನ ಚರಿತ್ರೆ ಕುರಿತು ಅವರ ಮಕ್ಕಳು ಬರೆದಿರುವ 'ಗ್ರೋಯಿಂಗ್ ಅಪ್‌ ಕಾರಂತ' ಕೃತಿಯ ಬಿಡುಗಡೆ ಕಾರ್ಯಕ್ರಮದಲ್ಲಿ (ಎಡದಿಂದ) ಪತ್ರಕರ್ತ ಸುಗತ ಶ್ರೀನಿವಾಸರಾಜು, ಲೇಖಕಿ ಶೋಭಾ ನಾರಾಯಣ್, ಕೃತಿ ರಚಿಸಿರುವ ಕ್ಷಮಾ ರಾವ್, ಮಾಳವಿಕಾ ಕಪೂರ್, ಉಲ್ಲಾಸ್ ಕಾರಂತ್ ಹಾಗೂ ಚಿರಂಜೀವಿ ಸಿಂಗ್, ವಿವೇಕ್ ಶಾನಭಾಗ್ ಮತ್ತು ಇತಿಹಾಸಕಾರ ರಾಮಚಂದ್ರ ಗುಹಾ ಇದ್ದರು -ಪ್ರಜಾವಾಣಿ ಚಿತ್ರ
ಕೆ. ಶಿವರಾಮ ಕಾರಂತ ಅವರ ಜೀವನ ಚರಿತ್ರೆ ಕುರಿತು ಅವರ ಮಕ್ಕಳು ಬರೆದಿರುವ 'ಗ್ರೋಯಿಂಗ್ ಅಪ್‌ ಕಾರಂತ' ಕೃತಿಯ ಬಿಡುಗಡೆ ಕಾರ್ಯಕ್ರಮದಲ್ಲಿ (ಎಡದಿಂದ) ಪತ್ರಕರ್ತ ಸುಗತ ಶ್ರೀನಿವಾಸರಾಜು, ಲೇಖಕಿ ಶೋಭಾ ನಾರಾಯಣ್, ಕೃತಿ ರಚಿಸಿರುವ ಕ್ಷಮಾ ರಾವ್, ಮಾಳವಿಕಾ ಕಪೂರ್, ಉಲ್ಲಾಸ್ ಕಾರಂತ್ ಹಾಗೂ ಚಿರಂಜೀವಿ ಸಿಂಗ್, ವಿವೇಕ್ ಶಾನಭಾಗ್ ಮತ್ತು ಇತಿಹಾಸಕಾರ ರಾಮಚಂದ್ರ ಗುಹಾ ಇದ್ದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಶಿವರಾಮ ಕಾರಂತರು ಎಂದಿಗೂ ಆಲದ ಮರವಾಗಲಿಲ್ಲ. ಬದಲಾಗಿ ಕಲ್ಪವೃಕ್ಷವಾಗಿದ್ದರು. ಮಕ್ಕಳನ್ನು ನಿಯಂತ್ರಿಸುವ ಪ್ರಯತ್ನ ಮಾಡಲಿಲ್ಲ’

‘ಕಡಲ ತೀರದ ಭಾರ್ಗವ’ ಡಾ.ಕೆ. ಶಿವರಾಮ ಕಾರಂತ ಅವರ ಜತೆಗಿನ ಆತ್ಮೀಯ ಒಡನಾಟವನ್ನು ಮಕ್ಕಳು ಹಂಚಿಕೊಂಡಿದ್ದು ಹೀಗೆ.

ಶಿವರಾಮ ಕಾರಂತ ಅವರ ಜೀವನ ಚರಿತ್ರೆ ಕುರಿತು ಅವರ ಮಕ್ಕಳಾದ ಪರಿಸರ ತಜ್ಞ ಉಲ್ಲಾಸ ಕಾರಂತ, ಮಾಳವಿಕಾ ಕಪೂರ್ ಹಾಗೂ ಕ್ಷಮಾ ರಾವ್‌ ಬರೆದಿರುವ ‘ಗ್ರೋಯಿಂಗ್‌ ಅಪ್‌ ಕಾರಂತ’ ಕೃತಿಗೆ ಸಂಬಂಧಿಸಿದ ವಿಶೇಷ ಕಾರ್ಯಕ್ರಮದಲ್ಲಿ ಶಿವರಾಮ ಕಾರಂತ ಅವರ ಕುಟುಂಬ ಜೀವನವನ್ನು ಅನಾವರಣಗೊಳಿಸುವ ಪ್ರಯತ್ನ ಮಾಡಲಾಯಿತು.

