ADVERTISEMENT

ಪ್ರೀತಿಯಲ್ಲಿ ದೇವರ ಹುಡುಕಿದ ಜಿಎಸ್‌ಎಸ್‌: ಎಸ್‌.ಜಿ. ಸಿದ್ಧರಾಮಯ್ಯ ಅಭಿಮತ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2020, 19:16 IST
Last Updated 23 ಡಿಸೆಂಬರ್ 2020, 19:16 IST
ಜಿ.ಎಸ್. ಶಿವರುದ್ರಪ್ಪ
ಜಿ.ಎಸ್. ಶಿವರುದ್ರಪ್ಪ   

ಬೆಂಗಳೂರು: ‘ಜಿ.ಎಸ್‌.ಎಸ್ ಅವರು ಪ್ರೀತಿ–ಪ್ರೇಮಗಳನ್ನೇ ದೇವರು ಎಂದು ಹುಡುಕಿದರು. ಮನುಷ್ಯನ ಭಾವಸ್ಥಿತಿಯ ಒಳಗೆ ಬೆಳೆಯಬೇಕಾದ ಮಾನವೀಯತೆಯೇ ಅವರು ಕಂಡ ದೇವರು’ ಎಂದು ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಪ್ರತಿಷ್ಠಾನದ ಅಧ್ಯಕ್ಷ
ಪ್ರೊ.ಎಸ್‌.ಜಿ. ಸಿದ್ಧರಾಮಯ್ಯ ತಿಳಿಸಿದರು.

ಸಂಗೀತ ಧಾಮ ಹಾಗೂ ಜಿ.ಎಸ್. ಎಸ್‌ ಪ್ರತಿಷ್ಠಾನ ಜಂಟಿಯಾಗಿ ಆಯೋಜಿಸಿದ್ದ ‘ನೆನಪಿನಂಗಳದಲ್ಲಿ ಜಿ.ಎಸ್‌.ಎಸ್.’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈ ಕಾರ್ಯಕ್ರಮವು ‘ಪ್ರಜಾವಾಣಿ’ಯ ಫೇಸ್‌ಬುಕ್‌ ಪುಟದಲ್ಲಿ ನೇರ ಪ್ರಸಾರ ವಾಯಿತು.

‘ಪ್ರೇಮ ಮತ್ತು ಪ್ರೀತಿಯ ನಡುವಿನ ವ್ಯತ್ಯಾಸವು ಜಿಎಸ್‌ಎಸ್ ಅವರಿಗೆ ತಿಳಿದಿತ್ತು. ಅವರು ಪ್ರೀತಿಯ ಬಗ್ಗೆ ಪದ್ಯಗಳನ್ನು ಬರೆದರು. ಕನ್ನಡ ಕಟ್ಟಲು ತಮ್ಮನ್ನು ಸಮರ್ಪಿಸಿಕೊಂಡ ಅವರು, ಶ್ರೇಷ್ಠ ಅಧ್ಯಾಪಕರಾಗಿದ್ದರು. ಒಂದು ಗಂಟೆಯ ಪಾಠಕ್ಕೆ ಅವರು ನಡೆಸುವ ಸಿದ್ಧತೆ ಎಲ್ಲರಿಗೂ ಮಾರ್ಗದರ್ಶಿಯಾಗಿತ್ತು’ ಎಂದು ಹೇಳಿದರು.

ADVERTISEMENT

ಕವಿ ಎಚ್‌.ಎಸ್. ವೆಂಕಟೇಶಮೂರ್ತಿ ಮಾತನಾಡಿ, ‘ಶಿವರುದ್ರಪ್ಪ ಅವರ ಹಾಡುಗಳು ನಮ್ಮನ್ನು ಕಾಡುತ್ತಲೇ ಇರುತ್ತವೆ. ಹಾಡಿದಾಗಲೆಲ್ಲ ಅವಕ್ಕೆ ಹೊಸ ಶಕ್ತಿ ಬರುತ್ತದೆ. ಜಿಎಸ್‌ಎಸ್ ಮೂಲಭೂತವಾಗಿ ಭಾವಗೀತಾತ್ಮಕ ಪ್ರತಿಭೆಯ ಕವಿ. ಅವರ ಜತೆಗಾರರಲ್ಲಿ ಅವರನ್ನು ಮೀರಿಸುವಂತೆ ಗೀತೆಗಳನ್ನು ಬರೆದವರು ವಿರಳ.ಪ್ರಕೃತಿಯನ್ನು ಕುವೆಂಪು ರೀತಿಯಲ್ಲಿ ಆರಾಧನೆಯನ್ನೂ ಮಾಡಲಿಲ್ಲ. ಆದರೆ, ಸೃಷ್ಟಿಯ ವಿಸ್ಮಯವನ್ನು ಆಶ್ಚರ್ಯದಿಂದ ನೋಡಿದರು’ ಎಂದರು.

ಜಿ.ಎಸ್.ಎಸ್. ವಿಶ್ವಸ್ಥ ಮಂಡಳಿಯ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ, ‘ಕಾವ್ಯ ಹಾಗೂ ಪ್ರತಿಭೆಯನ್ನು ಬೆಳೆಸುವ ಔದಾರ್ಯ ಬಹಳಷ್ಟು ಮಂದಿಯಲ್ಲಿ ಇರುವುದಿಲ್ಲ. ಆದರೆ, ಶಿವರುದ್ರಪ್ಪ ಅವರು ಕಾವ್ಯ ಜಗತ್ತಿನ ಯುವ ಪ್ರತಿಭೆಗಳನ್ನು ಗರುತಿಸಿ, ಪ್ರೋತ್ಸಾಹಿಸುತ್ತಿದ್ದರು. ಅವರಿಂದಾಗಿ ಸುಗಮ ಸಂಗೀತ ಜಗತ್ತಿಗೆ ವ್ಯಾಪಿಸಿಕೊಂಡಿದೆ’ ಎಂದರು.

ಕಾರ್ಯಕ್ರಮದಲ್ಲಿ ಮೃತ್ಯುಂಜಯ ದೊಡ್ಡವಾಡ, ಆನಂದ ಮಾದಲಗೆರೆ, ವೆಂಕಟೇಶ ಮೂರ್ತಿ ಶಿರೂರು, ಅಂಬರೀಶ ಹೂಗಾರ್, ಸವಿತಾ ಗಣೇಶ್ ಪ್ರಸಾದ್, ಸುಮಾ ಕೃಷ್ಣಮೂರ್ತಿ, ಭವ್ಯಾ ಹೆಬ್ಬಾಳೆ, ಅಪೇಕ್ಷಾ ಸುರೇಶ್ ಹಾಗೂ ದೀಕ್ಷಾ ಅವರು ಜಿ.ಎಸ್. ಶಿವರುದ್ರಪ್ಪ ಅವರು ರಚಿಸಿದ ಗೀತೆಗಳನ್ನು ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.