ADVERTISEMENT

ಕೃತಿ ಕುರಿತು ಮಾತನಾಡಿದ ಪತ್ರಕರ್ತ ಸುಗತ ಶ್ರೀನಿವಾಸ ರಾಜು ಅವರು, ‘ಕೃತಿಯಲ್ಲಿ ಮಕ್ಕಳು ತಮ್ಮ ತಾಯಿ ಲೀಲಾ ಕಾರಂತ ಅವರ ಬಗ್ಗೆ ಹೆಚ್ಚು ಬರೆದಿದ್ದಾರೆ. ತಾಯಿಯ ನೋವು, ತ್ಯಾಗ, ಬದುಕಿನಲ್ಲಿ ನಡೆಸಿದ ಹೋರಾಟದ ಬಗ್ಗೆ ಪ್ರಸ್ತಾಪಿಸಲಾಗಿದೆ’ ಎಂದು ವಿಶ್ಲೇಷಿಸಿದರು.

‘ವ್ಯಕ್ತಿಗತ ಜೀವನ ಆಧಾರಿತವಾಗಿರುವ ಈ ಕೃತಿಯು ವಾಸ್ತವ ಅಂಶಗಳನ್ನು ಒಳಗೊಂಡಿದೆ. ತಂದೆ, ತಾಯಿ ಬಗ್ಗೆ ಬರೆಯುವುದು ಕಷ್ಟದ ಕೆಲಸ. ಆದರೆ, ಇಲ್ಲಿ ಮೂವರು ಒಮ್ಮತದಿಂದ ಬರೆದಿದ್ದಾರೆ. ತಂದೆಗೆ ಹೊರ ಜಗತ್ತಿನಲ್ಲಿ ಒಂದು ಮುಖ ಇದ್ದರೆ, ಮನೆಯಲ್ಲಿ ಇನ್ನೊಂದು ಮುಖ ಇರುತ್ತದೆ. ಮಕ್ಕಳು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಸಹಜ. ತಂದೆ ಕುರಿತು ಕೃತಿಗಳನ್ನು ರಚಿಸುವ ಕುರಿತು ಕನ್ನಡದಲ್ಲಿ ಸಣ್ಣ ಪರಂಪರೆ ಇದೆ’ ಎಂದು ವಿವರಿಸಿದರು.

‘ಕುವೆಂಪು, ದ.ರಾ.ಬೇಂದ್ರೆ, ಶಿವರಾಮ ಕಾರಂತ ಅವರ ಜಗತ್ತುಗಳು ವಿಭಿನ್ನವಾಗಿದ್ದವು. ಆದರೆ, ಅದ್ಭುತವಾಗಿದ್ದವು. ಕಾರಂತರ ರಾಜಕೀಯ ನಿಲುವುಗಳು ವಿಭಿನ್ನವಾಗಿದ್ದವು. ಅವರು ಕಾಂಗ್ರೆಸ್‌ ವಿರೋಧಿಯಾಗಿದ್ದರು’ ಎಂದು ಹೇಳಿದರು.

ಕಾದಂಬರಿಕಾರ ವಿವೇಕ ಶಾನಭಾಗ ಮಾತನಾಡಿ, ‘ಶಿವರಾಮ ಕಾರಂತರ ಬಗ್ಗೆ ಏನೇ ಬರೆದರೂ ಸಾಂಸ್ಕೃತಿಕ ಇತಿಹಾಸವನ್ನು ಪ್ರತಿಬಿಂಬಿಸುತ್ತದೆ. ಕಾರಂತ ಅವರು ಯಾವುದೇ ವಿಷಯವನ್ನು ವಿವರವಾಗಿ ವಿಶ್ಲೇಷಿಸುತ್ತಿದ್ದರು’ ಎಂದು ಹೇಳಿದರು.

ಉಲ್ಲಾಸ್‌ ಕಾರಂತ ಮಾತನಾಡಿ, ‘ಮಾಜಿ ಐಎಎಸ್‌ ಅಧಿಕಾರಿ ಚಿರಂಜೀವಿ ಸಿಂಗ್‌ ಅವರು ನಮಗೆ ಒತ್ತಾಯಿಸಿ ಪುಸ್ತಕ ಬರೆಸಿದ್ದಾರೆ. ಹತ್ತು ವರ್ಷಗಳಿಂದ ಈ ಕೃತಿ ಬರೆಯುವ ಕಾರ್ಯ ಆರಂಭವಾಯಿತಾದರೂ ಕಳೆದ ಒಂದು ವರ್ಷದಲ್ಲಿ ತ್ವರಿತಗತಿಯಲ್ಲಿ ನಡೆಯಿತು. ನಂತರ, ಮೂರು ತಿಂಗಳಲ್ಲಿ ಈ ಕೃತಿ ರೂಪುಗೊಂಡಿತು. ನಾವು ಪ್ರತ್ಯೇಕವಾಗಿಯೇ ನಮ್ಮ ಅನುಭವಗಳನ್ನು ಬರೆದಿದ್ದೇವೆ. ಆದರೆ, ವಿಷಯಗಳು ಪುನರಾವರ್ತನೆಯಾದಾಗ ಚರ್ಚಿಸಿದ್ದೇವೆ’ ಎಂದು ವಿವರಿಸಿದರು.

‘ನೀನು ನಂಬುವ ವಿಷಯಕ್ಕೆ ದೃಢವಾಗಿ ನಿಲ್ಲು ಎಂದು ನನ್ನ ತಂದೆ ಹೇಳಿದ್ದರು. ಇಂತಹ ಎರಡು–ಮೂರು ಸಂಗತಿಗಳನ್ನು ತಂದೆಯಿಂದ ಕಲಿತಿರುವೆ’ ಎಂದು ಹೇಳಿದರು.

‘ಹಲವು ತಿಂಗಳ ಕಾಲ ವಿಷಯಗಳನ್ನು ಸಂಗ್ರಹಿಸಿ ನೆನಪಿನಲ್ಲಿಟ್ಟುಕೊಳ್ಳುತ್ತಿದ್ದ ನನ್ನ ತಂದೆ, ಕೇವಲ 8ರಿಂದ 10 ದಿನಗಳಲ್ಲಿ ಕಾದಂಬರಿ ಬರೆಯುತ್ತಿದ್ದರು. ಅವರಲ್ಲಿ ಎಂದಿಗೂ ಆತ್ಮವಿಶ್ವಾಸದ ಕೊರತೆಯಾಗಲಿಲ್ಲ’ ಎಂದು ತಂದೆಯ ವ್ಯಕ್ತಿತ್ವವನ್ನು ವಿವರಿಸಿದರು.

ಮಾಳವಿಕಾ ಕಪೂರ್‌ ಮಾತನಾಡಿ, ‘ಶಿವರಾಮ ಕಾರಂತ ಅವರಿಗೆ ತಾಯಿ ಲೀಲಾ ಅವರು ಎಲ್ಲ ರೀತಿಯ ಬೆಂಬಲ ನೀಡಿದ್ದರು. ಹಣಕಾಸಿನ ಸಮಸ್ಯೆ ಮತ್ತು ಬದುಕಿನಲ್ಲಿ ಎದುರಾದ ಹತ್ತು ಹಲವು ಸವಾಲುಗಳನ್ನು ಸಮರ್ಥವಾಗಿ ಎದುರಿಸಿದ್ದರು’ ಎಂದು ಹೇಳಿದರು.

‘ಖ್ಯಾತ ವ್ಯಕ್ತಿಯ ಬಗ್ಗೆ ಪುಸ್ತಕ ಬರೆಯುವುದು ಕಠಿಣ ಅಥವಾ ಸವಾಲು ಆಗಿರಲಿಲ್ಲ. ತಂದೆಯ ವಿಷಯದಲ್ಲಿ ನಾವು ಮುಕ್ತವಾಗಿದ್ದೇವೆ. ಅವರಿಗೆ ತಪ್ಪುಗಳನ್ನು ಸಹ ಹೇಳುತ್ತಿದ್ದೇವು’ ಎಂದು ಹೇಳಿದರು.

ಶಿವರಾಮ ಕಾರಂತ ಜತೆಗಿನ ಒಡನಾಟವನ್ನು ಸ್ಮರಿಸಿದ ಮಾಜಿ ಐಎಎಸ್‌ ಅಧಿಕಾರಿ ಚಿರಂಜೀವಿ ಸಿಂಗ್‌, ‘ಕರ್ನಾಟಕದ ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿರುವ ಶಿವರಾಮ ಕಾರಂತ ಅವರು, ಭಾಷೆಯನ್ನು ವಿಸ್ತರಿಸುವ ಕಾರ್ಯದಲ್ಲೂ ಅಪಾರ ಕೊಡುಗೆ ನೀಡಿದ್ದಾರೆ. ಕೃತಿಯು ಸುಂದರವಾಗಿ ಮೂಡಿ ಬಂದಿದೆ’ ಎಂದು ಹೇಳಿದರು.

ಕ್ಷಮಾ ರಾವ್‌, ಲೇಖಕಿ ಶೋಭಾ ನಾರಾಯಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.